ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂಡಾಗಳಲ್ಲಿ ಕಳ್ಳ ಭಟ್ಟಿ ಅಕ್ರಮ ಮಾರಾಟ

Last Updated 7 ಏಪ್ರಿಲ್ 2020, 12:29 IST
ಅಕ್ಷರ ಗಾತ್ರ

ಮಾನ್ವಿ: ಕೋವಿಡ್ ನಿಯಂತ್ರಣಕ್ಕಾಗಿ ಲಾಕ್ ಡೌನ್ ಘೋಷಣೆಯಾದ ನಂತರ ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಹಾಗೂ ಕೆಲವು ತಾಂಡಾಗಳಲ್ಲಿ ಅಕ್ರಮವಾಗಿ ಕಳ್ಳ ಭಟ್ಟಿ ಮಾರಾಟ ದಂಧೆ ವ್ಯಾಪಕವಾಗಿರುವುದು ಕಂಡು ಬಂದಿದೆ. ಮದ್ಯ ಮಾರಾಟ ನಿಷೇಧಗೊಳಿಸಿದ ನಂತರ ಈ ದಂಧೆಗೆ ಬೇಡಿಕೆ ಹೆಚ್ಚಾಗಿರುವುದು ತಿಳಿದು ಬಂದಿದೆ.

ತಾಲ್ಲೂಕಿನ ಮುರಾಂಪುರ ತಾಂಡಾ ಸೇರಿ ಕೆಲ ಸ್ಥಳಗಳಲ್ಲಿ ಅಕ್ರಮವಾಗಿ ಕಳ್ಳ ಭಟ್ಟಿ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಮಾಹಿತಿ ಪಡೆದ ಅಬಕಾರಿ ಪೊಲೀಸರು ತಾಂಡಾಗಳಲ್ಲಿ ಸಂಚರಿಸಿ ಎಚ್ಚರಿಕೆ ನೀಡಿದ್ದರೂ ಕೂಡ ದಂಧೆಯನ್ನು ಸಂಪೂರ್ಣವಾಗಿ ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ.

ಪ್ರತಿ ದಿನ ಮಾನ್ವಿ ಸೇರಿದಂತೆ ಸುತ್ತಮುತ್ತಲಿನ ಮದ್ಯ ವ್ಯಸನಿಗಳು ತಾಂಡಾಗಳಿಗೆ ತೆರಳಿ ಕಳ್ಳ ಭಟ್ಟಿ ಖರೀದಿಸುತ್ತಿದ್ದಾರೆ. ಪ್ರತಿ ಲೀಟರ್ ಕಳ್ಳ ಭಟ್ಟಿ 250-350ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ. ಮುಂರಾಪುರ ತಾಂಡಾದಲ್ಲಿ ಮಂಗಳವಾರ ವ್ಯಕ್ತಿಯೊಬ್ಬರು 350ರೂಪಾಯಿ ನೀಡಿ ಒಂದು ಲೀಟರ್ ಕಳ್ಳ ಭಟ್ಟಿ ಖರೀದಿಸಿದ ಬಗ್ಗೆ ಮಾಹಿತಿ ನೀಡಿದರು.

ಮಾನ್ವಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ನಿಗದಿತ ದರಕ್ಕಿಂತ ಎರಡು ಪಟ್ಟು ಹೆಚ್ಚಿಸಿ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಅಬಕಾರಿ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅಬಕಾರಿ ಪೊಲೀಸ್ ಇನ್ಸ್‍ಪೆಕ್ಟರ್ ಮೋನಪ್ಪ, ‘ತಾಂಡಾಗಳಲ್ಲಿ ಅಕ್ರಮವಾಗಿ ಕಳ್ಳ ಭಟ್ಟಿ ತಯಾರಿಸಿ ಮಾರಾಟ ಮಾಡುವ ಸ್ಥಳಗಳಿಗೆ ದಾಳಿ ಮಾಡಿ ಎಚ್ಚರಿಕೆ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೋನಾಪುರಪೇಟೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಅಕ್ರಮ ದಂಧೆಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಅಗತ್ಯ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT