ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಕ್ರೀದ್ ಹಬ್ಬಕ್ಕೆ ಕೊರೊನಾ ಅಡ್ಡಿ; ಸರಳ ಆಚರಣೆ

ಈದ್ಗಾ ಮೈದಾನಗಳಲ್ಲಿ ಪ್ರಾರ್ಥನೆ ಇರುವುದಿಲ್ಲ
Last Updated 31 ಜುಲೈ 2020, 14:28 IST
ಅಕ್ಷರ ಗಾತ್ರ

ರಾಯಚೂರು: ತ್ಯಾಗ, ಬಲಿದಾನದ ಹಬ್ಬವಾದ ಬಕ್ರೀದ್ ( ಈದುಲ್ ಅಝ್ ಹಾ) ಹಬ್ಬ ಆಚರಣೆಗೆ ಈ ಬಾರಿ ಕೊರೊನಾ ಸೋಂಕು ಆತಂಕ ಎದುರಾಗಿದೆ. ಕಾರಣ, ಜಿಲ್ಲೆಯಲ್ಲಿ ಮುಸ್ಲಿಮರು ಹಬ್ಬವನ್ನು ಸರಳವಾಗಿ ಆಚರಿಸಲು ಮುಂದಾಗಿದ್ದಾರೆ.

ಹಬ್ಬದ ಮುನ್ನಾದಿನ ಹೊಸ ವಸ್ತ್ರ ಹಾಗೂ ಇತರೆ ವಸ್ತುಗಳನ್ನು ಖರೀದಿಸುವುದು ಕಂಡುಬಂತು. ಹಬ್ಬದ ಅಂಗವಾಗಿ ವಿವಿಧ ಖಾದ್ಯಗಳನ್ನು ತಯಾರಿಸುವುದಕ್ಕೆ ಅಗತ್ಯ ಸರಕುಗಳ ಖರೀದಿಗೆ ಜನರು ಮಾರುಕಟ್ಟೆಯಲ್ಲಿ ಮುಗಿಬೀಳುತ್ತಿದ್ದ ದೃಶ್ಯ ಈ ವರ್ಷ ಇರಲಿಲ್ಲ. ನಗರದ ಬಟ್ಟೆ ಬಜಾರ್, ಸರಾಫ್ ಬಜಾರ್ ಮತ್ತಿತರೆಡೆ ಬಟ್ಟೆ ಖರೀದಿ, ಡ್ರೈಫುಡ್ ವಸ್ತುಗಳ ಖರೀದಿಗೆ ಜನರು ಕಡಿಮೆ ಸಂಖ್ಯೆಯಲ್ಲಿ ಇದ್ದರು.

ಪ್ರವಾದಿ ಇಬ್ರಾಹಿಂ ಅವರ ತ್ಯಾಗ, ಬಲಿದಾನದ ಐತಿಹಾಸಿಕ ಹಿನ್ನೆಲೆಯಿಂದ ಹಬ್ಬಕ್ಕೆ ಮೇಕೆ ಬಲಿ ಕೊಡುವುದು ವಾಡಿಕೆ. ಬಲಿ ಅರ್ಪಿಸಿದ ಮಾಂಸವನ್ನು ಸಮನಾಗಿ ಮೂರು ಭಾಗ ಮಾಡಿ ಒಂದು ಭಾಗ ಸ್ವತಃ ಬಳಸಿಕೊಳ್ಳುವುದು, ಇನ್ನೆರಡು ಭಾಗಗಳು ಸಂಬಂಧಿಕರು ಹಾಗೂ ಬಡವರಿಗೆ ಹಂಚಬೇಕು. ಬಡವರೂ ಸೇರಿದಂತೆ ಹಬ್ಬದ ಊಟದಿಂದ ಯಾರು ವಂಚಿತರಾಗಬಾರದು ಎಂಬುವುದು ಇದರ ಉದ್ದೇಶವಾಗಿದೆ.

ಈ ನಿಟ್ಟಿನಲ್ಲಿ ಮುಸ್ಲಿಂ ಬಾಂಧವರು ಮೇಕೆ ಖರೀದಿಗೆ ಮುಂದಾಗಿದ್ದಾರೆ. ಪ್ರತಿವರ್ಷದಂತೆ ಖರೀದಿ ಭರಾಟೆ ಇಲ್ಲ. ಜಿಲ್ಲೆಯಿಂದ ಜಿಲ್ಲೆಗೆ ಮೇಕೆ ಸಾಗಣೆ ಕಷ್ಟವಾಗಿದ್ದರಿಂದ ದರ ಏರಿಕೆಯಾಗಿದೆ.

‘ಲಾಕ್‌ಡೌನ್ ಅವಧಿಯಲ್ಲಿ ಕೆಲಸ, ವ್ಯವಹಾರ ಇಲ್ಲದಿರುವುದು ಸಂಭ್ರಮವು ಸರಳವಾಗಿದೆ. ಯೋಗ್ಯವಾದ ಮೇಕೆ ದರ ₹10 ಸಾವಿರದಿಂದ ₹15 ಸಾವಿರ ವರೆಗೂ ಇದೆ. ಆದರೂ ಅನಿವಾರ್ಯವಾಗಿ ಖರೀದಿಸಬೇಕಿದೆ’ ಎಂದು ಸೈಯದ್ ಏಜಾಜ್ ಅವರು ಪ್ರತಿಕ್ರಿಯಿಸಿದರು.

‘ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಸಮಸ್ಯೆಯಾಗಿ ಕಡಿಮೆ ಪ್ರಮಾಣದಲ್ಲಿ ನೀಡಲಾಗುತ್ತಿದೆ. ಸರ್ಕಾರವು ಒಂಟೆ, ಗೋವು ಬಲಿ ನೀಡಬಾರದು ಎಂದು ಆದೇಶ ನೀಡಿದೆ.ಬಕ್ರೀದ್ ಆಚರಣೆಗೆ ಕೊರೊನಾ ಅಡ್ಡಿ ಮಾಡಿದ್ದು ಪ್ರತಿಬಾರಿ ಈದ್ಗಾ ಮೈದಾನ ಹಾಗೂ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಾಗುತ್ತಿತ್ತು. ಈ ಬಾರಿ ಆಯಾ ಮಸೀದಿಗಳಲ್ಲಿ ಅಂತರ ಕಾಪಾಡಿಕೊಂಡು ಪ್ರಾರ್ಥಿಸಲು ಆದೇಶವಿದೆ. ಸರ್ಕಾರದ ಮಾರ್ಗಸೂಚಿಯಂತೆ ಪ್ರಾರ್ಥನೆ ಮಾಡಲಾಗುವುದು’ ಎಂದು ನಗರದ ಏಕ್ ಮಿನಾರ್ ಮಸೀದಿಯ ಇಮಾಮ್ ಅಬ್ದುಲ್ ಸುಕೂರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT