ಭಾನುವಾರ, ಸೆಪ್ಟೆಂಬರ್ 22, 2019
23 °C
ಕಠಿಣ ಶಿಕ್ಷೆ ನೀಡಲು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ ಆಗ್ರಹ

ಪರೀಕ್ಷೆ ಅಕ್ರಮ ತನಿಖೆಗೆ ಒತ್ತಾಯ

Published:
Updated:
Prajavani

ರಾಯಚೂರು: ಗುಲಬರ್ಗಾ ವಿಶ್ವವಿದ್ಯಾಲಯದ ಬಿಕಾಂ ಎರಡನೇ ಸೆಮಿಸ್ಟರ್‌ ಪರೀಕ್ಷೆಯನ್ನು ಬಾಡಿಗೆ ಮನೆಯಲ್ಲಿ ಅಕ್ರಮವಾಗಿ ಬರೆಸಿದ ಘಟನೆಯನ್ನು ಖಂಡಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಅಕ್ರಮವಾಗಿ ಪರೀಕ್ಷೆ ಬರೆಸಿದ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು. ಈ ಕೃತ್ಯದಲ್ಲಿ ಭಾಗಿಯಾದವರಿಗೆ ಶಿಕ್ಷೆ ನೀಡಿ, ಪ್ರಾಮಾಣಿಕವಾಗಿ ಅಭ್ಯಾಸಮಾಡಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಬೇಕು ಎಂದು ಒತ್ತಾಯಿಸಿದರು.

ಈ ಘಟನೆ ಶಿಕ್ಷಣ ವ್ಯವಸ್ಥೆಯ ಅವನತಿಯನ್ನು ತೋರಿಸುತ್ತಿದೆ. ಶಿಕ್ಷಣ ವ್ಯವಸ್ಥೆ ಸಂಪೂರ್ಣ ಅಧೋಗತಿಗೆ ಇಳಿದಿರುವುದಕ್ಕೆ ಇದು ನಗ್ನ ಸಾಕ್ಷಿಯಾಗಿದೆ. ಸರಳವಾಗಿ ಹಣ ಮಾಡುವ ದಂಧೆಗೆ ಇಳಿದು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿ, ಬಲಿಪಶು ಮಾಡಿರುವುದು ಖಂಡನೀಯವಾಗಿದೆ. ವರ್ಷಗಟ್ಟಲೇ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಈ ಘಟನೆಯಿಂದ ಬೇಸರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ವಿಶ್ವವಿದ್ಯಾಲಯ ಕಠಿಣ ಕ್ರಮ ಜರುಗಿಸಬೇಕು. ಇಂತಹ ಕೃತ್ಯಗಳು ಮರುಕಳಿಸುತ್ತಿರುವುದರಿಂದ ವಿಶ್ವವಿದ್ಯಾಲದಯ ಆಡಳಿತದ ಬಗ್ಗೆಯೇ ಪ್ರಶ್ನೆ ಹುಟ್ಟು ಹಾಕಿದೆ. ಆದ್ದರಿಂದ ಈ ಘಟನೆಯನ್ನು ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಎಐಡಿಎಸ್‍ಒ ಜಿಲ್ಲಾ ಅಧ್ಯಕ್ಷ ಮಹೇಶ ಚೀಕಲಪರ್ವಿ, ಕಾರ್ಯದರ್ಶಿ ಪ್ರಮೋದ್ ಕುಮಾರ್, ಸದಸ್ಯರಾದ ಪೀರ್ ಸಾಬ್, ಮೌನೇಶ, ಹೇಮಂತ, ಮಲ್ಲನಗೌಡ, ಆಂಜನೇಯ, ಲಿಂಗರೆಡ್ಡಿ, ಅಮೋಘ, ಸುಮನ್, ಅಶೋಕ, ಮಲ್ಲಿಕಾರ್ಜುನ ಇದ್ದರು.

Post Comments (+)