ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಸೇವೆ ಸ್ಥಗಿತ: ವೇತನ ಪರಿಷ್ಕರಿಸಲು ಕೇಂದ್ರಕ್ಕೆ ಒತ್ತಾಯ

ನೌಕರರಿಂದ ಮುಂದುವರಿದ ಮುಷ್ಕರ
Last Updated 31 ಜನವರಿ 2020, 13:53 IST
ಅಕ್ಷರ ಗಾತ್ರ

ರಾಯಚೂರು: ವೇತನ ಪರಿಷ್ಕರಣೆ ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅಖಿಲ ಭಾರತ ಬ್ಯಾಂಕ್‌ ಮುಷ್ಕರವನ್ನು ಬೆಂಬಲಿಸಿ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕುಗಳ ಎಲ್ಲ ಶಾಖೆಗಳ ನೌಕರರು ಶುಕ್ರವಾರದಿಂದ ಬ್ಯಾಂಕ್‌ ಸೇವೆ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಿದ್ದಾರೆ.

ನಗರದ ಸ್ಟೇಷನ್‌ ರಸ್ತೆಯಲ್ಲಿರುವ ಎಸ್‌ಬಿಐ ಶಾಖೆ ಎದುರು ಸೇರಿದ್ದ ನೌಕರರು ‘ಬ್ಯಾಂಕ್‌ ಸಂಘಗಳ ಸಂಯುಕ್ತ ವೇದಿಕೆ–ಯುಎಫ್‌ಬಿಯು’ ಅಡಿಯಲ್ಲಿ ಮುಷ್ಕರ ನಡೆಸಿದರು.

11ನೇ ದ್ವಿಪಕ್ಷೀಯ ವೇತನ ಒಪ್ಪಂದವನ್ನು ಶೀಘ್ರ ಜಾರಿಗೊಳಿಸಬೇಕು. ವೇತನ ವಿಳಂಬ ಮಾಡುತ್ತಿರುವ ಕ್ರಮವು ಸರಿಯಾಗಿಲ್ಲ. ಕೇಂದ್ರ ಸರ್ಕಾರವು ಬ್ಯಾಂಕ್‌ ನೌಕರರ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡನೀಯ ಎಂದು ತಿಳಿದರು.

ಐಬಿಎ ಕೂಡಾ ನೌಕರರ ವಿರೋಧ ನೀತಿ ಅನುಸರಿಸುತ್ತಿದೆ. ಐದು ದಿನಗಳ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಕೂಡಲೇ ಜಾರಿಗೊಳಿಸಬೇಕು. ವಿಶೇಷ ಭತ್ಯೆಯನ್ನು ಮೂಲ ಭತ್ಯೆಯೊಂದಿಗೆ ಕೂಡಲೇ ವಿಲೀನಗೊಳಿಸಬೇಕು. ಎನ್‌ಪಿಎಸ್‌ ಪಿಂಚಣಿ ಯೋಜನೆಯನ್ನು ಕೂಡಲೇ ರದ್ದುಗೊಳಿಸಬೇಕು. ಪಿಂಚಣಿಯನ್ನು ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಬ್ಯಾಂಕುಗಳ ಒಟ್ಟಾರೆ ನಿರ್ವಹಣಾ ಲಾಭದ ಮೇಲೆ ಸಿಬ್ಬಂದಿ ಕಲ್ಯಾಣ ನಿಧಿಯನ್ನು ನಿಗದಿಪಡಿಸಬೇಕು. ನಿವೃತ್ತಿ ನಂತರ ಸಿಗುವ ಹಣದ ಮೇಲೆ ಸಂಪೂರ್ಣ ತೆರಿಗೆ ವಿನಾಯಿತಿಯನ್ನು ನೀಡಬೇಕು. ಶಾಖೆಗಳಲ್ಲಿ ಒಂದೇ ತೆರನಾದ ವ್ಯವಹಾರದ ಸಮಯವನ್ನು ಜಾರಿಗೊಳಿಸಬೇಕು ಎಂದು ಘೋಷಣೆಗಳನ್ನು ಕೂಗಿದರು.

ಬ್ಯಾಂಕುಗಳಲ್ಲಿ ರಜಾನಿಧಿಯನ್ನು ಜಾರಿಗೊಳಿಸಬೇಕು. ಬ್ಯಾಂಕ್‌ ಮಿತ್ರರಿಗೆ ಹಾಗೂ ಗುತ್ತಿಗೆ ನೌಕರರಿಗೆ ಸಮಾನ ಕೆಲಸ ಸಮಾನ ವೇತನ ಜಾರಿ ಮಾಡಬೇಕು. ನಿವೃತ್ತ ಬ್ಯಾಂಕ್‌ ಉದ್ಯೋಗಿಗಳ ಬೇಡಿಕೆಗಳನ್ನು ಈಡೇರಿಸಬೇಕು. ಬ್ಯಾಂಕುಗಳ ವಿಲೀನ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಿ. ರಾಷ್ಟ್ರೀಕೃತ ಬ್ಯಾಂಕುಗಳ ವ್ಯವಸ್ಥೆ ದುರ್ಬಲ ಮಾಡುವ ಕಾರ್ಯ ನಡೆಸಬಾರದು. ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಇನ್ನಷ್ಟು ವಿಸ್ತಾರಗೊಳಿಸಬೇಕು ಎಂದು ಆಗ್ರಹಿಸಿದರು.

ವಸೂಲಾಗದ ಸಾಲದ ಹೊರೆ ವಿಪರೀತವಾಗಿದ್ದು, ಸಾಲ ವಸೂಲಾತಿಗೆ ಕಠಿಣ ಕ್ರಮ ಕೈಗೊಳ್ಳಬೇಕು. ಸಾಲ ಸುಸ್ತಿದಾರರ ಮೇಲೆ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕು ಎಂದರು.

ಬ್ಯಾಂಕ್‌ ನೌಕರರ ಸಂಘದ ಜಿಲ್ಲಾ ಘಟಕದ ಸಲಾವುದ್ದೀನ್‌, ಉಪಾಧ್ಯಕ್ಷ ಗೋವಿಂದರಾವ್‌, ಪ್ರಧಾನಕಾರ್ಯದರ್ಶಿ ಕುಮಾರ ವೈ., ಖಜಾಂಚಿ ಗಣೇಶ ಅವರು ಮುಷ್ಕರದ ನೇತೃತ್ವದ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT