ಭಾನುವಾರ, ಮಾರ್ಚ್ 7, 2021
32 °C
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ನಿರ್ಮಾಣ ಉಸ್ತುವಾರಿ

ನಿರ್ಮಾಣ ಹಂತದಲ್ಲಿ ಇನ್ನೊಂದು ಭವ್ಯ ಸಭಾಂಗಣ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಬೆಳೆಸಲು ಹಾಗೂ ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶಕ್ಕಾಗಿ ಇನ್ನೊಂದು ಭವ್ಯ ಸಭಾಂಗಣವನ್ನು ಸರ್ಕಾರ ನಿರ್ಮಿಸುತ್ತಿದೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಚೇರಿ ಕನ್ನಡ ಭವನ ಪಕ್ಕದಲ್ಲಿಯೇ ‘ಡಾ.ಬಿ.ಆರ್‌. ಅಂಬೇಡ್ಕರ್‌ ಮತ್ತು ಡಾ.ಬಾಬು ಜಗಜೀವನರಾಂ ಭವನ’ ನಿರ್ಮಾಣವಾಗುತ್ತಿದೆ. ಪರಿಶಿಷ್ಟರ ಯೋಜನೆ (ಎಸ್‌ಸಿಪಿ–ಟಿಎಸ್‌ಪಿ) ಅನುದಾನ ₹5 ಕೋಟಿ ವೆಚ್ಚದಲ್ಲಿ ಎರಡು ಅಂತಸ್ತಿನ ಭವನ ನಿರ್ಮಾಣಕ್ಕೆ 2018 ರ ಫೆಬ್ರುವರಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಡಿಗಲ್ಲು ಅನಾವರಣಗೊಳಿಸಿದ್ದರು. ಕಟ್ಟಡ ನಿರ್ಮಾಣದ ನಿರ್ವಹಣೆಯನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ ವಹಿಸಲಾಗಿದೆ.

ಯೋಜನೆಯ ಪ್ರಕಾರ ಒಂದು ವರ್ಷದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ತಾಂತ್ರಿಕ ಅಡಚಣೆಗಳು ಎದುರಾಗಿದ್ದರಿಂದ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಇನ್ನು ಆರು ತಿಂಗಳು ಗಡುವು ವಿಸ್ತರಿಸಲು ಗುತ್ತಿಗೆದಾರರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಕೋರಿದ್ದಾರೆ. ಒಳಾಂಗಣ ಸಿದ್ಧಪಡಿಸುವ ಕೆಲಸ ಭರದಿಂದ ನಡೆಯುತ್ತಿದ್ದು ಇನ್ನು ಕೆಲವೇ ತಿಂಗಳುಗಳಲ್ಲಿ ಭವನವು ಲೋಕಾರ್ಪಣೆಗೆ ಸಜ್ಜುಗೊಳ್ಳಲಿದೆ.

ನೆಲಮಹಡಿಯಲ್ಲಿ ಅಡುಗೆ ಮನೆ, ಭೋಜನಾಲಯ ಹಾಗೂ ಕಚೇರಿ ನಿರ್ಮಾಣ ಮಾಡಲಾಗಿದೆ. ಮೊದಲ ಮಹಡಿಯಲ್ಲಿ ಕಾರ್ಯಕ್ರಮಗಳಿಗೆ ವಿಶಾಲ ವೇದಿಕೆ ಮತ್ತು ಸಭಿಕರು ಕುಳಿತುಕೊಳ್ಳಲು ವ್ಯವಸ್ಥೆ ಇದೆ. ಸುಮಾರು ಒಂದು ಸಾವಿರ ಜನರು ಕುಳಿತುಕೊಳ್ಳಲು ಸಾಧ್ಯವಾಗುವಷ್ಟು ಸಭಾಂಗಣವು ವಿಸ್ತಾರವಾಗಿದ್ದು, ಆಸನಗಳು ಚರ ಅಥವಾ ಸ್ಥಿರ ಎನ್ನುವ ಸಂಗತಿಯು ಕಟ್ಟಡ ನಿರ್ಮಾಣದ ಯೋಜನೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಎರಡನೇ ಅಂತಸ್ತಿನಲ್ಲಿ ಕಾರ್ಯಕ್ರಮಕ್ಕೆ ಬರುವವರಿಗೆ ವಾಸ್ತವ್ಯದ ಕೋಣೆಗಳನ್ನು ನಿರ್ಮಿಸಲಾಗುತ್ತಿದೆ.

ಕಟ್ಟಡ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಂಜಿನಿಯರುಗಳು ಹೇಳುವ ಪ್ರಕಾರ, ‘ಸಭಿಕರು ಕುಳಿತುಕೊಳ್ಳಲು ಜಾಗ ಬಿಡಲಾಗಿದೆ. ಆದರೆ, ಅದರಲ್ಲಿ ಸ್ಥಿರವಾದ ಆಸನಗಳನ್ನು ಮಾಡಬೇಕು ಎನ್ನುವುದು ಯೋಜನೆಯಲ್ಲಿ ಇಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು’ ಎನ್ನುತ್ತಿದ್ದಾರೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದವರು ಮದುವೆ ಸಮಾರಂಭ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೆ ಈ ನೂತನ ಭವನವು ರಿಯಾಯ್ತಿ ಬಾಡಿಗೆ ರೂಪದಲ್ಲಿ ದೊರೆಯಲಿದೆ.  ಖಾಸಗಿ ವ್ಯಕ್ತಿಗಳು ಮತ್ತು ಇತರೆ ಜನರು ಕೂಡಾ ಕಾರ್ಯಕ್ರಮಗಳನ್ನು ಆಯೋಜಿಸಬಹುದಾಗಿದೆ. ಭವನವನ್ನು ಬಳಸಿಕೊಳ್ಳುವುದಕ್ಕೆ ಮುಂದಿನ ದಿನಗಳಲ್ಲಿ ಬಾಡಿಗೆ ನಿಗದಿಯಾಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.