ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಪೌರಾಯುಕ್ತ ಸೇರಿ 8 ನೌಕರರ ಮೇಲೆ ಪ್ರಕರಣ

ಸಿಂಧನೂರು ನಗರಸಭೆ ಕಚೇರಿಗೆ ಎಸಿಬಿ ಅಧಿಕಾರಿಗಳಿಂದ ದಿಢೀರ್ ದಾಳಿ
Last Updated 30 ಜೂನ್ 2020, 15:17 IST
ಅಕ್ಷರ ಗಾತ್ರ

ಸಿಂಧನೂರು: ಪ್ರತಿ ಕೆಲಸಮಾಡಿಕೊಡಲುಸಿಬ್ಬಂದಿ ಹಾಗೂ ಅಧಿಕಾರಿಗಳು ಲಂಚದ ಕೇಳುತ್ತಿದ್ದಾರೆ ಹಾಗೂ ಕಡತಗಳನ್ನು ಅನಗತ್ಯ ವಿಳಂಬ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ನಿರಂತರವಾಗಿ ನೀಡಿದ ದೂರುಗಳನ್ನು ಆಧರಿಸಿ ರಾಯಚೂರು ಎಸಿಬಿ ಅಧಿಕಾರಿಗಳ ತಂಡವು ನಗರಸಭೆಗೆ ಮಂಗಳವಾರ ದಿಢೀರ್‌ ದಾಳಿ ನಡೆಸಿದರು.

ಆರು ತಾಸು ಕಚೇರಿ ಕಡತಗಳನ್ನು ಪರಿಶೀಲಿಸಿದ ತಂಡವು ಲೆಕ್ಕವಿಲ್ಲದ ₹45 ಸಾವಿರ ನಗದು ಮತ್ತು ಕೆಲವು ಕಡತಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪೌರಾಯುಕ್ತ ವಿರೂಪಾಕ್ಷ ಮೂರ್ತಿ ಸೇರಿ ಎಂಟು ನೌಕರರ ವಿರುದ್ಧ ಉದ್ದೇಶಪೂರ್ವಕ ಕಡತವಿಳಂಬ ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಾಮಗಾರಿ ಮುಗಿದಿದ್ದರೂ ಚೆಕ್ ಬರೆದಿಲ್ಲ. ಬಡಾವಣೆ ನಿರ್ಮಾಣ ಸಂಬಂಧದ 14 ಕಡತಗಳನ್ನು ವಿನಾಕಾರಣ ಬಾಕಿ ಉಳಿಸಿರುವುದು. 2018 ರಿಂದಲೂ ಅನವಶ್ಯಕ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಕಡತಗಳನ್ನು ವಿಲೇವಾರಿ ಮಾಡಿಲ್ಲ. ಸಕಾಲದಲ್ಲಿ 20 ಕ್ಕಿಂತ ಹೆಚ್ಚು ಅರ್ಜಿಗಳು 7 ದಿನಗಳಲ್ಲಿ ಮುಗಿಸಬೇಕಾಗಿದ್ದು, ಆದರೆ ತಿಂಗಳು ಮುಗಿದಿದ್ದರೂ ಮಾಡದೆ ಬಾಕಿ ಇಟ್ಟುಕೊಂಡಿರುವುದನ್ನು ಎಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಸೋಲಾರ್ ಪ್ಯಾನಲ್‌ಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡದ ಆರೋಪ, ಟೆಂಡರ್ ಪ್ರಕ್ರಿಯೆಗಳನ್ನು ವಾಮಮಾರ್ಗದ ಮೂಲಕ ಕೋಟಿಗಟ್ಟಲೆ ಹಣ ಗುಳುಂ ಮಾಡಿದ್ದಾರೆ ಎನ್ನುವ ಆರೋಪ, ವರ್ಗಾವಣೆ, ಖಾತಾ ಉತಾರ, ನಳದ ಬಿಲ್, ಕಟ್ಟಡ ಪರವಾನಿಗೆ, ತೆರಿಗೆ ವಸೂಲಿಯಲ್ಲಿ ಅವ್ಯವಹಾರ, ನಿಗದಿತ ಸಮಯದೊಳಗೆ ಸಾರ್ವಜನಿಕರ ಕೆಲಸಗಳನ್ನು ಮಾಡದೆ ಹಣಕ್ಕಾಗಿ ವಿಳಂಬ ನೀತಿ ಅನುಸರಿಸುತ್ತಿರುವ ಕುರಿತು ತಂಡವು ಅಧಿಕಾರಿಗಳ ವಿಚಾರಣೆ ನಡೆಸಿದೆ.

ಎಸಿಬಿ ಡಿವೈಎಸ್‍ಪಿ ಸಂತೋಷ ಬನ್ನಟ್ಟಿ, ಇನ್‌ಸ್ಪೆಕ್ಟರುಗಳಾದ ಬಾಳನಗೌಡ, ಹನುಮಂತ ಸಣ್ಣಮನಿ, 10 ಮಂದಿ ಪಿಎಸ್‌ಐಗಳು ಸೇರಿ 40 ಸಿಬ್ಬಂದಿ ತಂಡವು ಮಧ್ಯಾಹ್ನ 12 ಗಂಟೆಗೆ ನಗರಸಭೆ ಪ್ರವೇಶಿಸಿ ಸಂಜೆ 6 ಗಂಟೆಯವರೆಗೂ ದಾಖಲಾತಿಗಳನ್ನು ಪರಿಶೀಲಿಸಿದರು.

ನಗರಸಭೆ ಕಚೇರಿಗೆ ಬಂದು ಕಚೇರಿಯ ಮುಖ್ಯದ್ವಾರ ಮತ್ತು ಗೇಟ್‍ಗೆ ಬೀಗ ಹಾಕಿ, ಅಧಿಕಾರಿಗಳು ಹಾಗೂ ಸಿಬ್ಬಂದಿ ಕೈಯಲ್ಲಿದ್ದ ಮೊಬೈಲ್‍ಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಸ್ವಿಚ್‍ಆಫ್ ಮಾಡಿ ತನಿಖೆ ಕೈಗೊಂಡಿದ್ದರು. ನಗರಸಭೆ ಕಚೇರಿ ಮುಂದೆ ಜನರು ಜಮಾಯಿಸಿದ್ದರು. ಪೊಲೀಸರು ಲಾಠಿ ಬೀಸಿ ಸಾರ್ವಜನಿಕರನ್ನು ಚದುರಿಸಿದರು.

‘ನಗರಸಭೆ ಕಚೇರಿಯ ಕಾರ್ಯಚಟುವಟಿಕೆಗೆ ಸಂಬಂಧಪಟ್ಟಂತೆ ಮತ್ತು ಸಾರ್ವಜನಿಕರ ಕೆಲಸಗಳಿಗೆ ಅನಗತ್ಯ ವಿಳಂಬ ಮಾಡಿದಲ್ಲಿ, ಹಣ ಅಪೇಕ್ಷಿಸಿದರೆ ಅಂತಹ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಎಸಿಬಿ ಅಧಿಕಾರಿಗಳಿಗೆ ದೂರು ನೀಡಬೇಕು’ ಎಂದು ಸರ್ಕಲ್ ಇನ್‌ಸ್ಪೆಕ್ಟರ್‌ ಬಾಳನಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT