ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು | ತಾಂಡಾದಲ್ಲಿ ಪ್ರಜಾಪ್ರಭುತ್ವ ಹಬ್ಬದ ಸಂಭ್ರಮ

ಗೋನವಾಟ್ಲ ತಾಂಡಾದ ಮತಗಟ್ಟೆ-48ರಲ್ಲಿ ಗಮನ ಸೆಳೆದ ಸಾಂಪ್ರದಾಯಿಕ ಆಚರಣೆ
ಬಿ.ಎ. ನಂದಿಕೋಲಮಠ
Published 8 ಮೇ 2024, 6:05 IST
Last Updated 8 ಮೇ 2024, 6:05 IST
ಅಕ್ಷರ ಗಾತ್ರ

ಲಿಂಗಸುಗೂರು: ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಸಾಂಪ್ರದಾಯಿಕ ಮತಗಟ್ಟೆ-48 ಗೋನವಾಟ್ಲ ತಾಂಡಾದಲ್ಲಿ ಬಂಜಾರ ಸಮುದಾಯದ ಹಿರಿಯರು ಸೇರಿದಂತೆ ಯುವಕ ಯುವತಿಯರು ಸಾಂಪ್ರದಾಯಿಕ ಉಡುಗೆ ಧರಿಸಿ ಪ್ರಜಾಪ್ರಭುತ್ವದ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ಮಂಗಳವಾರ ಬೆಳಿಗ್ಗೆ ಮತಗಟ್ಟೆ ಅಧಿಕಾರಿ, ಸಹಾಯಕ ಸಿಬ್ಬಂದಿ ಬಂಜಾರ ಉಡುಗೆ ಧರಿಸಿಯೇ ಚುನಾವಣಾ ಪ್ರಕ್ರಿಯೆ ಆರಂಭಿಗೊಳಿಸಿದರು. ಕನ್ಯಾಮಣಿ ಯುವತಿಯರು ಸಾಂಪ್ರದಾಯಿಕ ಉಡುಗೆ ಧರಿಸಿ ತೀಜ ತಲೆ ಮೇಲೆ ಹೊತ್ತು ತಂದು ವಿದ್ಯುನ್ಮಾನ ಮತಯಂತ್ರಕ್ಕೆ ಪೂಜೆ ಸಲ್ಲಿಸುತ್ತಿದ್ದಂತೆ ಮತದಾನ ಆರಂಭಗೊಂಡಿತು.

ಮತಗಟ್ಟೆ ಸಿಬ್ಬಂದಿ ಪುರುಷರು ಸಾದಾ ಪಂಚೆ, ಕಾಚಾಕೋಡಿ ಟೋಪಿ(ಪಾಗಡಿ), ಮಹಿಳೆಯರು ಪೇಟಿಯಾ (ಲಂಗ), ಕಾಂಚಾಳಿ (ಜಾಕೀಟು), ಛಾಟೀಯಾ (ಮೇಲುವಸ್ತ್ರ) ಧರಿಸಿ ಮತದಾನ ಪ್ರಕ್ರಿಯೆ ನಿಯಮಾನುಸಾರ ನಡೆಸಿದ್ದು ಗಮನ ಸೆಳೆಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಬಿಎಲ್‍ಒ ಸಿಬ್ಬಂದಿ ಕೂಡ ಉಡುಗೆ ಧರಿಸಿದ್ದು ವಿಶೇಷವಾಗಿತ್ತು.

ತಾಂಡಾದ ನಾಯಕ, ಚವ್ಹಾಣ, ರಾಠೋಡ ನೇತೃತ್ವದಲ್ಲಿ ಹಿರಿಯರು, ಮಹಿಳೆಯರು ಕೂಡ ಸಾಂಪ್ರದಾಯಿಕ ಉಡುಗೆ ಧರಿಸಿ ಮತಗಟ್ಟೆಗೆ ಆಗಮಿಸಿದ್ದರು. ತಾಂಡಾದ ಯುವತಿಯರು ಮತದಾರರಿಗೆ ತೀಜ (ಸಸಿ ಬುಟ್ಟಿ) ನೀಡಿ ಲಂಬಾಣಿ ಸಾಂಪ್ರದಾಯಿಕ ನೃತ್ಯದ ಮೂಲಕ ಮತಗಟ್ಟೆ ವರೆಗೆ ಕರೆತರುತ್ತಿರುವುದು ಕಂಡು ಬಂತು.

ಮತಗಟ್ಟೆಯಲ್ಲಿ ಮತದಾನ ಮಾಡಿ ಹೊರಬರುವ ಮತದಾರರಿಗೆ ಯುವತಿಯರು ಮತಗಟ್ಟೆ ಹೊರಭಾಗದಲ್ಲಿನ ಸೆಲ್ಫಿ ಕಾರ್ನ್‍ರದಲ್ಲಿ ಫೋಟೊ ಕ್ಲಿಕ್ಕಿಸಿಕೊಳ್ಳಲು ಉತ್ತೇಜನ ನೀಡಿದರು. ತಾಂಡಾದ ಹಿರಿಯರು, ಕಿರಿಯರು ಪಕ್ಷಾತೀತವಾಗಿ ಬಂಜಾರ ಸಾಂಪ್ರದಾಯಿಕ ಹಾಡು, ನೃತ್ಯಗಳ ಮೂಲಕ ಹಬ್ಬದ ಮಾದರಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ತಹಶೀಲ್ದಾರ್‌ ಮಲ್ಲಪ್ಪ ಯರಗೋಳ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸಯ್ಯ ಗೊರೆಬಾಳ ಸೇರಿದಂತೆ ಸೆಕ್ಟರ್‌ ಸೇರಿದಂತೆ ಇತರೆ ತಂಡಗಳ ಅಧಿಕಾರಿಗಳು ಸಂಭ‍್ರಮಾಚರಣೆಯಲ್ಲಿ ಭಾಗವಹಿಸಿ ಹರ್ಷ ಹಂಚಿಕೊಂಡರು.

ಲಿಂಗಸುಗೂರು ತಾಲ್ಲೂಕಿನ ಗೋನವಾಟ್ಲ ತಾಂಡಾದ ಸಾಂಪ್ರದಾಯಿಕ ಮತಗಟ್ಟೆ-48ರಲ್ಲಿ ಮಂಗಳವಾರ ಮತ ಚಲಾಯಿಸಿದ ಮತದಾರರು ಸೆಲ್ಫಿ ತೆಗೆದುಕೊಳ್ಳುತ್ತಿರುವುದು
ಲಿಂಗಸುಗೂರು ತಾಲ್ಲೂಕಿನ ಗೋನವಾಟ್ಲ ತಾಂಡಾದ ಸಾಂಪ್ರದಾಯಿಕ ಮತಗಟ್ಟೆ-48ರಲ್ಲಿ ಮಂಗಳವಾರ ಮತ ಚಲಾಯಿಸಿದ ಮತದಾರರು ಸೆಲ್ಫಿ ತೆಗೆದುಕೊಳ್ಳುತ್ತಿರುವುದು

ಚಪ್ಪಾಳೆ ತಟ್ಟುತ್ತ ಲಯಭರಿತ ನೃತ್ಯದ ಸ್ವಾಗತ ಮತದಾರರ ಜೊತೆ ಯುವಕ-ಯುವತಿಯರ ಹೆಜ್ಜೆ ಮನೆ ಮನೆಯಿಂದ ಮತಗಟ್ಟೆಗೆ ಬಂದ ಮತದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT