ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಗರಿಗೆದರಿದ ಹತ್ತಿ ಕೊಯ್ಲು

ಆಂಧ್ರ, ತೆಲಂಗಣದಿಂದಲೂ ಕೂಲಿ ಕಾರ್ಮಿಕರ ತಂಡಗಳು
Last Updated 14 ನವೆಂಬರ್ 2021, 13:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಾದ್ಯಂತ ಹತ್ತಿ ಕೊಯ್ಲು ಭರದಿಂದ ನಡೆಯುತ್ತಿದ್ದು, ಬಹುತೇಕ ರೈತ ಕುಟುಂಬಗಳು ಹತ್ತಿ ಬಿಡಿಸುವ ಹಾಗೂ ಮಾರುಕಟ್ಟೆಗೆ ರವಾನಿಸುವ ಚಟುವಟಿಕೆಯಲ್ಲಿ ತೊಡಗಿವೆ.

ಹತ್ತಿ‌ ಬಿಡಿಸುವ ಕಾರ್ಮಿಕರಿಗೆ ಭಾರಿ ಬೇಡಿಕೆ ಇದ್ದು, ರೈತರಿಗೆ ಸ್ಥಳೀಯವಾಗಿ ಕಾರ್ಮಿಕರು ದೊರೆಯುವುದು ಸವಾಲಾಗಿದೆ. ಹೆಚ್ಚು ಹಣ ಕೊಟ್ಟು ಬೇರೆ ಊರುಗಳಿಂದ ಕೂಲಿಗಳನ್ನು ಕರೆತರುತ್ತಿದ್ದಾರೆ. ಕಾರ್ಮಿಕರನ್ನು ಕರೆತರುವುದಕ್ಕಾಗಿಯೇ ಮಧ್ಯವರ್ತಿಗಳು ನಿರ್ಮಾಣವಾಗಿದ್ದಾರೆ. ವಾಹನ ಬಾಡಿಗೆ ಹಾಗೂ ಮಧ್ಯವರ್ತಿ ಕಮಿಷನ್ ಕೊಟ್ಟು ಕಾರ್ಮಿಕರನ್ನು ಹತ್ತಿ ಬಿಡಿಸುವ ಕೆಲಸಕ್ಕೆ ತೊಡಗಿಸಬೇಕಿದೆ. ಕೆಲವು ಕಡೆಗಳಲ್ಲಿ ಕಾರ್ಮಿಕರಿಗೆ ಬೆಳಗಿನ ಉಪಹಾರದ ವ್ಯವಸ್ಥೆಯನ್ನೂ ರೈತರು ಮಾಡುತ್ತಿದ್ದಾರೆ.

ನೆರೆಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ಹಾಗೂ ತೆಲಂಗಾಣದ ಗದ್ವಾಲ್ ಜಿಲ್ಲೆಗಳ ಗಡಿ ಗ್ರಾಮಗಳಿಂದ ಕೂಲಿ ಕಾರ್ಮಿಕರ ತಂಡಗಳು ಪ್ರತಿದಿನ ಬುಲೆರೋ ವಾಹನದಲ್ಲಿ ತಂಡೋಪ ತಂಡವಾಗಿ ಬರುವುದು ಸಾಮಾನ್ಯ ನೋಟವಾಗಿದೆ. ಅದೇ ರೀತಿ ಕರ್ನಾಟಕದ ಗಡಿ ಗ್ರಾಮಗಳ ಕೂಲಿ ಕಾರ್ಮಿಕರು ಆಂಧ್ರ ಹಾಗೂ ತೆಲಂಗಾಣದ ಗ್ರಾಮಗಳ ರೈತರ ಜಮೀನುಗಳಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಾರೆ. ಕಾರ್ಮಿಕರು ಬೇರೆ ಊರುಗಳಿಗೆ ಕೂಲಿಗಾಗಿ ತೆರಳುವುದು ಈ ಭಾಗದಲ್ಲಿ ಹತ್ತಿ ಕೊಯ್ಲು ಸಂದರ್ಭದಲ್ಲಿ ಸಾಮಾನ್ಯವಾಗಿ ಕಂಡುಬರುವ ನೋಟ.

'ಸ್ಥಳೀಯ ರೈತರಲ್ಲಿ ಕೆಲಸ ಮಾಡಿದರೆ ಬರೀ ಕೂಲಿ ಕೊಡುತ್ತಾರೆ ಎನ್ನುವ ತಾತ್ಸಾರ ಮನೋಭಾವ ಕೆಲವರಲ್ಲಿದೆ. ಬೇರೆ ಊರುಗಳಿಗೆ ಹೋದರೆ, ಅನುಕೂಲ ಹೆಚ್ಚು ಎನ್ನುತ್ತಾರೆ, ಕೆಲವು ಕಡೆ ಎಕರೆಗೆ ಇಂತಿಷ್ಟು ಎಂದು ಗುತ್ತಿಗೆ ಹಿಡಿದು ಕೆಲಸ ಮಾಡುತ್ತಾರೆ. ಇದರಿಂದ ಹೆಚ್ಚು ಹಣವೂ ದೊರೆಯುತ್ತದೆ. ಹೋಗಿ ‌ಬರುವುದಕ್ಕೆ ವಾಹನದ ಖರ್ಚು ರೈತರೇ ಭರಿಸಬೇಕು' ಎಂದು ಬೇವಿನಬೆಂಚಿ ಗ್ರಾಮದ ರೈತ ಹುಲಿಗೆಪ್ಪ ಹೇಳುತ್ತಾರೆ.

ಒಂದು ಕೆಜಿ ಹತ್ತಿ ಬಿಡಿಸುವುದಕ್ಕೆ ಸದ್ಯಕ್ಕೆ ರೈತರು ₹6 ಕೊಡುತ್ತಿದ್ದಾರೆ. ಒಬ್ಬ ಕಾರ್ಮಿಕರು ಪ್ರತಿದಿನ ಗರಿಷ್ಠ ಕ್ವಿಂಟಲ್‌ವರೆಗೂ ಕನಿಷ್ಠ 30 ಕೆಜಿವರೆಗೂ ಬಿಡಿಸುತ್ತಾರೆ. ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆವರೆಗೂ ದಿನಗೂಲಿಯಾಗಿ ಕೆಲಸ ಮಾಡಿದರೆ, ತಲಾ ₹200 ಸಿಗುತ್ತದೆ.
ವಾಹನಗಳ ಭರಾಟೆ: ಬೆಳಗಿನ ಜಾವ ಜಿಲ್ಲೆಯ ಯಾವುದೇ ರಸ್ತೆ ಗಮನಿಸಿದರೂ ಹತ್ತಿ ತುಂಬಿಕೊಂಡ ಟ್ರ್ಯಾಕ್ಟರ್, ಲಾರಿ ಹಾಗೂ ಪಿಕ್ ಅಪ್, ಟಾಟಾ ಏಸ್ ವಾಹನಗಳು ತೆರಳುವುದನ್ನು ಕಾಣುತ್ತದೆ. ಅದೇ ರೀತಿ ಕಾರ್ಮಿಕರ ಸಾಗಾಟವೂ ಇರುತ್ತದೆ.

ರಾಯಚೂರು, ಮಾನ್ವಿ ಹಾಗೂ ಸಿಂಧನೂರಿನ ಎಪಿಎಂಸಿ ಕಮಿಷನ್ ಏಜೆಂಟರು ಹಾಗೂ ಜಿನ್ನಿಂಗ್ ಫ್ಯಾಕ್ಟರಿ ಮಾಲೀಕರು ಹತ್ತಿ ವಹಿವಾಟಿನಲ್ಲಿ ಮಗ್ನರಾಗಿದ್ದಾರೆ. ಭಾನುವಾರ ಸೇರಿದಂತೆ ರಜಾದಿನಗಳನ್ನು ಹೊರತುಪಡಿಸಿ ಪ್ರತಿದಿನವೂ ಹತ್ತಿ ಮಾರಾಟ, ಖರೀದಿ ನಡೆಯುತ್ತಿದೆ.

ಉತ್ತಮ ಇಳುವರಿ; ಕಾರ್ಮಿಕರ ಕೊರತೆ

ಸಿರವಾರ: ತಾಲ್ಲೂಕಿನ ಅರ್ಧಭಾಗ ನೀರಾವರಿ ಇನ್ನುಳಿದ ಭಾಗ ಬಯಲು ಪ್ರದೇಶವಿದೆ. ಹತ್ತಿಯು ಉತ್ತಮ ಇಳುವರಿ ಬಂದಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಎಕರೆಗೆ 8 ರಿಂದ 10 ಕ್ವಿಂಟಲ್ವರೆಗೂ ಹತ್ತಿ ಸಿಗುತ್ತಿದೆ.

ಹತ್ತಿ ಬಿಡಿಸಲು ಕೂಲಿ ಕಾರ್ಮಿಕರ ಕೊರತೆ ಇದ್ದು, ಸದ್ಯದ ಪರಿಸ್ಥತಿಯಲ್ಲಿ ದಿನಕೂಲಿಯಾದರೆ ಒಬ್ಬರಿಗೆ ₹200, ಕೆಜಿಯಂತೆ ಯಾದರೆ ಒಂದು ಕೆಜಿಗೆ ₹6 ರಿಂದ ₹7 ನಡೆದಿದೆ. ಒಬ್ಬ ಮಹಿಳೆ ಕೂಲಿಯಾದರೆ ದಿನಕ್ಕೆ 20 ಕೆಜಿವರೆಗೆ ಹತ್ತಿ ಬಿಡುಸುತ್ತಾರೆ. ಅದೇ ಕೆಜಿ ಲೆಕ್ಕದಲ್ಲಿಯಾದರೆ ಒಬ್ಬರು 40 ರಿಂದ 70 ಕೆಜಿಯವರೆಗೂ ಬಿಡುತ್ತಾರೆ ಎನ್ನುತ್ತಾರೆ ಜಮೀನಿನ ಮಾಲೀಕರು.

ಪ್ರಾರಂಭದಲ್ಲಿ ಹತ್ತಿ ಬೆಲೆ ಕ್ವಿಂಟಲ್ ಗೆ ₹8,600 ವರೆಗೂ ಖರೀದಿಸಲಾಗುತ್ತಿತ್ತು, ತಂಪಿನ ವಾತಾವರಣ, ಮಳೆ ಭಯ, ಹತ್ತಿ ಸಂಗ್ರಹ ಹೆಚ್ಚಾಗಿದ್ದರಿಂದ ₹7,500 ಕ್ಕೆ ಕುಸಿತಗೊಂಡಿದೆ.

ನಿರೀಕ್ಷಿತ ಬೆಳೆ; ಬೆಲೆ

ದೇವದುರ್ಗ: ಪ್ರಸಕ್ತ ವರ್ಷದಲ್ಲಿ ಉತ್ತಮ ಮುಂಗಾರು ಮಳೆಯಾದ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ಉತ್ತಮ ಹತ್ತಿಯನ್ನು ಬೆಳೆ ಬೆಳೆದಿರುವ ರೈತರು ಪ್ರತಿ ವರ್ಷಕ್ಕಿಂತ ಈ ವರ್ಷವೂ ಅಧಿಕ ಇಳುವರಿ ಪಡೆಯುತ್ತಿದ್ದಾರೆ.

ಈ ವರ್ಷ ಚಿನ್ನದ ಬೆಲೆಯನ್ನು ಪಡೆಯುತ್ತಿದ್ದಾರೆ. ಮಾರುಕಟ್ಟೆಗೆ ನಿರಂತರ ಹತ್ತಿ ಬರುತ್ತಿದ್ದರೂ ದರದ ಮೇಲೆ ಯಾವುದೇ ದುಷ್ಪರಿಣಾಮವಾಗಿಲ್ಲ. ಆದರೆ ಕಳೆದ ಕೆಲವು ದಿನಗಳಿಂದ ಆವರಿಸಿದ ತಂಪು ಹವಾಮಾನ, ತುಂತುರು ಮಳೆಯಿಂದಾಗಿ ರೈತರಲ್ಲಿ ಆತಂಕ ಮೂಡಿದೆ. ಹತ್ತಿ ಬೆಲೆಯು ಇದ್ದಕ್ಕಿದ್ದಂತೆ ₹800 ರಿಂದ ₹900 ಕುಸಿತವಾಗಿದೆ.


ಕೂಲಿಕಾರರ ಗುಳೆ; ಬೆಳೆಗಾರರಿಗೆ ತೊಂದರೆ

ಸಿಂಧನೂರು: ತಾಲ್ಲೂಕಿನಾದ್ಯಂತ ಹತ್ತಿ ಬೆಳೆ ಉತ್ತಮವಾಗಿದ್ದು, ಕೂಲಿಗಾರರ ಕೊರತೆಯಿಂದ ರೈತರಿಗೆ ತೊಂದರೆಯಾಗಿದೆ.

ಕೋವಿಡ್-19 ಕಡಿಮೆಯಾದ ಕೂಡಲೆ ಕೂಲಿಕಾರರು ಮತ್ತೆ ಬೆಂಗಳೂರು, ಮಂಗಳೂರ ಮತ್ತಿತರ ಕಡೆಗೆ ದುಡಿಯಲು ಗುಳೆ ಹೋಗಿದ್ದಾರೆ.

‘ಹಿಂಗಾರು ಜೋಳದ ಬೆಳೆಯು ಕೊಯ್ಲಿಗೆ ಬರುವ ಸಮಯದಲ್ಲಿ ತಮ್ಮ ತಮ್ಮ ಗ್ರಾಮಗಳಿಗೆ ಬರುತ್ತಾರೆ’ ಎನ್ನುತ್ತಾರೆ ರೈತ ಸಂಘದ ಹುಲಗಯ್ಯ.
ಹತ್ತಿ ಇಳುವರಿ ಚೆನ್ನಾಗಿ ಬಂದಿದೆ. ದರವು ಸಹ ಚೆನ್ನಾಗಿದೆ. ₹8 ಸಾವಿರಕ್ಕೆ ಕ್ವಿಂಟಲ್ ಮಾರಾಟವಾಗುತ್ತಿರುವುದು ರೈತರಿಗೆ ಲಾಭ ತಂದು ಕೊಡುತ್ತಿದೆ. ಆದರೆ ತಾಲ್ಲೂಕಿನಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಹತ್ತಿ ಬೆಳೆ ನಾಟಿ ಮಾಡಿಲ್ಲ. ಕಳೆದ ವರ್ಷ ಧಾರಣಿ ತುಂಬ ಕಡಿಮೆಯಾಗಿತ್ತು. ಬೆಳೆಯೂ ಸಹ ಸಾಧಾರಣವಾಗಿತ್ತು.

‘ರೈತರ ಬದುಕು ಈ ಬಾರಿ ಭತ್ತದ ಬೆಳೆ ಹಾಕಿರುವುದು ಕಡಿಮೆ, ಬೆಲೆ ಮಾತ್ರ ದುಬಾರಿಯಾಗಿದೆ’ ಎಂದು ರೈತ ಸೋಮಶಂಕ್ರಪ್ಪ ಅಡ್ಡಿ ತಿಳಿಸಿದರು.

ಕಣ್ಮರೆಯಾಗುತ್ತಿದೆ ಹತ್ತಿ ಬೆಳೆ

ಲಿಂಗಸುಗೂರು: ರೈತ ಸಮೂಹದ ಬೆಳ್ಳಿ ಫಸಲು ಎಂದು ಕರೆಯುವ ಹತ್ತಿ ಬೆಳೆ ಇತ್ತೀಚಿನ ವರ್ಷಗಳಲ್ಲಿ ವಿವಿಧ ರೋಗಗಳು, ಕೃಷಿ ಇಲಾಖೆ ಪ್ರೋತ್ಸಾಹದ ಕೊರತೆಯಿಂದ ತಾಲ್ಲೂಕಿನ ಮಾರುಕಟ್ಟೆಯಲ್ಲಿ ಕನಿಷ್ಠ ಬೆಲೆ ಸಿಗದೆ ಕಣ್ಮರೆಯಾಗುತ್ತಿದೆ.

ದಶಕದ ಹಿಂದೆ ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಶೇ 30ರಷ್ಟು ಪ್ರದೇಶದಲ್ಲಿ ಹತ್ತಿ ಬೆಳೆ ಬೆಳೆಯಲಾಗುತ್ತಿತ್ತು. ಏಷ್ಯಾ ಖಂಡದಲ್ಲಿಯೇ ಉತ್ತಮ ಮಾರುಕಟ್ಟೆ ಎಂದು ಗುರುತಿಸಿಕೊಂಡಿದ್ದ ರಾಯಚೂರು ಗಂಜ್‌ಗೆ ಲಿಂಗಸುಗೂರಿನಿಂದಲೂ ಸಾಕಷ್ಟು ಹತ್ತಿ ಸಾಗಣೆ ಆಗುತ್ತಿತ್ತು. ಕೆಲವು ವರ್ಷಗಳಿಂದ ರೋಗಗಳ ಹಾವಳಿ, ಕನಿಷ್ಠ ಬೆಲೆ ಸಿಗದೆ ರೈತರು ಕಂಗಾಲಾಗಿ ಕೈಬಿಟ್ಟಿದ್ದಾರೆ.

‘2020-21ರ ಸಾಲಿನಲ್ಲಿ 625 ಹೆಕ್ಟೇರ್‍ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿತ್ತು. 2021-22ನೇ ಸಾಲಿನಲ್ಲಿ 1661 ಹೆಕ್ಟೇರ್‍ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಿಕೊಂಡಿದ್ದಾರೆ. ಹತ್ತಿ ಬೆಳೆ ಬೆಳೆಯಲು ರೈತರು ಇತ್ತೀಚಿನ ವರ್ಷಗಳಲ್ಲಿ ನಿರಾಸಕ್ತಿ ತೋರಿದ್ದಾರೆ. ಇಲಾಖೆ ಅಗತ್ಯ ಸಲಹೆ, ನೆರವು ನೀಡುತ್ತಿದೆ’ ಎನ್ನುವುದು ಕೃಷಿ ಇಲಾಖೆ ಅಧಿಕಾರಿಗಳ ವಿವರಣೆ.

‘ಮಾರುಕಟ್ಟೆ ಅವ್ಯವಸ್ಥೆ, ಹತ್ತಿ ಬೆಳೆಗೆ ಹರಡುತ್ತಿರುವ ರೋಗಗಳ ನಿಯಂತ್ರಣಕ್ಕೆ ಸಿಗದ ಪರಿಹಾರ, ಕೂಲಿಕಾರರ ಸಮಸ್ಯೆ, ಕನಿಷ್ಠ ಬೆಂಬಲ ಬೆಲೆಯು ಸಿಗದೆ ಪರದಾಡುವಂತಾಗಿದೆ’ ಎಂದು ರೈತ ಸದ್ಯೋಜಾತಪ್ಪ ಸಜ್ಜನ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT