ಭಾನುವಾರ, ಅಕ್ಟೋಬರ್ 17, 2021
22 °C
ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡ ಉದ್ಘಾಟಿಸಿದ ಸಚಿವ ಶ್ರೀರಾಮುಲು

ಹಾಸ್ಟೆಲ್‌ಗೆ ಬಸ್‌ ಸೌಲಭ್ಯಕ್ಕೆ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ‘ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ನಗರದಿಂದ ಎರಡು ಕಿ.ಮೀ ದೂರದಲ್ಲಿ ಇರುವುದರಿಂದ ಕಾಲೇಜಿಗೆ ಹೋಗಲು ಬಸ್ ಸೌಕರ್ಯ, ರಕ್ಷಣೆಯ ಹಿನ್ನೆಲೆಯಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಮತ್ತು ಸೆಕ್ಯೂರಿಟಿ ಗಾರ್ಡ್ ಸೌಕರ್ಯ ಕಲ್ಪಿಸಲಾಗುವುದು‘ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದರು.

ಇಲ್ಲಿನ ಹೊರವಲಯದ ಶಿವಜ್ಯೋತಿ ನಗರದಲ್ಲಿ ನಿರ್ಮಿಸಿರುವ ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಅಹವಾಲು ಆಲಿಸಿ ಮಾತನಾಡಿದ ಅವರು, ‘ನಾಳೆಯೇ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುವುದು, ಸೆಕ್ಯೂರಿಟಿ ಗಾರ್ಡ್ ನೇಮಕ ಮಾಡಲಾಗುವುದು. ಜೊತೆಗೆ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಆರ್‍ಓ ಪ್ಲಾಂಟ್ ವ್ಯವಸ್ಥೆ ಕಲ್ಪಿಸಲಾಗುವುದು. ಹಾಸ್ಟೆಲ್ ಸುತ್ತಲಿನ ಪ್ರದೇಶಗಳಲ್ಲಿ ಕುಡುಕರ ಹಾವಳಿ ನಿಯಂತ್ರಣಕ್ಕಾಗಿ ಪೊಲೀಸರಿಂದ ಗಸ್ತು ತಿರುಗಿಸಲಾಗುವುದು’ ಎಂದರು.

ಶಾಸಕ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರುಪಾಪುರ, ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯ ನಿರ್ದೇಶಕ ಪಿ.ಎಸ್.ಕಾಂತರಾಜು, ಕಾರ್ಯನಿರ್ವಾಹಕ ಎಂಜನಿಯರ್ ರಾಜಶೇಖರ, ಪರಿಶಿಷ್ಟ ವರ್ಗದ ಜಿಲ್ಲಾ ಕಲ್ಯಾಣಾಧಿಕಾರಿ ಚಿದಾನಂದಪ್ಪ, ತಾಲ್ಲೂಕು ಕಲ್ಯಾಣಾಧಿಕಾರಿ ಶಿವಮಾನಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹಾಲಿಂಗ ಇಂಗಳದಾಳ ಹಾಗೂ ಹಾಸ್ಟೆಲ್‍ಗಳ ಮೇಲ್ವಿಚಾರಕರು ಇದ್ದರು.

‘ಪರಿಶಿಷ್ಟರ ಪ್ರಗತಿಗೆ ಸರ್ಕಾರ ಬದ್ಧ’

ಸಿಂಧನೂರು: ರಾಯಚೂರು ಜಿಲ್ಲೆಯಲ್ಲಿ ₹ 60 ಕೋಟಿ ವೆಚ್ಚದಲ್ಲಿ ಪರಿಶಿಷ್ಟ ವರ್ಗಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳ ವಸತಿ ನಿಲಯ, ವಾಲ್ಮೀಕಿ ಭವನ ನಿರ್ಮಿಸಲಾಗುವುದು. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ ಸೌಲಭ್ಯದ ಜೊತೆಗೆ ಉಚಿತ ಲ್ಯಾಪ್‍ಟಾಪ್ ವಿತರಣೆ ಮಾಡಿ ಶಿಕ್ಷಣಕ್ಕೆ ಪ್ರೋತ್ಸಾಹ ಮಾಡಲಾಗುವುದು’ ಎಂದು ಸಚಿವ ಶ್ರೀರಾಮುಲು ಹೇಳಿದರು. 

ತಾಲ್ಲೂಕಿನ ಅಂಬಾಮಠದ ಅಂಬಾದೇವಿ ದೇವಸ್ಥಾನದ ಗರ್ಭಗುಡಿಯ ಹೊರ ಪ್ರಾಂಗಣ ಸುತ್ತಲೂ ಹೊಸದಾಗಿ ಶಿಲಾ ಮಂಟಪ ನಿರ್ಮಿಸಲು ರಾಜ್ಯ ಸರ್ಕಾರ ₹ 7.93 ಕೋಟಿ ಹಣ ಮಂಜೂರು ಮಾಡಿದೆ ಎಂದು ಸಚಿವರು ಹೇಳಿದರು.

ಕೊಪ್ಪಳ ಕ್ಯಾಂಪ್‍ಗೆ ಬಸ್ ಸಂಚಾರದ ಸೌಲಭ್ಯ ಇಲ್ಲವೆಂದು ಸುದ್ದಿಗಾರರು ಪ್ರಶ್ನಿಸಿದಾಗ ಸಚಿವ ಶ್ರೀರಾಮುಲು ಸ್ಥಳೀಯ ಡಿಪೋ ವ್ಯವಸ್ಥಾಪಕರಿಗೆ ದೂರವಾಣಿ ಕರೆ ಮಾಡಿ,  ‘ನಾಳೆಯಿಂದಲೇ ಶಾಲಾ ವಿದ್ಯಾರ್ಥಿಗಳ ಸಮಯಕ್ಕೆ ಅನುಗುಣವಾಗಿ ಬಸ್ ಸಂಚಾರ ವ್ಯವಸ್ಥೆ ಮಾಡಬೇಕು’ ಎಂದು ಸೂಚನೆ ನೀಡಿದರು. 

‘ಆರ್‌ಟಿಒ ಕಚೇರಿಯನ್ನು ಸಿಂಧನೂರಿನಲ್ಲಿ ಮಾಡುವಂತೆ ಒತ್ತಾಯವಿದ್ದು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದೂ ತಿಳಿಸಿದರು.

ಮಸ್ಕಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೊಲ್ಲಾ ಶೇಷಗಿರಿರಾವ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರುಪಾಪುರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಟಿ.ಹನುಮೇಶ ಸಾಲಗುಂದಾ, ನಗರ ಮಂಡಲ ಅಧ್ಯಕ್ಷೆ ಪ್ರೇಮಾ ಸಿದ್ದಾಂತಿಮಠ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಮುಖಂಡ ಮಧ್ವರಾಜ್ ಆಚಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.