ಭಾನುವಾರ, ಮಾರ್ಚ್ 7, 2021
19 °C
ಅರ್ಹ ರೈತರ ಪಟ್ಟಿ ಸಿದ್ಧಪಡಿಸಿದ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್‌ಗಳು

ರೈತರ ಬೆಳೆ ಸಾಲ ₹1,669 ಕೋಟಿ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Deccan Herald

ರಾಯಚೂರು: ರಾಜ್ಯ ಸರ್ಕಾರದ ಸೂಚನೆಯನ್ನು ಪರಿಪಾಲಿಸಿರುವ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಖಾಸಗಿ ಬ್ಯಾಂಕುಗಳು ರೈತರು ಪಡೆದಿರುವ ಬೆಳೆಸಾಲ ಮೊತ್ತದ ವಿವರವನ್ನು ಸಿದ್ಧಪಡಿಸಿವೆ.

ಜಿಲ್ಲೆಯಾದ್ಯಂತ 19 ಬ್ಯಾಂಕುಗಳ ವಿವಿಧ ಶಾಖೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರೈತರು ಬೆಳೆ ಸಾಲ ಪಡೆದಿದ್ದಾರೆ. ತಾಲ್ಲೂಕುಗಳಿಗೆ ಹೋಲಿಸಿದರೆ ಸಿಂಧನೂರಿನಲ್ಲಿ ಅತಿಹೆಚ್ಚು ರೈತರು ಬೆಳೆಸಾಲ ಪಡೆದಿರುವುದು ಗಮನಾರ್ಹ. ಸಿಂಧನೂರಿನಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಅಚ್ಚುಕಟ್ಟು ಪ್ರದೇಶವಿದೆ.

ಅತಿ ಹಿಂದುಳಿದ ತಾಲ್ಲೂಕು ದೇವದುರ್ಗದಲ್ಲಿ ನಾರಾಯಣಪುರ ಬಲದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶವಿದೆ. ಹೀಗಾಗಿ, ಲಿಂಗಸುಗೂರು ತಾಲ್ಲೂಕಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ದೇವದುರ್ಗದ ರೈತರು ಬೆಳೆಸಾಲದ ಅನುಕೂಲ ಪಡೆದಿದ್ದಾರೆ. ಒಟ್ಟು ಬೆಳೆಸಾಲದಲ್ಲಿ ಎಷ್ಟು ಮನ್ನಾ ಆಗುತ್ತದೆ ಎಂಬುದು ಬ್ಯಾಂಕ್ ಅಧಿಕಾರಿಗಳಿಗೂ ಗೊತ್ತಿಲ್ಲ. ಒಟ್ಟು ಬೆಳೆಸಾಲದ ಅಂಕಿ–ಅಂಶಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಜಿಲ್ಲೆಯ ಇನ್ನುಳಿದ ಬ್ಯಾಂಕ್‌ಗಳಿಗೆ ಹೋಲಿಕೆ ಮಾಡಿದರೆ ಜಿಲ್ಲೆಯ ಲೀಡ್‌ ಬ್ಯಾಂಕ್ ಜವಾಬ್ದಾರಿ ನಿಭಾಯಿಸುತ್ತಿರುವ ಸ್ಟೇಟ್‌ ಬ್ಯಾಂಕ್‌ ಇಂಡಿಯಾ (ಎಸ್‌ಬಿಐ) ಅತಿಹೆಚ್ಚಿನ ಪ್ರಮಾಣ ₹426.75 ಕೋಟಿ ಬೆಳೆಸಾಲವನ್ನು ರೈತರಿಗೆ ನೀಡಿದೆ. ಕೃಷಿ ಮತ್ತು ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶ ಇಟ್ಟುಕೊಂಡಿರುವ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ (ಪಿಕೆಜಿಬಿ) ₹ 713.08 ಕೋಟಿ ಬೆಳೆಸಾಲ ವಿತರಿಸಿದೆ.

ಬೆಳೆಸಾಲ ಮುಂಗಡದಲ್ಲಿ ಐಸಿಐಸಿಐ ಬ್ಯಾಂಕ್‌ ₹207.09 ಕೋಟಿ ಹಂಚಿಕೆ ಮಾಡಿ, ಮೂರನೇ ಸ್ಥಾನದಲ್ಲಿದೆ. ಆನಂತರದಲ್ಲಿ ಸಿಂಡಿಕೇಟ್‌ ಬ್ಯಾಂಕ್‌  ₹204.19 ಕೋಟಿ, ಕೆನರಾ ಬ್ಯಾಂಕ್‌ ₹49.58 ಕೋಟಿ ಬೆಳೆಸಾಲ ನೀಡಿದೆ. ಕರೂರ್‌ ವೈಶಾ ಬ್ಯಾಂಕ್‌ ಯಾವುದೇ ಬೆಳೆ ಸಾಲ ನೀಡಿಲ್ಲ. ಆಂಧ್ರ ಬ್ಯಾಂಕ್‌ ₹13.65 ಕೋಟಿ ಬೆಳೆಸಾಲ ನೀಡಿದೆ.

’ಬ್ಯಾಂಕುಗಳಿಂದ ಸಾಲದ ಪಟ್ಟಿ ಪಡೆಯುವುದಕ್ಕೆ ಸರ್ಕಾರಕ್ಕೆ ಮೂರು ತಿಂಗಳು ಬೇಕಾಯಿತು. ಸಾಲಮನ್ನಾ ಮಾಡುವುದಕ್ಕೆ ಎಷ್ಟು ತಿಂಗಳು ಬೇಕಾಗುತ್ತದೆ ಗೊತ್ತಿಲ್ಲ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಾಲಮನ್ನಾ ಮಾಡುವ ಆಸೆ ಕೊಟ್ಟಿದ್ದಾರೆ. ಈಗ ₹50 ಸಾವಿರ ಮಾತ್ರ ಸಾಲಮನ್ನಾ ಮಾಡುತ್ತೇನೆ ಎಂದು ಘೋಷಿಸಿದ್ದಾರೆ.

ಇನ್ನುಳಿದ ಸಾಲವನ್ನು ಯಾವಾಗ ಮನ್ನಾ ಮಾಡುತ್ತಾರೆ ಎಂದು ಕಾಯುತ್ತಾ ಕುಳಿತುಕೊಳ್ಳುವುದು ರೈತರ ಕೆಲಸವಾಗಿಬಿಟ್ಟಿದೆ’ ಎಂದು  ರೈತ ಸಂಗಪ್ಪ ತಿಳಿಸಿದರು.

*
ರೈತರು ಪಡೆದ ಒಟ್ಟು ಬೆಳೆಸಾಲ ಮತ್ತು ಎಷ್ಟು ರೈತರು ಬೆಳೆಸಾಲ ಪಡೆದಿದ್ದಾರೆ. ಎಂಬುದನ್ನು ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕುಗಳು ಪಟ್ಟಿ ಮಾಡುತ್ತಿವೆ. ಶೀಘ್ರವೇ ವಿವರ ಒದಗಿಸಲಿವೆ.
-ಬಿ.ಶರತ್‌, ಜಿಲ್ಲಾಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.