ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಹಾಟ್‌ಸ್ಪಾಟ್ ಗುರುತಿಸಲು ಸೂಚನೆ

ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅಧ್ಯಕ್ಷತೆಯಲ್ಲಿ ಸಭೆ
Last Updated 20 ಜುಲೈ 2020, 16:16 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯನ್ನು ಶೂನ್ಯಗೆ ತರಲು ನಗರ ಮತ್ತು ಗ್ರಾಮೀಣ ಪ್ರದೇಶಗಳ ಸ್ಲಂ ಹಾಗೂ ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿರುವ ಬಡಾವಣೆಗಳಲ್ಲಿಯೇ ಕೋವಿಡ್ ಗಂಟಲು ದ್ರವ ಪರೀಕ್ಷೆ ಮಾಡಲು ಹಾಟ್‌ಸ್ಪಾಟ್ ಕೇಂದ್ರಗಳನ್ನು ಗುರುತಿಸುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಕೋವಿಡ್-19 ಸಾಂಕ್ರಾಮಿಕ ರೋಗಗಳ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲೆಯ ಸ್ಥಿತಿಗತಿ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆಮನೆಗೆ ತೆರಳಿ 50 ವರ್ಷ ಮೇಲ್ಪಟ್ಟವರು, ಗರ್ಬಿಣಿಯರು, ರಕ್ತದೊತ್ತಡ, ಬಿಪಿ, ಅಸ್ತಮಾದಿಂದ ಬಳಲುತ್ತಿರುವ ಜನರನ್ನು ಕೋವಿಡ್ ತಪಾಸಣೆ ಕೇಂದ್ರಕ್ಕೆ ಕರೆತರಬೇಕು. ಸರ್ಕಾರಿ ಸಮುದಾಯ ಭವನ, ಶಾಲೆ ಅಥವಾ ಅಂಗನವಾಡಿ ಕೇಂದ್ರಗಳಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಬೇಕು. ಸ್ಲಂ ಮತ್ತು ಅಲ್ಪಸಂಖ್ಯಾತ ಸಮುದಾಯದವರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಕೊರೋನಾ ಸೋಂಕು ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಆ ಸಮುದಾಯದವರ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿವಹಿಸುವ ನಿಟ್ಟಿನಲ್ಲಿ ಪ್ರಥಮ ಆಧ್ಯತೆ ನೀಡಬೇಕು ಎಂದರು.

ಸ್ಲಂ ಮತ್ತು ಅಲ್ಪಸಂಖ್ಯಾತರ ವಾಸಿಸುತ್ತಿರುವ ನಗರಗಳಾದ ಹರಿಜನವಾಡ, ಜಹೀರಬಾದ್, ಮಾಣಿಕನಗರ, ಬೇರೊನ್ ಕಿಲ್ಲಾ, ಸಿಯತಲಾಬ್, ಅರಬ್‌ಮೌಹಲಾ, ಎಲ್‌ಬಿಎಸ್‌ನಗರ, ಮಡ್ಡಿಪೇಟೆ, ಜಾನಿಮೌಹಲ್ ಬಡಾವಣೆಯಲ್ಲಿ ಜನರ ಗಂಟಲು ದ್ರವ ಪರೀಕ್ಷೆ ಮಾಡಬೇಕು ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ಮಾಹಿತಿ ಕಲೆಹಾಕಬೇಕು. ಔಷಧಿ ಅಂಗಡಿಗಳಲ್ಲಿ ಔಷಧಿ ಪಡೆಯುತ್ತಿರುವವರ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದರು. ಕೆಪಿಎಂ ಕಾಯ್ದೆ ಪ್ರಕಾರ ಜಿಲ್ಲೆಯ ವಿವಿಧ ನರ್ಸಿಂಗ್ ಹೋಂಗಳಲ್ಲಿ ಕೋವಿಡ್ ತಪಾಸಣೆ ಮಾಡುವ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದರು.

ಜಿಲ್ಲೆಯ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಲ್ಲಿ ಯಾವುದೇ ತರಹದ ರೋಗ ಲಕ್ಷಣಗಳು ಮತ್ತು ಪ್ರಾಥಮಿಕ ಸಂಪರ್ಕ ಇದ್ದಲ್ಲಿ, ಕೋವಿಡ್ ತಪಾಸಣೆ ಮಾಡಿಸಿಕೊಳ್ಳಬೇಕು. ದೇವದುರ್ಗ, ಸಿಂಧನೂರು, ಮಾನ್ವಿ, ಲಿಂಗಸೂಗೂರು ತಾಲ್ಲೂಕುಗಳಲ್ಲಿ ಕೊರೊನಾ ಸೋಂಕು ಪ್ರತಿನಿತ್ಯ ವ್ಯಾಪಕವಾಗಿ ಹರಡುತ್ತಿದ್ದು. ಈ ಬಗ್ಗೆ ಗಮನ ಹರಿಸುವಂತೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ದುರಗೇಶ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ, ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪುರ, ತಹಶೀಲ್ದಾರ ಡಾ.ಹಂಪಣ್ಣ, ಡಾ.ಸುರೇಂದ್ರ ಬಾಬು, ಡಾ.ಶಾಕೀರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT