ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ: ಲಾರಿ ಸಿಕ್ಕು ಹತ್ತು ದಿನವಾದರೂ ಕ್ರಮವಿಲ್ಲ

Published 3 ನವೆಂಬರ್ 2023, 16:06 IST
Last Updated 3 ನವೆಂಬರ್ 2023, 16:06 IST
ಅಕ್ಷರ ಗಾತ್ರ

ದೇವದುರ್ಗ: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಧಿಕಾರಿಗಳೇ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅ.24 ರಂದು ಪಟ್ಟಣದ ಎಪಿಎಂಸಿ ಗೋದಾಮು ಹತ್ತಿರ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು 50 ಕೆ.ಜಿಯ 502 ಚೀಲ ಅಕ್ಕಿ ತುಂಬಿದ ಲಾರಿಯನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದರು.

ಆ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ವಾಹನವನ್ನು ಜಪ್ತಿ ಮಾಡಿ ಆಹಾರ ಶಿರೆಸ್ತೇದಾರ್‌ಗೆ ಮಾಹಿತಿ ನೀಡಿದ್ದರು.

ಅಕ್ಕಿ ಆಮದು ಮತ್ತು ರಫ್ತಿನ ದಾಖಲೆಗಳನ್ನು ನೀಡಿ ವಾಹನವನ್ನು ತೆಗೆದುಕೊಂಡು ಹೋಗುವಂತೆ ಪಿಐ ಅಶೋಕ ಅಣ್ಣಪ್ಪ ಸದಲಗಿ ಪತ್ರದಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಶಿರೆಸ್ತೇದಾರ್ ಅಪ್ಪಯ್ಯ ಪರೀಶೀಲನೆ ನಡೆಸಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ರಾಜ್ಯವ್ಯಾಪ್ತಿ ಆದ್ಯತಾ ಪಡಿತರ ಫಲಾನುಭವಿಗಳಿಗೆ ಕೇಂದ್ರೀಯ ಭಂಡಾರಿ ಏಜೆನ್ಸಿಯಿಂದ ಸರಬರಾಜದ ಅಕ್ಕಿಯ ತಪಾಸಣೆ ಮಾಡಿ ವರದಿ ಸಲ್ಲಿಸುವಂತೆ ಜಿಲ್ಲಾ ಉಪನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಲಾರಿ ವಶಕ ಪೆಡೆದು 10 ದಿನ ಕಳೆದರೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಅಕ್ಕಿ ನಮ್ಮ ಇಲಾಖೆಗೆ ಸಂಬಂಧಟ್ಟಿ ಕೇಂದ್ರೀಯ ಭಂಡಾರಿ ಸಂಸ್ಥೆಯಿಂದ ನಮಗೆ ಬರಬೇಕಾದ ಪಡಿತರ. ವಶಕ್ಕೆ ಪಡೆದು ಅಕ್ಕಿಯನ್ನು ಗೋದಾಮಿನಲ್ಲಿ ದಾಸ್ತಾನು ಮಾಡಿ ತಪಾಸಣೆ ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸುತ್ತೇವೆ. ಅಲ್ಲಿಯವರೆಗೆ ಲಾರಿಯನ್ನು ಠಾಣೆಯಲ್ಲಿ ಇಟ್ಟುಕೊಳ್ಳಿ’ ಜಿಲ್ಲಾ ಉಪನಿರ್ದೇಶಕರು ದೇವದುರ್ಗ ಪೊಲೀಸ್ ಠಾಣೆ ಪಿಐ ಅವರಿಗೆ ಪತ್ರ ಪತ್ರ ಬರೆದಿದ್ದಾರೆ.

ಪ್ರಕರಣ ದಾಖಲಾಗದೆ ಅಕ್ಕಿ ಮತ್ತು ಲಾರಿಯನ್ನು ವಶಕ್ಕೆ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ. ಕೂಡಲೇ ನಿಮ್ಮ ದಾಖಲೆಗಳನ್ನು ಹಾಜರುಪಡಿಸಿ ಎಂದು ಜಿಲ್ಲಾ ಉಪನಿರ್ದೇಶಕ ಹಾಗೂ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಅವರಿಗೆ ಪಿಐ ಪತ್ರ ಬರೆದಿದ್ದಾರೆ.

‘ಅಕ್ಕಿ ನಮ್ಮ ಇಲಾಖೆಗೆ ಸಂಬಂಧಪಟ್ಟವು, ಆದರೆ ಲಾರಿ ನಿಯಮಗಳನ್ನು ಉಲ್ಲಂಘಿಸಿದೆ’ ಎಂದು ಜಿಲ್ಲಾ ಉಪನಿರ್ದೇಶಕ ಕೃಷ್ಣ ಶಾವಂತಗೇರಾ ಸಿಂಧನೂರ ಶಿರೆಸ್ತೇದಾರ್ ಆನಂದ ಮೋಹನ, ಲಿಂಗಸೂಗೂರು ನೀರಕ್ಷಕ ರಾಮಕೃಷ್ಣ, ದೇವದುರ್ಗ ಶಿರೆಸ್ತೇದಾರ್ ಅಪ್ಪಯ್ಯ ಹಿರೇಮಠ ಮತ್ತು ದೇವದುರ್ಗ ಕೆಎಫ್‌ಸಿಎಸ್‌ಸಿ ಗೋದಾಮು ವ್ಯವಸ್ಥಾಪಕ ಶಂಕರಗೌಡ ನೇತೃತ್ವದ ತಂಡ ರಚಿಸಿ ಆರೋಪದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ’ ತಿಳಿಸಿದ್ದಾರೆ.

‘ದೇವದುರ್ಗ ಗೋದಾಮು ವ್ಯವಸ್ಥಾಪಕ ಶಂಕರಗೌಡ ಅವರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಅವರನ್ನು ತನಿಖಾ ತಂಡದ ಸದಸ್ಯರನ್ನಾಗಿ ಮಾಡಿ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ಮಾಡುತ್ತಿದ್ದಾರೆ. ಅಂತರಜಿಲ್ಲಾ ತನಿಖೆ ತಂಡವನ್ನು ನೇಮಿಸಿ ಅಕ್ರಮ ಸಾಗಾಟಕ್ಕೆ ಯೋಜನೆ ರೂಪಿಸಿದ್ದ ಎಲ್ಲಾ ಅಧಿಕಾರಿಗಳನ್ನು ಸೇವೆಯಿಂದಲೇ ವಜಾ ಮಾಡಬೇಕು’ ಎನ್ನುತ್ತಾರೆ ವಕೀಲ ಮರಿಲಿಂಗಪ್ಪ ಕೋಳೂರ.

ಪ್ರಕರಣ ನಡೆದು 10 ದಿನ ಕಳೆದರೂ ಯಾವುದೇ ಪ್ರಕರಣ ದಾಖಲಾಗದೆ ಇರುವುದರ ಹಿಂದೆ ಜಿಲ್ಲೆಯ ಪೊಲೀಸರ ಮೇಲೆ ಹಾಗೂ ಆಹಾರ ಸಿಬ್ಬಂದಿ ಮೇಲೆ ಜಿಲ್ಲೆಯ ಕಾಂಗ್ರೆಸ್‌ನ ಪ್ರಭಾವಿ ಮುಖಂಡರ ಒತ್ತಡ ಇದೆ ಎಂದು ಗಂಭೀರ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದ್ದೆ.

ದೇವದುರ್ಗ ಪಟ್ಟಣದ ಪೋಲಿಸ್ ವಶಕ್ಕೆ ಪಡೆದು ಲಾರಿ.
ದೇವದುರ್ಗ ಪಟ್ಟಣದ ಪೋಲಿಸ್ ವಶಕ್ಕೆ ಪಡೆದು ಲಾರಿ.
ಪೋಲಿಸರು ವಶಕ್ಕೆ ಪಡೆದ ಲಾರಿಯಲ್ಲಿ ಇರುವ ಅಕ್ಕಿ ಚೀಲದ ಮೇಲೆ ಕೇಂದ್ರಿಯ ಬಂಡಾರಿ ಎಂದು ಹೆಸರು ಇರುವುದು.
ಪೋಲಿಸರು ವಶಕ್ಕೆ ಪಡೆದ ಲಾರಿಯಲ್ಲಿ ಇರುವ ಅಕ್ಕಿ ಚೀಲದ ಮೇಲೆ ಕೇಂದ್ರಿಯ ಬಂಡಾರಿ ಎಂದು ಹೆಸರು ಇರುವುದು.
ಡಿಸಿ ಎಸ್‌ಪಿ ಮತ್ತು ಉಪನಿರ್ದೇಶಕರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. 10 ದಿನದಿಂದ ಲಾರಿ ಠಾಣೆಯಲ್ಲಿದೆ. ಅಕ್ಕಿ ಇಲಾಖೆಯದ್ದೇ ಆದರೆ ಲಾರಿ ಅಲ್ಲ ಎನ್ನುತ್ತಿರುವ ಅಧಿಕಾರಿಗಳು ಪರೋಕ್ಷವಾಗಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ.
- ಮರಿಲಿಂಗಪ್ಪ ಕೋಳೂರ ವಕೀಲ
ಅಕ್ಕಿ ನಮ್ಮ ಇಲಾಖೆಗೆ ಸಂಬಂಧಪಟ್ಟಿವೆ ಆದರೆ ಲಾರಿ ಟೆಂಡರ್ ನಿಯಮ ಉಲ್ಲಂಘಿಸಿ ಸಾಗಾಟ ಮಾಡಿದೆ. ಆಯುಕ್ತರಿಗೆ ವರದಿ ನೀಡಿದ್ದು ವರದಿ ಬಂದ ತಕ್ಷಣ ಕ್ರಮ ಕೈಗೊಳ್ಳುವೆ.
- ಕೃಷ್ಣ ಶಾವಂತಗೇರಾ ಜಿಲ್ಲಾ ಉಪನಿರ್ದೇಶಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಗೊಂದಲದಲ್ಲಿದ್ದಾರೆ. ಆಯುಕ್ತರಿಗೆ ವರದಿ ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ದೂರವಾಣಿ ಮೂಲಕ ಸಂಪರ್ಕಿಸಿದಾಗ ರಜೆ ಇದೆ ಬೇಕಾದರೆ ಲಾರಿ ಮೇಲೆ ಪ್ರಕರಣ ದಾಖಲಿಸಿ ಎಂದು ಹೇಳುತ್ತಿದ್ದಾರೆ.
-ಅಶೋಕ ಅಣ್ಣಪ್ಪ ಸದಲಗಿ ಪಿಐ ದೇವದುರ್ಗ ಪೋಲಿಸ್ ಠಾಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT