ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಆರ್‌ಟಿಪಿಎಸ್‌ನಲ್ಲಿ ಮರಗಳ ಮಾರಣಹೋಮ?

Published 9 ನವೆಂಬರ್ 2023, 4:33 IST
Last Updated 9 ನವೆಂಬರ್ 2023, 4:33 IST
ಅಕ್ಷರ ಗಾತ್ರ

ಶಕ್ತಿನಗರ: ‘ಆರ್‌ಟಿಪಿಎಸ್‌ನಲ್ಲಿ ಮರಗಳ ಮಾರಣಹೋಮ ನಡೆದಿದೆ’ ಎಂಬ ಆರೋಪ ಕೇಳಿಬಂದಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ ವಿದ್ಯುತ್ ಘಟಕಗಳಿಂದಾಗಿ ಇಲ್ಲಿ ಉಷ್ಣಾಂಶ ಹೆಚ್ಚುತ್ತದೆ. ಅಲ್ಲದೆ ಹೊರ ಬರುವ ಬೂದಿಯಿಂದಾಗುವ ದುಷ್ಪರಿಣಾಮಗಳನ್ನು ತಡೆಯಲು ಆರ್‌ಟಿಪಿಎಸ್ ಆವರಣ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಗಿಡ–ಮರಗಳನ್ನು ಬೆಳೆಸಲಾಗಿದೆ. ಪ್ರತಿವರ್ಷ ಪರಿಸರ ದಿನದಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾವಿರಾರು ಸಸಿಗಳನ್ನು ನೆಡಲಾಗುತ್ತದೆ.

‘ಗಿಡ–ಮರ ಬೆಳೆಸಿ, ಪರಿಸರ ಉಳಿಸಿ’ ಎಂದು ಆರ್‌ಟಿಪಿಎಸ್ ಆಡಳಿತ ಮಂಡಳಿ ಘೋಷಿಸುತ್ತದೆ. ಆದರೆ, ವಾಸ್ತವದಲ್ಲಿ ಮರ ಉಳಿಸುವ ಬದಲು ಉರುಳಿಸುವ ಕೆಲಸವೇ ಕಂಡು ಬರುತ್ತಿದೆ. ಹಾಗಾದರೆ, ಗಿಡ–ಮರ ಬೆಳೆಸುವ ಘೋಷಣೆ ಕೇವಲ ಪರಿಸರ ದಿನದ ಭಾಷಣಕ್ಕೆ ಸೀಮಿತವಾಯಿತಾ’ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

‘ಆರ್‌ಟಿಪಿಎಸ್‌ನ ಸುತ್ತಲಿನ ಪ್ರದೇಶದಲ್ಲಿ ಮರಗಳ ಸಂಖ್ಯೆ ಕ್ಷೀಣಿಸುತ್ತಿದೆ. ಮರ ಕತ್ತರಿಸುವ ಸಂಸ್ಕೃತಿ ದಿನೇ ದಿನೇ ಹೆಚ್ಚುತ್ತಿದೆ. ಎಗ್ಗಿಲ್ಲದೆ ಹಾಡಹಗಲೇ ಮರಗಳನ್ನು ಕತ್ತರಿಸಲಾಗುತ್ತಿದೆ. ದೊಡ್ಡ ದೊಡ್ಡ ಮರಗಳನ್ನು ಪರವಾನಗಿ ಇಲ್ಲದೇ ಕತ್ತರಿಸಿ ಟ್ರ್ಯಾಕ್ಟರ್‌ಗೆ ತುಂಬಲಾಗುತ್ತಿದೆ’ ಎಂದು ಪರಿಸರ ಪ್ರೇಮಿಗಳು, ಸಾರ್ವಜನಿಕರು ದೂರಿದ್ದಾರೆ.

‘ಸಂಶಯ ಬಾರದಂತೆ ಮೊದಲು ಮರದ ತೊಗಟೆ ಸುಲಿದು, ಮರುದಿನ ಒಂದು ಟೊಂಗೆ ಕಡಿದು, ಅದಾದ ಎರಡು ದಿನಗಳ ಬಳಿಕ ಅರ್ಧ ಮರ ಕತ್ತರಿಸಿ ಹಂತ ಹಂತವಾಗಿ ಮರಗಳ ಮಾರಣಹೋಮ ನಡೆಸಲಾಗುತ್ತಿದೆ’ ಎಂಬುದು ಅವರ ಆರೋಪ.

ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಮರ ಕಡಿಯುವುದನ್ನು ನಿಯಂತ್ರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿದ್ಯುತ್ ಘಟಕಗಳ ಕೂಲಿಂಗ್ ಟವರ್‌ಗಳಿಗೆ ಮರಗಳ ಟೊಂಗೆಗಳು ತಗುಲಿವೆ. ಇದರಿಂದಾಗಿ ಅವುಗಳನ್ನು ಕತ್ತರಿಸಲಾಗುತ್ತಿದೆ. ಮರಗಳನ್ನು ಕಡಿಯುತ್ತಿಲ್ಲ. ಮರಗಳು ಕಡಿಯುವುದು ಕಂಡುಬಂದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
– ಸುರೇಶ ಬಾಬು, ಆರ್‌ಟಿಪಿಎಸ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT