ಮಂಗಳವಾರ, ಮೇ 17, 2022
26 °C
ಕೋವಿಡ್‌ ದೃಢಪಟ್ಟ ಮೂರು ಜನರಿಗೆ ಒಪೆಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ

ರಾಯಚೂರು ಜಿಲ್ಲೆಯಲ್ಲಿ ವಿರಳವಾದ ಕೋವಿಡ್‌ ಪ್ರಕರಣ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಕೋವಿಡ್‌ ದೃಢವಾಗುವ ಪ್ರಕರಣಗಳ ಸಂಖ್ಯೆ ಗಣನೀಯ ಕಡಿಮೆಯಾಗಿದ್ದು, ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 17 ಕ್ಕೆ ಇಳಿಕೆಯಾಗಿದೆ.

ಸದ್ಯ ಕೋವಿಡ್‌ ದೃಢವಾದವರೆಲ್ಲರೂ ಸಾಮಾನ್ಯ ಸ್ಥಿತಿಯಲ್ಲಿದ್ದು, ರೋಗದ ಯಾವುದೇ ಲಕ್ಷಣಗಳಿಲ್ಲ. ಗಂಭೀರ ಸ್ಥಿತಿಗೆ ತಲುಪಿದ ಕೋವಿಡ್‌ ರೋಗಿಗಳನ್ನು ದಾಖಲಿಸಲು ಓಪೆಕ್‌ ಆಸ್ಪತ್ರೆ, ರಿಮ್ಸ್‌ ಆಸ್ಪತ್ರೆ ಸೇರಿದಂತೆ ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಮೀಸಲಿಟ್ಟಿರುವ ಹಾಸಿಗೆಗಳು ಜನವರಿ ಆರಂಭದಿಂದಲೇ ಖಾಲಿಖಾಲಿ ಉಳಿದಿವೆ.

ಒಂದು ಕೈ ಬೆರಳೆಣಿಕೆ ಸಂಖ್ಯೆಯಲ್ಲಿ ಮಾತ್ರ ಕೋವಿಡ್‌ ದೃಢ ಪ್ರಕರಣಗಳು ಪತ್ತೆ ಆಗುತ್ತಿವೆ. ಕೆಲವೊಮ್ಮೆ ಯಾವುದೇ ಕೋವಿಡ್‌ ಪ್ರಕರಣ ಪತ್ತೆಯಾಗದ ದಿನಗಳೂ ಇದ್ದು, ಒಟ್ಟಾರೆ ನೆಮ್ಮದಿ ಆವರಿಸಿಕೊಳ್ಳುತ್ತಿದೆ. ಕೋವಿಡ್‌ ರೋಗಿಗಳ ಚಿಕಿತ್ಸೆ ಹಾಗೂ ಉಪಚಾರಕ್ಕಾಗಿ ಹಗಲಿರುಳು ಶ್ರಮಿಸುತ್ತಾ ಬಂದಿರುವ ವೈದ್ಯರು, ಪೊಲೀಸರು, ವೈದ್ಯಕೀಯ ಸಿಬ್ಬಂದಿ, ವಿವಿಧ ಇಲಾಖೆಗಳ ಅಧಿಕಾರಿಗಳು ನಿರಾಳತೆ ಅನುಭವಿಸುವಂತಾಗಿದೆ. ಆದರೆ ಸೋಂಕು ತಡೆಗೆ ವಹಿಸಬೇಕಾದ ಕ್ರಮಗಳು ಜಾರಿಯಲ್ಲಿವೆ. ಮೊದಲಿನಂತೆ ಒತ್ತಡದ ಪರಿಸ್ಥಿತಿ ಇಲ್ಲ ಅಷ್ಟೆ.

ಸರ್ಕಾರಿ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸುತ್ತಿರುವುದನ್ನು ಬಿಟ್ಟರೆ, ಬಹುತೇಕ ಕಡೆಗಳಲ್ಲಿ ಸಡಿಲಿಕೆ ನೀಡಲಾಗಿದೆ. ಹೀಗಾಗಿ ಜನಜೀವನ ಸಹಜ ಸ್ಥಿತಿಯತ್ತ ಬಹುತೇಕ ಮರಳಿದಂತಾಗಿದೆ. ಕೋವಿಡ್‌ ಸೋಂಕು ತಡೆಗಾಗಿ ವಹಿಸುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಬಂದಿ. ಶೀತ, ನೆಗಡಿ ಹಾಗೂ ಜ್ವರ ಇದ್ದವರು ಬಹುತೇಕ ಸ್ವಯಂ ಹೋಂ ಕ್ವಾರಂಟೈನ್‌ನಲ್ಲಿ ಉಳಿಯುವುದು ರೂಢಿಯಾಗಿದೆ. ಇದಲ್ಲದೆ, ಆಯುಷ್‌ ಇಲಾಖೆಯ ನಿರ್ದೇಶನಗಳನ್ನು ಪಾಲನೆ ಮಾಡುತ್ತಿರುವುದು ವ್ಯಾಪಕವಾಗಿದೆ.

ಸ್ಯಾನಿಟೈಜರ್‌ ಮತ್ತು ಮಾಸ್ಕ್‌ ಬಳಕೆ ಕ್ರಮೇಣ ಕಡಿಮೆ ಆಗುತ್ತಿದೆ. ಕೋವಿಡ್‌ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆ ಆಗದಿರುವುದು ಈ ಮೊದಲು ಜನರಲ್ಲಿದ್ದ ಆತಂಕ ದೂರಗೊಳಿಸಿದೆ. ರಾಜಕೀಯ ಕಾರ್ಯಕ್ರಮಗಳು, ಸಾರಿಗೆ ಸಂಚಾರ, ಖಾಸಗಿ ಕಾರ್ಯಕ್ರಮಗಳಿಗೆ ಮೊದಲಿನಂತೆ ಜನರು ಮುಗಿಬೀಳುತ್ತಿದ್ದಾರೆ. ಅಧಿಕೃತವಾಗಿ ಜಾತ್ರೆಗಳನ್ನು ನಡೆಸುವುದಕ್ಕೆ ಇನ್ನೂ ಅವಕಾಶ ನೀಡಿಲ್ಲ. ಪ್ರತಿವರ್ಷದಂತೆ ಜಾತ್ರೆಗಳಲ್ಲಿ ಕಾಣುತ್ತಿದ್ದ ದಟ್ಟಣೆ ಮರಳುವ ದಿನಗಳು ಬರಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು