ರಾಯಚೂರು: ಪ್ರತಿಯೊಬ್ಬ ಗ್ರಾಹಕ ತನಗಾದ ಸಮಸ್ಯೆಗಳನ್ನು ಗ್ರಾಹಕರ ವೇದಿಕೆ ಅಥವಾ ನ್ಯಾಯಾಲಯದಲ್ಲಿ ಪರಿಹರಿಸಿಕೊಳ್ಳಬಹುದಾಗಿದ್ದು, ಗ್ರಾಹಕರು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಮಾರುತಿ ಬಗಾಡೆ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಹಂತದಲ್ಲೂ, ವಲಯಗಳಲ್ಲಿಯೂ ಗ್ರಾಹಕರಿರುತ್ತಾರೆ ಹಾಗೂ ಆ ವಲಯಗಳಲ್ಲಿ ವ್ಯಾಪಾರದ ಸಂದರ್ಭದಲ್ಲಿ ಅಳತೆಗಳಲ್ಲಿ ವ್ಯತ್ಯಾಸಗಳನ್ನು ಹಾಗೂ ಮೋಸಗಳನ್ನು ಕಾಣುತ್ತೇವೆ ಅಥವಾ ಗ್ರಾಹಕರಿಗಾಗುವ ಇನ್ನಿತರ ಸಮಸ್ಯೆಗಳನ್ನು ಕಾನೂನಿನಡಿಯಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ.
ಪ್ರತಿಯೊಬ್ಬರು ಗ್ರಾಹಕರಿಗಾಗಿ ಇರುವ ಹಕ್ಕುಗಳ ಹಾಗೂ ಕಾಯ್ದೆಗಳ ಕುರಿತು ಜಾಗೃತರಾಗಿರಬೇಕು. ಹಾಗೂ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವೂ ಸಹ ಆಗಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಆಧಿಕಾರಿ ಶಶಿಧರ ಕುರೇರ ಮಾತನಾಡಿ, ಗ್ರಾಹಕರ ಹಕ್ಕುಗಳನ್ನು ಕಾಯ್ದೆಗಳಲ್ಲಿರುವ ಕಾನೂನಿನ ಅಂಶಗಳನ್ನು ತಿಳಿದುಕೊಳ್ಳಬೇಕು. ಗ್ರಾಹಕರಿಗೆ ಯಾವುದೇ ಸಮಸ್ಯೆಯಾದಲ್ಲಿ ಅವುಗಳನ್ನು ಗ್ರಾಹಕರ ರಕ್ಷಣಾ ಆಯೋಗಕ್ಕೆ ಅರ್ಜಿ ಸಲ್ಲಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ. ಜೊತೆಗೆ ಆಹಾರ ಕಲಬೆರಿಕೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಜನರು ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ವೆಂಕಟೇಶ ಜೋಷಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಯಾನಂದ ಎಂ.ಬೇಲೂರೆ, ಹೆಚ್ಚುವರಿ ಜಿಲ್ಲಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ಫರ್ಹಿನ್ ಬೇಗಂ, ಪ್ರಭುದೇವ ಪಾಟೀಲ್, ವಿಕ್ರಮ್ ನಾಯರ್, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಕೃಷ್ಣ ಶಾವಂತಗೇರಿ ಮತ್ತಿತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.