ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರಿನಿಂದ ರೈಲ್ವೆಯಲ್ಲಿ ಹತ್ತಿ ಮೂಟೆ ಸಾಗಣೆ ಆರಂಭ

Last Updated 5 ಅಕ್ಟೋಬರ್ 2021, 14:16 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರಿನಿಂದ ಇದೇ ಮೊದಲು, ಸರಕು ಸಾಗಣೆ ಬೋಗಿಗಳಲ್ಲಿ ಹತ್ತಿ ಮೂಟೆ (ಬೇಲ್‌)ಗಳನ್ನು ತುಂಬಿಸಿಕೊಂಡ ರೈಲು ಪಶ್ಚಿಮ ಬಂಗಾಳದ ಬನಗಾಂವನತ್ತ ಸೋಮವಾರ ಸಂಚಾರ ಆರಂಭಿಸಿದೆ ಎಂದು ದಕ್ಷಿಣ ಮಧ್ಯೆ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಚ.ರಾಕೇಶ ತಿಳಿಸಿದ್ದಾರೆ.

ಜಿನ್ನಿಂಗ್‌ ಹಾಗೂ ಪ್ರೆಸಿಂಗ್‌ ಮಾಡಿರುವ ಹತ್ತಿ ಮೂಟೆಗಳಿರುವ 21 ಭೋಗಿ (ರೇಕ್‌)ಗಳನ್ನು ಉದ್ಯಮಿಯೊಬ್ಬರು ರಾಯಚೂರಿನಿಂದ ರವಾನಿಸಿದ್ದಾರೆ. ಒಟ್ಟು 1,871 ಕಿಲೋ ಮೀಟರ್‌ ದೂರ ರೈಲ್ವೆ ಸಂಚರಿಸಿ ಮೂಟೆಗಳನ್ನು ತಲುಪಿಸಲಿದೆ. ರಾಯಚೂರು ರೈಲ್ವೆ ನಿಲ್ದಾಣದ ಮೂಲಕ ಸರಕು ಸಾಗಣೆ ಭೋಗಿಗಳಲ್ಲಿ ಇದುವರೆಗೂ ಅಕ್ಕಿ ಹಾಗೂ ಸಿಮೆಂಟ್‌ ಮಾತ್ರ ಸಾಗಿಸಲಾಗುತ್ತಿತ್ತು.

‘ಸರಕು ಸಾಗಣೆ ವ್ಯವಹಾರ ವಿಸ್ತರಣೆಗೆ ಇರುವ ಹೊಸಹೊಸ ಅವಕಾಶಗಳನ್ನು ಗುಂತಕಲ್‌ ರೈಲ್ವೆ ವಿಭಾಗದ ಅಧಿಕಾರಿಗಳ ತಂಡವು ಮತ್ತಷ್ಟು ಹುಡುಕಬೇಕು' ಎಂದು ದಕ್ಷಿಣ ಮಧ್ಯೆ ರೈಲ್ವೆ ಪ್ರಧಾನ ವ್ಯವಸ್ಥಾಪಕ ಗಜಾನನ ಮಲ್ಯ ಅವರು ತಂಡವನ್ನು ಶ್ಲಾಘಿಸಿದ್ದಾರೆ.

‘ಆರ್ಥಿಕವಾಗಿ ಅನುಕೂಲವಾಗಿರುವ, ಸುರಕ್ಷಿತ, ವೇಗ ಹಾಗೂ ಪರಿಸರ ಸ್ನೇಹಿಯಾಗಿರುವ ರೈಲ್ವೆ ಸರಕು ಸಾಗಣೆಯ ಅನುಕೂಲವನ್ನು ಉದ್ಯಮಿಗಳು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.

ಗುಂತಕಲ್‌ ರೈಲ್ವೆ ವಿಭಾಗದ ‘ವ್ಯವಹಾರ ಅಭಿವೃದ್ಧಿ ತಂಡ’ವು ಸರಕು ಸಾಗಣೆ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ನಿರಂತರ ಪ್ರಯತ್ನ ಮುಂದುವರಿಸಿದೆ. ಸರಕು ಸಾಗಣೆಯಿಂದಾಗುವ ಅನುಕೂಲಗಳ ಬಗ್ಗೆ ಮತ್ತು ರೈಲ್ವೆ ತಲುಪುವ ವಿಸ್ತಾರದ ಕುರಿತು ತಂಡವು ವಿವಿಧ ಕಡೆಗಳಲ್ಲಿ ಉದ್ಯಮಿಗಳಿಗೆ ಮನವರಿಕೆ ಮಾಡಿಕೊಡುತ್ತಿದೆ. ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಬಹಳಷ್ಟು ವಿಷಯಗಳನ್ನು ರೈಲ್ವೆ ಮಂಡಳಿ ಸಭೆಗಳಲ್ಲೂ ಚರ್ಚಿಸಲಾಗಿತ್ತದೆ ಎಂದು ತಿಳಿಸಲಾಗಿದೆ.

ರೈಲ್ವೆ ಸರಕುಸಾಗಣೆ ಸೇವೆ ಬಳಸಲು ಮುಂದೆ ಬಂದಿರುವ ಹತ್ತಿ ಕಾರ್ಖಾನೆ ಮಾಲೀಕರು, ರಾಯಚೂರಿನಿಂದ ಪಶ್ಚಿಮ ಬಂಗಾಳಕ್ಕೆ ಇದೇ ಮೊದಲ ಸಲ ಹತ್ತಿಮೂಟೆಗಳ ರವಾನೆ ಆರಂಭಿಸಿದ್ದಾರೆ. ಇದರಿಂದ ಪರೋಕ್ಷವಾಗಿ ರೈಲ್ವೆ ಇಲಾಖೆಗೂ ಆದಾಯ ಹೆಚ್ಚಳವಾಗಲಿದೆ.

‘ಪಶ್ಚಿಮ ಬಂಗಾಳದಲ್ಲಿ ನೂಲಿನ ಗಿರಣಿಗಳಿವೆ. ಅಲ್ಲಿ ಪ್ರೆಸಿಂಗ್‌ ಹತ್ತಿಯಿಂದ ನೂಲು ತಯಾರಿಸಿ ಬಾಂಗ್ಲಾದೇಶಕ್ಕೆ ರವಾನಿಸಲಾಗುತ್ತದೆ. ರಾಯಚೂರು ಹತ್ತಿ ಪಶ್ಚಿಮ ಬಂಗಾಳದ ಮೂಲಕ ಬಾಂಗ್ಲಾದೇಶ ತಲುಪಲಿದೆ. ಇದರಿಂದ ಸಾಗಣೆ ವೆಚ್ಚ ಉಳಿತಾಯದ ಜೊತೆಗೆ ನೇರ ಹಣ ವರ್ಗಾವಣೆಯ ಅನುಕೂಲವೂ ಹತ್ತಿ ಕಾರ್ಖಾನೆಗಳ ಮಾಲೀಕರಿಗೆ ಸಿಗುತ್ತದೆ’ ಎಂದು ರಾಯಚೂರು ಹತ್ತಿ ಕಾರ್ಖಾನೆಗಳ ಮಾಲೀಕರ ಸಂಘದ ಅಧ್ಯಕ್ಷ ಲಕ್ಷ್ಮೀರೆಡ್ಡಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT