ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೂಸರ್‌, ಆಟೋಗಳಿಂದ ಪ್ರಯಾಣಿಕರ ಸುಲಿಗೆ

ಖಾಸಗಿ ವಾಹನಗಳಿಗೆ ವರವಾದ ಸರ್ಕಾರಿ ಬಸ್‌ ಸಂಚಾರ ಸ್ಥಗಿತ
Last Updated 23 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ರಾಯಚೂರು: ಸರ್ಕಾರಿ ಬಸ್‌ ಸಂಚಾರ ಸ್ಥಗಿತವಾಗಿರುವುದನ್ನು ಸದವಕಾಶ ಮಾಡಿಕೊಂಡಿದ್ದ ಕ್ರೂಸರ್‌ ಹಾಗೂ ಆಟೋಗಳು ಪ್ರಯಾಣಿಕರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಿಸಲು ಮಾಮೂಲಿ ದಿನಗಳಲ್ಲಿ ಕೇಳುವ ದರಕ್ಕಿಂತಲೂ ಸೋಮವಾರ ದುಪ್ಪಟ್ಟು ಹಣ ಪಡೆದುಕೊಂಡರು.

ಸಂಬಂಧಿಕರ ಮನೆಗಳಿಂದ, ಹಾಸ್ಟೇಲುಗಳಿಂದ ಹಾಗೂ ಉದ್ಯೋಗಸ್ಥಳದಿಂದ ಸ್ವಗ್ರಾಮಗಳಿಗೆ ತೆರಳುವುದಕ್ಕೆ ಕೇಂದ್ರ ಬಸ್‌ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳ ಎದುರು ಅನೇಕ ಜನರು ಅಸಹಾಯಕರಾಗಿ ನಿಂತಿದ್ದರು. ನಗರದಲ್ಲಿ ಸಂಚರಿಸಲು ಎರಡರಿಂದ ಮೂರು ಪಟ್ಟು ಹಣ ಕೇಳುತ್ತಿದ್ದ ಆಟೋ ಚಾಲಕರೊಂದಿಗೆ ಜನರು ಚೌಕಾಸಿ ಮಾಡಿದರೂ ‍ಪರಿಸ್ಥಿತಿ ಅವರ ಪರವಾಗಿರಲಿಲ್ಲ. ಅನಿವಾರ್ಯತೆಯನ್ನು ಅವಕಾಶ ಮಾಡಿಕೊಂಡಿದ್ದ ಖಾಸಗಿ ವಾಹನದಾರರು ಕೇಳಿದಷ್ಟು ಹಣಕೊಟ್ಟು ಜನರು ಸಂಚರಿಸುವಂತಾಯಿತು.

ಕ್ರೂಸರ್‌ ವಾಹನದಲ್ಲಿ ರಾಯಚೂರಿನಿಂದ ದೇವದುರ್ಗ, ಲಿಂಗಸುಗೂರು, ಸಿಂಧನೂರು ಹಾಗೂ ಮಾನ್ವಿ ಕಡೆಗೆ ಸಂಚರಿಸುವುದಕ್ಕೆ ₹200 ರಿಂದ ₹300 ರವರೆಗೂ ಕೇಳುತ್ತಿರುವುದನ್ನು ಕಂಡುಬಂತು. ವಾಹನ ಚಾಲಕರ ಮನಸ್ಸು ಒಲಿಯಬಹುದೇನೋ ಎಂದು ಕೆಲಹೊತ್ತು ಪೆಚ್ಚುಮುಖ ಮಾಡಿಕೊಂಡು ನಿಂತರೂ ಉಪಯೋಗವಾಗಲಿಲ್ಲ. ರಾಯಚೂರಿನಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಚರಿಸಲು ಕೆಲವು ಪ್ರಯಾಣಿಕರು ಆಟೋ ಚಾಲಕರ ಮೊರೆ ಹೋಗಬೇಕಾಯಿತು.

ಒಬ್ಬ ಪ್ರಯಾಣಿಕರಿಗೆ ₹400 ರಿಂದ ₹600 ನಿಗದಿ ಮಾಡಿಕೊಂಡು ಆಟೋಗಳು ವಿವಿಧ ತಾಲ್ಲೂಕು ಕೇಂದ್ರಗಳಿಗೆ ಸಂಚರಿಸಿದವು. ಬಸ್‌ ಇಲ್ಲದೆ ಅಸಹಾಯಕರಾಗಿ ಬರುತ್ತಿದ್ದ ಪ್ರಯಾಣಿಕರಿಗೆ ನೆರವಾಗುವುದಕ್ಕೆ ಕೇಂದ್ರ ಬಸ್‌ ನಿಲ್ದಾಣ ಎದುರು ಆಟೋಗಳು ಸರದಿ ನಿಂತಿದ್ದವು. ಕೇಳಿದಷ್ಟು ಹಣ ಕೊಡುವವರಿಗೆ ಸಹಾಯ ಖಚಿತ ಎನ್ನುವ ಧೋರಣೆ ಸ್ಪಷ್ಟವಾಗಿತ್ತು. ಈ ವಿಷಯ ಸಂಚಾರ ಪೊಲೀಸರ ಗಮನಕ್ಕೆ ಬಂದರೂ, ಮೌನ ವಹಿಸಿದರು.

‘ಜಿಲ್ಲೆಯಲ್ಲಿ ನಿಷೇಧ ಜಾರಿಯಲ್ಲಿದೆ. ಮನೆಯಿಂದ ಹೊರಬರಬಾರದು ಎಂದು ಸೂಚನೆ ಕೊಡಲಾಗಿದೆ. ಈ ಬಗ್ಗೆ ಟಿವಿ, ಪೇಪರ್‌ಗಳಲ್ಲಿ ಒಂದೇ ಸಮನೆ ಹೇಳುತ್ತಿದ್ದಾರೆ. ಇಂಥ ಸ್ಥಿತಿಯಲ್ಲೂ ಹೊರಬಿದ್ದಿರುವ ಜನರು ಈಗ ಸಂಕಷ್ಟ ಅನುಭವಿಸುತ್ತಿದ್ದಾರೆ. ಎಲ್ಲಕ್ಕಿಂತಲೂ ಜೀವ ಮುಖ್ಯ. ಆದಷ್ಟು ಬೇಗನೆ ಮನೆಗಳಿಗೆ ತಲುಪಿಕೊಳ್ಳಬೇಕು’ ಎಂದು ಬಸ್‌ ನಿಲ್ದಾಣ ಬಳಿ ಹಣ್ಣು ಖರೀದಿಗಾಗಿ ಬಂದಿದ್ದ ನಿವೃತ್ತ ಸರ್ಕಾರಿ ಅಧಿಕಾರಿ ಮೋಹನ್‌ ಅವರು ಹೇಳಿದ ಮಾತಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT