ಶನಿವಾರ, ಆಗಸ್ಟ್ 20, 2022
22 °C
ಶಾಸಕ ಶಿವನಗೌಡ ನಾಯಕ ನಿವಾಸದ ಎದುರು ವಿಜಯೋತ್ಸವ

ಅರಕೇರಾ ನೂತನ ತಾಲ್ಲೂಕು ಅನುಮೋದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅರಕೇರಾ ಗ್ರಾಮವನ್ನು ನೂತನ ತಾಲ್ಲೂಕು ಕೇಂದ್ರ ಮಾಡುವುದಕ್ಕೆ ರಾಜ್ಯ ಸರ್ಕಾರವು ಗುರುವಾರ ಅನುಮೋದನೆ ನೀಡಿದ್ದರಿಂದ, ಗ್ರಾಮದ ಜನರೆಲ್ಲ ಸಂಭ್ರಮಿಸುತ್ತಿದ್ದಾರೆ.

ಶಾಸಕ ಕೆ.ಶಿವನಗೌಡ ಅವರ ಅರಕೇರಾ ನಿವಾಸದ ಮುಂದೆ ಬಿಜೆಪಿ ಮುಖಂಡರು,ಕಾರ್ಯಕರ್ತರು ಹಾಗೂ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಸರ್ಕಾರದ ಪರ ಹಾಗೂ ಶಾಸಕರ ಪರವಾಗಿ ಘೋಷಣೆಗಳು ಮೊಳಗಿದವು.

ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಗಮನ ಸೆಳೆದಿದ್ದ ಶಾಸಕ ಕೆ.ಶಿವನಗೌಡ ನಾಯಕ ಅವರು ಕೆಲವೇ ದಿನಗಳಲ್ಲಿ ಅರಕೇರಾ ಜನರ ಕನಸನ್ನು ನನಸು ಮಾಡಿದ್ದು ಗಮನಾರ್ಹ ಸಾಧನೆ. ರಾಜಕೀಯವಾಗಿ ವರ್ಚಸ್ಸು ಹೆಚ್ಚಿಸಿಕೊಂಡಿದ್ದಲ್ಲದೆ, ಭರವಸೆ ಕೊಟ್ಟಿದ್ದನ್ನು ಈಡೇರಿಸಿರುವುದಕ್ಕೆ ಜನರೆಲ್ಲ ಹರ್ಷಗೊಂಡಿದ್ದಾರೆ. ಶಾಸಕರ ಪರವಾಗಿ ಬಹುಪರಾಕ್‌ ಮೊಳಗುತ್ತಿವೆ. ತಾಲ್ಲೂಕು ರಚನೆ ಸುದ್ದಿ ಗೊತ್ತಾಗುತ್ತಿದ್ದಂತೆ ವಿಜಯೋತ್ಸವ ಆಚರಿಸಿದ ನಂತರ ಗ್ರಾಮ ದೇವತೆ ಶ್ರೀಭಾಗ್ಯವಂತಿ ದೇವಿ ದೇವಸ್ಥಾನ, ಶ್ರೀ ಮಾರೇಮ್ಮದೇವಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ತಾಲ್ಲೂಕು ಏಕೆ: ದೇವದುರ್ಗ ತಾಲ್ಲೂಕಿನ ಅರಕೇರಾ ಗ್ರಾಮವು ಮೊದಲಿನಿಂದಲೂ ರಾಜಕೀಯ ಶಕ್ತಿ ಕೇಂದ್ರ. ಇದುವರೆಗೂ ಆಯ್ಕೆಯಾಗಿರುವ ಶಾಸಕರೆಲ್ಲರೂ ಇದೇ ಗ್ರಾಮದವರು. ತಾಲ್ಲೂಕು ಕೇಂದ್ರಕ್ಕೆ ಸರಿಸಮ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳು ಅರಕೇರಾದಲ್ಲಿ ನಡೆಯುತ್ತವೆ.

ನೂತನ ತಾಲ್ಲೂಕು ಕೇಂದ್ರ ಮಾಡುವುದಕ್ಕೆ ಅಗತ್ಯ ರೂಪುರೇಷೆಗಳನ್ನು ಶಾಸಕರು ಮಾಡುತ್ತಿರುವುದು ಸುದ್ದಿಯಾಗಿತ್ತು. ಇದೇ ಕಾರಣದಿಂದ ಜಾಲಹಳ್ಳಿ ಹಾಗೂ ಗಬ್ಬೂರು ಹೋಬಳಿಗಳಲ್ಲೂ ದೊಡ್ಡಮಟ್ಟದ ಹೋರಾಟಗಳು ಪ್ರಾರಂಭವಾಗಿದ್ದವು. ಅರಕೇರಾಗಿಂತಲೂ ದೊಡ್ಡ ಪ್ರಮಾಣದ ಜನಸಂಖ್ಯೆ ಹೊಂದಿರುವ ಹೋಬಳಿಗಳನ್ನು ತಾಲ್ಲೂಕು ಕೇಂದ್ರ ಮಾಡಬೇಕು ಎಂದು ಮನವಿ ಸಲ್ಲಿಸುತ್ತಾ ಬಂದಿದ್ದರು. ಆದರೆ, ರಾಜಕೀಯ ಇಚ್ಛಾಶಕ್ತಿ ಇರುವ ನಾಯಕರನ್ನು ಹೊಂದಿದ ಅರಕೇರಾ ಗ್ರಾಮವು ತಾಲ್ಲೂಕು ಕೇಂದ್ರವಾಗುವ ಆಸೆ ಕೊನೆಗೂ ಕೈಗೂಡಿದೆ.

ತಾಲ್ಲೂಕು ವ್ಯಾಪ್ತಿ ಹೇಗಿದೆ: ಅರಕೇರಾ ಹೋಬಳಿ ವ್ಯಾಪ್ತಿಯ 51 ಗ್ರಾಮಗಳು, ಜಾಲಹಳ್ಳಿ ಹೋಬಳಿಯ 27 ಗ್ರಾಮಗಳು ಹಾಗೂ ಗೊಬ್ಬೂರು ಹೋಬಳಿಯ 15 ಗ್ರಾಮಗಳನ್ನು ಸೇರ್ಪಡೆಗೊಳಿಸಿ ನೂತನ ತಾಲ್ಲೂಕು ರಚಿಸಲಾಗುತ್ತಿದೆ ಎಂದು ಕಂದಾಯ ಇಲಾಖೆಯು ಸಿದ್ಧಪಡಿಸಿರುವ ನೀಲನಕ್ಷೆಯಲ್ಲಿದೆ.

ಅರಕೇರಾ ಜನಸಂಖ್ಯೆ 2011ರ ಜನಗಣತಿ ಪ್ರಕಾರ 7,991 ರಷ್ಟಿದೆ. ಸದ್ಯಕ್ಕೆ 10 ಸಾವಿರಕ್ಕಿಂತ ಅಧಿಕವಾಗಿದೆ. ಅಗ್ನಿಶಾಮಕ ಠಾಣೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಿಯುಸಿವರೆಗೂ ಶಿಕ್ಷಣ ಪಡೆಯುವ ಸೌಲಭ್ಯಗಳಿವೆ.

ರಾಜ್ಯದಲ್ಲೇ ಅತೀ ಹಿಂದುಳಿದ ತಾಲ್ಲೂಕು ದೇವದುರ್ಗ ಎನ್ನುವ ಹಣೆಪಟ್ಟಿ ಇದೆ. ಇದನ್ನು ತೆಗೆದುಹಾಕಲು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮೂಲಕ ಸಾಕಷ್ಟು ಅನುದಾನ ದೊರೆಯುತ್ತಿದೆ. ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಲಾಗಿದ್ದು, ಪ್ರತಿ ಗ್ರಾಮಗಳಿಗೂ ಉತ್ತಮ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಇದೀಗ ಅರಕೇರಾ ಪ್ರತ್ಯೇಕ ತಾಲ್ಲೂಕು ಕೇಂದ್ರವಾಗುವುದರಿಂದ ಇನ್ನಷ್ಟು ಅನುದಾನ ಹರಿದು ಬರಲಿದ್ದು, ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.