ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ರಸ್ತೆ ಆವರಿಸಿದ ಕಟ್ಟಡ ಸಾಮಗ್ರಿ, ಸಂಚಾರ ಸಂಕಷ್ಟ

ಸಾರ್ವಜನಿಕರ ಹಿತ ಕಾಪಾಡುವವರು ಯಾರು?
Last Updated 13 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ರಾಯಚೂರು: ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಂದ ಸಾರ್ವಜನಿಕರು ಎದುರಿಸುತ್ತಿರುವ ಕಿರಿಕಿರಿ ದಿನ ಕಳೆದಂತೆ ಹೆಚ್ಚಾಗುತ್ತಿದೆ.

ನಿಯಮಗಳನ್ನುಉಲ್ಲಂಘಿಸಲಾಗುತ್ತಿದೆ. ರಸ್ತೆ ಪಕ್ಕದಲ್ಲಿ ಮೊದಲ ದಿನ ಮರಳಿನ ರಾಶಿ ಹಾಕಿರುವುದು, ಕ್ರಮೇಣ ಅರ್ಧರಸ್ತೆವರೆಗೂ ವಿಸ್ತರಿಸಿಕೊಳ್ಳುವ ಚಿತ್ರಣ ಸಾಮಾನ್ಯವಾಗಿ ಕಾಣಬಹುದು. ಜಲ್ಲಿಕಲ್ಲುಗಳು ಆಸುಪಾಸು ರಸ್ತೆಯುದ್ದಕ್ಕೂ ಹರಡುವುದಕ್ಕೆ ಬಿಡುತ್ತಿದ್ದಾರೆ. ಸರ್ಕಾರಿ ಕಟ್ಟಡ ನಿರ್ಮಾಣ, ಪ್ರಭಾವಿಗಳ ಕಟ್ಟಡ ನಿರ್ಮಾಣ, ಖಾಸಗಿ ಕಚೇರಿಗಳ ನಿರ್ಮಾಣ, ಮಳಿಗೆಗಳ ನಿರ್ಮಾಣ ಹಾಗೂ ದೇವಸ್ಥಾನಗಳ ನಿರ್ಮಾಣ... ಯಾವುದೇ ಸ್ಥಳಕ್ಕೆ ಹೋದರೂ ನಿಯಮಗಳ ಪಾಲನೆ ಆಗದಿರುವುದು ಕಾಣುತ್ತದೆ.

ಸಾರ್ವಜನಿಕರು ತೊಂದರೆ ಅನುಭವಿಸುತ್ತಲೇ ಇದ್ದಾರೆ. ಇದೊಂದು ಕಟ್ಟಡ ಕಾಮಗಾರಿ ಮುಗಿದರೆ ಸಾಕು, ನೆಮ್ಮದಿ ಬರುತ್ತದೆ ಎಂದು ಜನರು ಅಂದುಕೊಳ್ಳುತ್ತಾರೆ. ಅಷ್ಟರೊಳಗೆ ಇನ್ನೊಂದು ಪಕ್ಕದಲ್ಲಿ ಕಟ್ಟಡ ಕಾಮಗಾರಿಯಿಂದ ಕಿರಿಕಿರಿ ಶುರುವಾಗುತ್ತದೆ. ರಸ್ತೆಗೆ ಹರಡಿದ ಮರಳಿನಲ್ಲಿ ಬೈಕ್ ಸವಾರರು ಮಗುಚಿಕೊಳ್ಳುತ್ತಿದ್ದಾರೆ. ಒಬ್ಬರಾದರೂ ಬಿದ್ದು ಗಾಯಗೊಂಡ ಬಳಿಕವೇ ಮನೆ ಮಾಲೀಕರು ಮರಳು ತೆರವು ಮಾಡಿಕೊಳ್ಳುತ್ತಿದ್ದಾರೆ. ಆಯತಪ್ಪಿ ಬಿದ್ದವರದ್ದೇ ತಪ್ಪು ಎನ್ನುವ ರೀತಿಯ ಮನೋಭಾವ ಹೆಚ್ಚಾಗಿದೆ.

ಯಾವುದೇ ಕಟ್ಟಡ ನಿರ್ಮಾಣ ಮಾಡುವಾಗ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕೆಲವು ನಿಯಮಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ನಗರಸಭೆ ಅಧಿಕಾರಿಗಳು ನಿಗಾ ವಹಿಸಬೇಕು. ಸಾಮಾನ್ಯವಾಗಿ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡುವಾಗ ಸುತ್ತಲೂ ನೆರಳು ಪರದೆ ಹಾಕಿಕೊಳ್ಳಬೇಕು ಅಥವಾ ತಗಡುಗಳನ್ನು ಅಳವಡಿಸಿ ಮರೆ ಮಾಡಿಕೊಳ್ಳಬೇಕು.. ಕಟ್ಟಡ ಸಾಮಗ್ರಿಗಳು ರಸ್ತೆಗೆ ಹರಡದೆ, ಅಕ್ಕಪಕ್ಕದ ಕಟ್ಟಡಕ್ಕೆ ಹಾನಿಯಾಗದಂತೆ‌ ಎಚ್ಚರಿಕೆ ವಹಿಸಬೇಕು. ವಾಸ್ತವದಲ್ಲಿ ಇದು ತದ್ವಿರುದ್ಧವಾಗಿದೆ. ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವವರು ಮಾತ್ರ ಸಾಮಾನ್ಯವಾಗಿ ಇಂಥ ನಿಯಮಗಳನ್ನು ಪಾಲನೆ ಮಾಡುತ್ತಾರೆ.

ನಗರಸಭೆಯ ಬಹುತೇಕ ಅಧಿಕಾರಿಗಳು, ಸದಸ್ಯರು ಕಟ್ಟಡ ನಿರ್ಮಿಸುವವರ ಪರ ವಹಿಸಿ ಸಾರ್ವಜನಿಕರ ಹಿತ ಕಾಪಾಡದಿರುವುದು ನಿಚ್ಚಳವಾಗಿ ಕಾಣುತ್ತಿದೆ. ನಿಯಮ ಪಾಲನೆ ಮಾಡಿ ಮಾದರಿಯಾಗಿರಬೇಕಾದ ಸರ್ಕಾರಿ ಕಟ್ಟಡ ನಿರ್ಮಿಸುವವರು ಹಾಗೂ ರಾಜಕಾರಣಿಗಳೇ ಪಾಲನೆ ಮಾಡುತ್ತಿಲ್ಲ. ಹೀಗಾಗಿ ಬೇರೆಯವರನ್ನು ಈ ಕುರಿತು ಅವರು ಪ್ರಶ್ನಿಸುವುದಿಲ್ಲ. ಹೀಗಾಗಿ ಸಾರ್ವಜನಿಕರು ತೊಂದರೆ ಅನುಭವಿಸುವುದು ಮಾತ್ರ ಕೊನೆಯಾಗುತ್ತಿಲ್ಲ. ಜನರಿಗಾಗುವ ಸಮಸ್ಯೆ ಜನರೇ ಪರಿಹಾರ ಮಾಡಿಕೊಳ್ಳುತ್ತಾರೆ ಎನ್ನುವ ಧೋರಣೆಯೇ ಅಧಿಕವಾಗಿದೆ.

ರಸ್ತೆ ಮೇಲೆ‌ಯೇ ಮರಳು, ಜಲ್ಲಿ

ಮಸ್ಕಿ: ಮನೆ, ಮಳಿಗೆ ಕಟ್ಟಲು ತಂದು ಹಾಕಿದ ಮರಳು ಹಾಗೂ ಜಲ್ಲಿ ರಸ್ತೆ ತುಂಬೆಲ್ಲಾ ಹರಡುತ್ತಿದ್ದರಿಂದ ಸಾರ್ವಜನಿಕರು, ವಾಹನ ಸವಾರರು ತೀವ್ರ ತೊಂದರೆಗೆ ಅನುಭವಿಸುವಂತಾಗಿದೆ.

ರಸ್ತೆ ಸ್ವಚ್ಚತೆ ಬಗ್ಗೆ ಗಮನ ಹರಿಸಬೇಕಾದ ಪುರಸಭೆ ಆಡಳಿತ ನಿದ್ರಾವಸ್ಥೆಗೆ ಜಾರಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣದ ಮುಖ್ಯಬಜಾರದ ಕಾಂಕ್ರೀಟ್ ರಸ್ತೆ ಮೇಲೆ ಕಲ್ಲು, ಮಣ್ಣು, ಮರಳು ಹಾಕಿ ಹಾಗೆಯೇ ಬಿಡಲಾಗುತ್ತಿದೆ. ಸರ್ಕಾರದ ಹಾಗೂ ಸ್ಥಳೀಯ ಪುರಸಭೆಯ ವಿವಿಧ ಅನುದಾನದಲ್ಲಿ ಚರಂಡಿ ಹಾಗೂ ಕಾಂಕ್ರೀಟ್ ರಸ್ತೆ ಗುತ್ತಿಗೆ ಹಿಡಿದು ಕಾಮಗಾರಿ ಮಾಡಿಸಿದ ಗುತ್ತಿಗೆದಾರರು ಉಳಿದ ಮರಳು, ಜಲ್ಲಿ, ಮಣ್ಣನ್ನು ರಸ್ತೆಯ ಮೇಲೆ ಬಿಟ್ಟು ಹೋಗುತ್ತಾರೆ. ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದರೂ ಸಹ ಪುರಸಭೆ ಅಧಿಕಾರಿಗಳು ಸಂಬಂಧಿಸಿದ ಗುತ್ತಿಗೆದಾರರಿಗೆ , ಮನೆಯ ಮಾಲಿಕರಿಗೆ ಒಂದು ನೋಟಿಸ್ ಸಹ ನೀಡದೆ ಮೌನಕ್ಕೆ ಶರಣಾಗಿದ್ದಾರೆ.

ರಸ್ತೆ ಮೇಲೆ ಬಿದ್ದ ಜಲ್ಲಿ, ಮರಳಿನಲ್ಲಿ ಎಷ್ಟೊಬೈಕ್ ಸವಾರರು ಬಿದ್ದು ತೀವ್ರವಾಗಿ ಗಾಯಗೊಳ್ಳುತ್ತಿದ್ದಾರೆ. ಪಟ್ಟಣದ ಸ್ವಚ್ಛತೆ ಬಗ್ಗೆ ಗಮನ ಕೊಡಬೇಕಾದ ಪುರಸಭೆಯು ನಿರ್ಲಕ್ಷ ತಾಳಿರುವುದಕ್ಕೆ ಸಾರ್ವಜನಿಕರು ಅಕ್ರೋಶ ಹೊರ ಹಾಕುತ್ತಿದ್ದಾರೆ.

ಮುಖ್ಯರಸ್ತೆಯಲ್ಲೇ ಇಟ್ಟಿಗೆ, ಕಂಕರ್

ಸಿಂಧನೂರು: ನಗರದ ಬಹುತೇಕ ಮುಖ್ಯ ರಸ್ತೆಗಳ ಪಕ್ಕದಲ್ಲಿಯೇ ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಇಟ್ಟಿಗೆ, ಕಂಕರ್, ಮರಳು ಮತ್ತು ಕಬ್ಬಿಣದ ರಾಡ್‍ಗಳನ್ನು ಹಾಕಿರುವ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ನಗರದ ರಾಯಚೂರು ಮುಖ್ಯರಸ್ತೆ, ಹಟ್ಟಿ ರಸ್ತೆ, ಬಪ್ಪೂರು ರಸ್ತೆ, ನಟರಾಜ್ ಕಾಲೊನಿ, ಹಳೆಬಜಾರ್ ಸೇರಿದಂತೆ ಮತ್ತಿತರ ರಸ್ತೆಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಬೇಕಾದ ಸಾಮಗ್ರಿಗಳನ್ನು ಹಾಕಲಾಗಿದೆ. ವ್ಯಾಪಾರದ ಅಂಗಡಿ ಮುಂಗಟ್ಟುಗಳ ಮುಂದೆ ಇವುಗಳು ಬಿದ್ದಿರುವುದರಿಂದ ಪ್ರತಿನಿತ್ಯ ಕಟ್ಟಡ ನಿರ್ಮಾಣ ಮಾಲೀಕರೊಂದಿಗೆ ವಾಗ್ವಾದ ನಡೆಯುವುದು ಸಾಮಾನ್ಯವಾಗಿದೆ. ರಸ್ತೆಗಳಲ್ಲಿ ಸಂಚರಿಸುವ ವಾಹನಗಳು ಸ್ವಲ್ಪ ಆಯ ತಪ್ಪಿದರೆ ಕಬ್ಬಿಣದ ರಾಡ್ ಮತ್ತು ಕಂಕರ್‌ ಬಿದ್ದು ಅಪಘಾತಕ್ಕೀಡಾಗುವ ಸಂಭವವಿದೆ.

ವಾಹನ ದಟ್ಟಣೆ ಸಮಸ್ಯೆ

ದೇವದುರ್ಗ: ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಗಾಂಧಿ ಸರ್ಕಲ್ ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮುಖ್ಯರಸ್ತೆಯಲ್ಲಿ ಕಟ್ಟಡಗಳು ನಿರ್ಮಿಸುತ್ತಿರುವ ಮಾಲೀಕರು ಮರಳು, ಇಟ್ಟಿಗೆ, ಜಲ್ಲಿ ನಿರ್ಮಾಣಕ್ಕೆ ಬೇಕಾಗುವ ಇತರೆ ಸಾಮಗ್ರಿಗಳನ್ನು ಮುಖ್ಯರಸ್ತೆಯ ಮೇಲೆಯೇ ಹಾಕಿರುವುದರಿಂದ ಸಾರ್ವಜನಿಕರಿಗೆ ಹಾಗೂವಾಹನ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟುತ್ತಿದೆ.

ಬೆಳಗಿನ ಅವಧಿಯಲ್ಲಿ ಶಾಲಾ-ಕಾಲೇಜಿಗೆ ತೆರಳುತ್ತಿರುವ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಲೋಕಲ್ ಆಟೋರಿಕ್ಷಾಗಳು ರಸ್ತೆಯಲ್ಲಿ ಓಡಾಡುವುದರಿಂದ ಸುಮಾರು ಅರ್ಧ ಗಂಟೆ ಕಾಯಬೇಕು. ಪುರಸಭೆ ಮುಖ್ಯಾಧಿಕಾರಿ ಇತ್ತ ಗಮನಹರಿಸಿ ರಸ್ತೆ ಮೇಲೆ ಹಾಕಿರುವ ಕಟ್ಟಡ ನಿರ್ಮಾಣದ ಕಚ್ಚಾಸಾಮಗ್ರಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ.

ಪೂರಕ ವರದಿಗಳು: ಡಿ.ಎಚ್‌.ಕಂಬಳಿ, ಪ್ರಕಾಶ ಮಸ್ಕಿ, ಯಮನೇಶ ಗೌಡಗೇರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT