ಬುಧವಾರ, ನವೆಂಬರ್ 13, 2019
22 °C
ಜಿಲ್ಲೆಯಾದ್ಯಂತ ಸಂಭ್ರಮ, ಸಡಗರದಿಂದ ವಿಘ್ನವಿನಾಶಕನ ಆರಾಧನೆ

ಮನಸೆಳೆಯುವ ಸುಂದರ ಗಣೇಶ ವಿಗ್ರಹಗಳು

Published:
Updated:

ರಾಯಚೂರು: ಬರ ಹಾಗೂ ಪ್ರವಾಹದ ನಡುವೆಯೂ ಜಿಲ್ಲೆಯಾದ್ಯಂತ ಗಣೇಶನನ್ನು ಭಕ್ತಿಭಾವದೊಂದಿಗೆ ಸೋಮವಾರ ಪ್ರತಿಷ್ಠಾಪಿಸಲಾಗಿದ್ದು, ಎಲ್ಲೆಡೆಯಲ್ಲೂ ಪೂಜೆ, ಪುನಸ್ಕಾರಗಳು ನಡೆಯುತ್ತಿವೆ.

ಆದ್ಧೂರಿ, ಆಡಂಬರಕ್ಕಿಂತಲೂ ಪೂಜೆಗೆ ಹೆಚ್ಚು ಮಹತ್ವ ನೀಡಿರುವುದು ಎದ್ದು ಕಾಣುತ್ತಿದೆ. ಬರದ ಛಾಯೆ ಆವರಿಸಿರುವುದರಿಂದ ದುಂದುವೆಚ್ಚಕ್ಕೆ ಕಡಿವಾಣ ಬಿದ್ದಿದೆ. ಹೀಗಾಗಿ ಗಜಾನನ ಮಿತ್ರ ಮಂಡಳಿಗಳು ಎಂದಿನಂತೆ ಈ ವರ್ಷ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಇತರೆ ಕಾರ್ಯಕ್ರಮಗಳಿಗೆ ಈ ವರ್ಷ ಮಹತ್ವ ನೀಡಿದಂತಿಲ್ಲ. ವಿಘ್ನಗಳನ್ನು ದೂರ ಮಾಡುವಂತೆ ಹಿಂದೆಂದಿಗಿಂತಲೂ ಜನರು ಹೆಚ್ಚು ಭಕ್ತಿಯಿಂದ ನಮಿಸುತ್ತಿದ್ದಾರೆ.

ರಾಯಚೂರಿನ ಪ್ರತಿ ಬಡಾವಣೆ ಹಾಗೂ ಪ್ರತಿ ರಸ್ತೆಯಲ್ಲೂ ಗಣೇಶನ ವಿಗ್ರಹಗಳು ಚಿತ್ತಾಕರ್ಷಿಸುತ್ತಿವೆ. ನಗರದಲ್ಲಿ 337, ಗ್ರಾಮೀಣ ವಿಭಾಗದಲ್ಲಿ 402, ಲಿಂಗಸುಗೂರು ಉಪವಿಭಾಗದಲ್ಲಿ 387 ಹಾಗೂ ಸಿಂಧನೂರು ಉಪ ವಿಭಾಗದಲ್ಲಿ 719 ಸೇರಿದಂತೆ ಒಟ್ಟು 1845 ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದೆ. ನಗರದಲ್ಲಿ ಬೃಹತ್‌ ಪೆಂಡಾಲ್‌ಗಳನ್ನು ನಿರ್ಮಿಸಿ ಪ್ರತಿಷ್ಠಾಪನೆ ಮಾಡಿರುವ ಭಾರೀ ಗಾತ್ರದ ಗಣೇಶ ಮೂರ್ತಿಗಳು ಗಮನ ಸೆಳೆಯುತ್ತಿವೆ.

ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಪ್ರತಿಷ್ಠಾಪಿಸಲು ಎಷ್ಟೇ ಜಾಗೃತಿ ಮೂಡಿಸಿದರೂ, ಚಿಕ್ಕ ಗಾತ್ರದ ಹಾಗೂ ಬೆರಳೆಣಿಯಷ್ಟು ಮಾತ್ರ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಸ್ಥಾಪಿಸಿದ್ದು, ಬಹುತೇಕ ಕಡೆಯಲ್ಲಿ ಪಿಒಪಿ (ಪ್ಲಾಸ್ಟರ್ ಆಫ್‌ ಪ್ಯಾರೀಸ್‌) ಗಣೇಶ ಮೂರ್ತಿಗಳನ್ನೇ ಪ್ರತಿಷ್ಠಾಪನೆ ಮಾಡಲಾಗಿದೆ.

ಮಕ್ಕಳ ಸಂಭ್ರಮ: ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ವಿಗ್ರಹದ ಬಳಿ ಮಕ್ಕಳ ಚಟುವಟಿಕೆಗಳು ಎದ್ದು ಕಾಣುತ್ತಿವೆ. ಹಾಡು, ನೃತ್ಯದಲ್ಲಿ ಮೈಮರೆತಿರುವ ಮಕ್ಕಳು ಗಣೇಶ ಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ.

ನಗರದ ತೀನ್‌ ಕಂದಿಲ್ ವೃತ್ತದಲ್ಲಿ, ಗೀತಾ ಮಂದಿರ, ಶೆಟ್ಟಿಬಾವಿ ವೃತ್ತ, ಲೋಹರವಾಡಿ, ಸೂಪರ್ ಮಾರ್ಕೆಟ್, ಸತ್ಯನಾಥ ಕಾಲೊನಿ, ನಿಜಲಿಂಗಪ್ಪ ಕಾಲೊನಿ, ಹರಿಜನವಾಡ, ತಿಮ್ಮಾಪೂರಪೇಟೆ, ಮಡ್ಡಿಪೇಟೆ, ಮುನ್ನೂರುವಾಡಿ ಸೇರಿದಂತೆ ಹಲವೆಡೆ ಗಣೇಶ ಮೂರ್ತಿಗಳು ಆಕರ್ಷಣೀಯವಾಗಿವೆ.

ಗಣೇಶ ಉತ್ಸವದ ನಿಮಿತ್ತ ನಗರದಲ್ಲಿ ರಸ್ತೆಗಳ ದುರಸ್ತಿ ಮಾಡಲಾಗಿದೆ. ಭದ್ರತೆಗಾಗಿ ಪೊಲೀಸ್‌ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಹಲವೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.

ಪ್ರತಿಕ್ರಿಯಿಸಿ (+)