ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಮಾರುಕಟ್ಟೆಯಲ್ಲಿ ಗುಲ್ಲೆಬ್ಬಿಸಿದ ಗಜ್ಜರಿ!

ಪೂರೈಕೆಗಿಂತಲೂ ಹೆಚ್ಚಿದ ಬೇಡಿಕೆಯಿಂದಾಗಿ ದುಬಾರಿ
Last Updated 26 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ರಾಯಚೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ತರಕಾರಿ ದರಗಳೆಲ್ಲ ಗಗನಮುಖಿಯಾಗಿವೆ. ಗಜ್ಜರಿ ಗುಲ್ಲೆಬಿಸಿದ್ದು ದಿನದಿಂದ ದಿನಕ್ಕೆ ದರ ಏರಿಕೆ ಆಗುತ್ತಿದೆ.

ಈಚೆಗೆ ಎಡಬಿಡದೆ ಸುರಿದ ಮಳೆ ಕಾರಣದಿಂದ ಭೂಮಿಯೊಳಗೆ ಬೆಳೆಯುವ ಈರುಳ್ಳಿ, ಮೂಲಂಗಿ, ಗೆಣಸು, ಗಜ್ಜರಿಗಳೆಲ್ಲ ಸಾಕಷ್ಟು ಹಾಳಾಗಿವೆ. ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ. ಬೇಡಿಕೆ ಹೆಚ್ಚಿದ್ದರಿಂದ ಅಳಿದುಳಿದ ತರಕಾರಿ ದರಗಳು ಗಗನಮುಖಿಯಾಗಿವೆ. ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಂದ ತರಕಾರಿಗಳು ಬರುತ್ತಿವೆ. ಈ ಮಳೆಗಾಲದಲ್ಲಿ ಆಲೂಗಡ್ಡೆ ದರವು ಶೇ 120 ರಷ್ಟು ಹೆಚ್ಚಳವಾಗಿದೆ. ಜೂನ್‌ ಮೊದಲು ಒಂದು ಕೆಜಿ ಆಲೂಗಡ್ಡೆ ₹20 ರಷ್ಟಿತ್ತು, ಈಗ ಕೆಜಿಗೆ ₹50 ರಷ್ಟಾಗಿದೆ. ಉತ್ತರ ಭಾರತದಿಂದ ಸಾಕಷ್ಟು ಪ್ರಮಾಣದಲ್ಲಿ ಪೂರೈಕೆ ಆಗುತ್ತಿಲ್ಲ ಎನ್ನುವುದು ತರಕಾರಿ ಸಗಟು ವ್ಯಾಪಾರಿಗಳ ವಿವರಣೆ.

‘ಮಳೆಯಿಂದಾಗಿ ಜಮೀನಿನಲ್ಲಿ ಶೇ 30 ರಿಂದ 40 ರಷ್ಟು ತರಕಾರಿ ಹಾಳಾಗಿದೆ. ಆದರೆ, ದುಬಾರಿ ದರ ಇರುವುದರಿಂದ ನಷ್ಟವು ಅದರಲ್ಲಿ ಸರಿದೂಗುತ್ತಿದೆ. ಮಳೆ ಆರಂಭವಾಗುವ ಮೊಲದು ಪ್ರತಿದಿನ 10 ಚೀಲ ಬದನೆಕಾಯಿ ಮಾರುಕಟ್ಟೆಗೆ ಕಳಿಸುತ್ತಿದ್ದೆ. ಈಗ ಐದರಿಂದ 7 ಚೀಲ ಮಾತ್ರ ಬದನೆಕಾಯಿ ಕಳಿಸುತ್ತಿದ್ದೇನೆ’ ಎಂದು ಪಲಕಂದೊಡ್ಡಿ ರೈತ ಬಸವರಾಜ ಅವರು ಹೇಳುವ ಮಾತಿದು.

ನವರಾತ್ರಿ ಹಬ್ಬದಲ್ಲಿ ಹೂವು–ಹಣ್ಣುಗಳಿಗಿಂತಲೂ ತರಕಾರಿ ದರಗಳು ಹೆಚ್ಚಳವಾಗಿವೆ. ಬೆಂಡೆಕಾಯಿ, ಹಿರೇಕಾಯಿ, ಬದನೆಕಾಯಿ, ಹಸಿಮೆಣಸು ಮಾತ್ರ ರಾಯಚೂರಿನ ರೈತರು ತೆಗೆದುಕೊಂಡು ಬರುತ್ತಾರೆ. ಹೀಗಾಗಿ ದರದಲ್ಲಿ ಗಮನಾರ್ಹ ಬದಲಾವಣೆ ಆಗಿಲ್ಲ. ಆದರೆ, ಸವತೆಕಾಯಿ, ಗಜ್ಜರಿ, ಹೂಕೋಸು, ಎಲೆಕೋಸುಗಳಿಗೆ ಎಲ್ಲ ಕಡೆಗಳಲ್ಲೂ ಬೇಡಿಕೆ ಇರುವುದರಿಂದ ಸಹಜವಾಗಿ ರಾಯಚೂರಿನಲ್ಲಿಯೂ ದರ ಏರಿಕೆ ಆಗಿದೆ ಎಂದು ತರಕಾರಿವ್ಯಾಪಾರಿಗಳು ಹೇಳಿದರು.

‘ಕೊರೊನಾ ಸಂಕಷ್ಟದ ಕಾಲದಲ್ಲಿ ಜನರು ಕೆಜಿ ಲೆಕ್ಕದಲ್ಲಿ ತರಕಾರಿಗಳನ್ನು ಖರಿದಿಸುವುದನ್ನು ನಿಲ್ಲಿಸಿದ್ದಾರೆ. ಬಡ, ಮಾಧ್ಯಮವರ್ಗದ ಜನರು ಪಾವ್‌ಕಿಲೋ ತರಕಾರಿ ಖರೀದಿಸುತ್ತಾರೆ. ಯಾವಾಗಲೂ ಅಗ್ಗದಲ್ಲಿ ಸಿಗುತ್ತಿದ್ದ ಆಲೂಗಡ್ಡೆ, ಟೊಮೊಟೊ ಹಾಗೂ ಸೊಪ್ಪುಗಳ ದರ ಕೂಡಾ ಶೇ 50 ಕ್ಕಿಂತ ಹೆಚ್ಚಾಗಿದೆ. ಜೀವನ ನಡೆಸುವುದು ಬಹಳ ಕಷ್ಟವಾಗುತ್ತಿದೆ’ ಎಂದು ಎಲ್‌ಬಿಎಸ್‌ ನಗರ ನಿವಾಸಿ ನರಸಿಂಹ ಹೇಳಿದರು.

ರಾಯಚೂರು: ತರಕಾರಿ ದರ ವಿವರ
ತರಕಾರಿ; ಹಿಂದಿನ ವಾರ(ಒಂದು ಕೆಜಿ); ಈ ವಾರ (ಒಂದು ಕೆಜಿ)
ಟೊಮೆಟೊ; ₹30; ₹40
ಹಿರೇಕಾಯಿ; ₹50; ₹60
ಆಲೂಗಡ್ಡೆ;₹45; ₹50
ಮೆಣಸಿನಕಾಯಿ;₹40; ₹40
ಬೀನ್ಸ್‌;₹70; ₹80
ಗೋಬಿ;₹50; ₹60
ಬೆಂಡೆಕಾಯಿ;₹40; ₹60
ದೊ.ಮೆಣಸಿನಕಾಯಿ;₹40; ₹60
ಬದನೆಕಾಯಿ;₹40; ₹50
ಸವತೆಕಾಯಿ;₹50; ₹60
ಈರುಳ್ಳಿ;₹80; ₹100
ಹೂಕೋಸು;₹70; ₹100
ಚವಳೆಕಾಯಿ;₹60;₹80
ಗಜ್ಜರಿ;₹80; ₹120
ಹಸಿಬಟಾಣೆ;₹140;₹200
***********
ಲಾಕ್‌ಡೌನ್‌ ದಿನಗಳಲ್ಲಿ ಪ್ರತಿಯೊಂದು ಬಡಾವಣೆಗಳಲ್ಲಿ ತರಕಾರಿ ವ್ಯಾಪಾರ ಆರಂಭಿಸಲಾಗಿದೆ. ಹೀಗಾಗಿ ಮುಖ್ಯ ಮಾರುಕಟ್ಟೆಗೆ ಜನರು ಬರುವುದು ಕಡಿಮೆಯಾಗಿದ್ದು, ವ್ಯಾಪಾರವು ನಿರೀಕ್ಷಿತ ಮಟ್ಟದಲ್ಲಿ ಇಲ್ಲ.
– ಮೆಹಬೂಬ್‌, ತರಕಾರಿ ವ್ಯಾ‍‍ಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT