ಭಾನುವಾರ, ಜುಲೈ 25, 2021
25 °C
ನಷ್ಟದಲ್ಲಿ ಎನ್‌ಈಕೆಎಸ್‌ಆರ್‌ಟಿಸಿ ಗಂಗಾವತಿ ಘಟಕ

ನಿತ್ಯ ಸರಾಸರಿ ₹ 12 ಲಕ್ಷ ನಷ್ಟ

ಶಿವಕುಮಾರ್ ಕೆ. Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ಲಾಕ್‌ಡೌನ್‌ನಿಂದ ಎರಡು ತಿಂಗಳು ಸ್ಥಗಿತಗೊಂಡಿದ್ದ ಬಸ್‌ ಸಂಚಾರ ಪುನರಾರಂಭಗೊಂಡು 10 ದಿನಗಳಾದರೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ಬಾರದ ಕಾರಣ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗಂಗಾವತಿ ವಿಭಾಗಕ್ಕೆ ನಿತ್ಯ ಸರಾಸರಿ ₹ 12 ಲಕ್ಷ ನಷ್ಟ ಉಂಟಾಗುತ್ತಿದೆ.

ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಜಾರಿಯಾಗಿರುವ ಲಾಕ್‌ಡೌನ್‌ನಿಂದಾಗಿ ಬಸ್‌ಗಳ ಸಂಚಾರ ನಿಲ್ಲಿಸಲಾಗಿತ್ತು. ಮೇ 19 ರಿಂದ ಜಿಲ್ಲೆಯೊಳಗೆ ಹಾಗೂ ಅಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬಸ್‌ ಸಂಚಾರವನ್ನು ಪುನರಾರಂಭ ಮಾಡಲಾಗಿದೆ. ಆದರೆ, ಸಾಮಾನ್ಯ ದಿನಗಳಲ್ಲಿ ವಿಭಾಗಕ್ಕೆ ನಿತ್ಯ ಸರಾಸರಿ ₹ 12 ರಿಂದ ₹ 13 ಲಕ್ಷ ವರಮಾನ ಬರುತ್ತಿತ್ತು. ಪ್ರಸ್ತುತ ₹ 1 ರಿಂದ ₹ 1.50 ಲಕ್ಷವಷ್ಟೇ ಆದಾಯವಿದೆ.

ಪ್ರತಿದಿನ 20 ರಿಂದ 25 ಗಾಡಿ ಸಂಚಾರ :  ಸಾಮಾನ್ಯ ದಿನಗಳಲ್ಲಿ ಪ್ರತಿನಿತ್ಯ 70 ರಿಂದ 75 ಬಸ್‌ ಗಳು ಜಿಲ್ಲೆ ಹಾಗೂ ಅಂತರ ಜಿಲ್ಲೆಗಳಿಗೆ ಸಂಚಾರ ಮಾಡುತ್ತಿದ್ದವು. ಆದರೆ, ಕೊರೊನಾ ಲಾಕ್‌ಡೌನ್‌ ನಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ಬಾರದ ಹಿನ್ನೆಲೆ ನಿತ್ಯ 20 ರಿಂದ 25 ಗಾಡಿಗಳು ಮಾತ್ರ ಸಂಚರಿಸುತ್ತಿವೆ. ಆದರೆ, ತಾಲ್ಲೂಕು ಮತ್ತು ಜಿಲ್ಲೆ ಹಾಗೂ ಬೆಂಗಳೂರಿಗೆ ಮಾತ್ರ ಸದ್ಯ ಬಸ್‌ ಗಳು ಸಂಚರಿಸುತ್ತಿದ್ದು, ಗ್ರಾಮೀಣ ಭಾಗಕ್ಕೆ ಇದುವರೆಗೂ ಯಾವುದೇ ಬಸ್‌ ಗಳನ್ನು ಬಿಟ್ಟಿಲ್ಲ.

ಪ್ರಯಾಣಿಕರ ಆರೋಗ್ಯ ತಪಾಸಣೆ: ನಿತ್ಯ ಬಸ್‌ ನಿಲ್ದಾಣಕ್ಕೆ ಆಗಮಿಸುವ ಪ್ರತಿಯೊಬ್ಬ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಅವರ ವಿವರ ಪಡೆದು ಪ್ರಯಾಣಕ್ಕೆ ಅನುವು ಮಾಡಿಕೊಡಲಾಗುತ್ತದೆ. ‌ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಬಸ್‌ ಒಂದರಲ್ಲಿ 30 ಮಂದಿ ಪ್ರಯಾಣಿಕರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ.

ಡಿಸೇಲ್‌ಗೂ ಸಾಲುತ್ತಿಲ್ಲ ಆದಾಯ:  30 ಮಂದಿ ಪ್ರಯಾಣಿಕರಿಗಷ್ಟೇ ಬಸ್ ಓಡಿಸಿದರೆ, ಸಹಜವಾಗಿಯೇ ನಷ್ಟವಾಗುತ್ತದೆ. ಕೊರೊನಾ ಭಯದಿಂದ ಪ್ರಯಾಣಿಕರು ಸಾರಿಗೆ ಸಂಚಾರ ಆರಂಭವಾದರೂ ಕೂಡ ಬಸ್‌ ನಿಲ್ದಾಣಕ್ಕೆ ಬರುತ್ತಿಲ್ಲ. ನಿತ್ಯ ಬರುತ್ತಿರುವ ಆದಾಯ ಬಸ್‌ ಗಳ ಡಿಸೇಲ್ ಗೂ ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಆದರೂ, ಸಾರ್ವಜನಿಕರಿಗೆ ಸಂಚಾರ ಸೇವೆ ಆರಂಭವಾಗಿದೆ ಎಂದು ಜನರಿಗೆ ಗೊತ್ತಾಗಲಿ ಎಂಬುದಕೋಸ್ಕರ ಬಸ್‌ಗಳನ್ನು ಸಂಚರಿಸಲಾಗುತ್ತಿದೆ ಎನ್ನುತ್ತಾರೆ ಡಿಪೋ ವ್ಯವಸ್ಥಾಪಕ ಜಡೇಶ್‌ ಅವರು.

 ಕೊವೀಡ್‌ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗುವ ಚಾಲಕರು ಹಾಗೂ ನಿರ್ವಾಹಕರೆಲ್ಲರಿಗೂ ಮುಂಜಾಗ್ರತಾ ಕ್ರಮವಾಗಿ ಮುಖಗವಸು, ಸ್ಯಾನಿಟೈಸರ್‌ ಹಾಗೂ ಹ್ಯಾಂಡ್‌ ವಾಶ್ ನೀಡಿದ್ದೇವೆ. ನೋಟುಗಳನ್ನು ಮುಟ್ಟುವ ಕಾರಣದಿಂದ ನಿರ್ವಾಹಕರಿಗೆ ಕೈಗವಸುಗಳನ್ನು ಒದಗಿಸಿದ್ದೇವೆ. ಜೊತೆಗೆ ಡಿಪೋದಲ್ಲಿ ಬಸ್‌ ಗಳಿಗೆ ಪ್ರತಿನಿತ್ಯ ಸ್ಯಾನಿಟೈಜ್‌ ಕೂಡ ಮಾಡಲಾಗುತ್ತದೆ‌ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.