ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋವಿಡ್‌ ದೃಢಪಟ್ಟರೆ 10 ದಿನ ಪ್ರತ್ಯೇಕ’- ಡಾ.ಅವಿನಾಶ ಮೆನನ್‌

ಕೋವಿಡ್‌ ನಿಯಂತ್ರಣಕ್ಕಾಗಿ ಜಿಲ್ಲಾಡಳಿತದಿಂದ ಹೆಚ್ಚುವರಿ ಕ್ರಮ
Last Updated 18 ಜನವರಿ 2022, 16:28 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಶಾಲಾ, ಕಾಲೇಜು, ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ ಕೋವಿಡ್‌ ಸೋಂಕು ಹರಡದಂತೆ ಜಿಲ್ಲಾಡಳಿತವು ಹೆಚ್ಚುವರಿ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದ್ದು, ‘ವಿಪತ್ತು ನಿರ್ವಹಣಾ ಕಾಯ್ದೆ–2005 ಕಲಂ 34 (ಎಂ)’ ಅಡಿಯಲ್ಲಿ ನಿಯಮಗಳನ್ನು ಪಾಲನೆ ಮಾಡುವಂತೆ ಜಿಲ್ಲಾಧಿಕಾರಿ ಡಾ.ಅವಿನಾಶ್‌ ಮೆನನ್‌ ಬುಧವಾರ ಆದೇಶಿಸಿದ್ದಾರೆ.

ಎಲ್ಲಾ ಶಾಲಾ, ಕಾಲೇಜುಗಳ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳೆಲ್ಲರೂ ಮುಖಗವಸನ್ನು ಧರಿಸಬೇಕು. ಎಲ್ಲರ ಮಧ್ಯೆಯೂ ಕನಿಷ್ಠ 6 ಗಜ ಅಂತರ ಕಾಪಾಡಿಕೊಳ್ಳಬೇಕು. ಸಭೆಗಳಲ್ಲಿ ಒಟ್ಟುಗೂಡುವಿಕೆ ನಿಷೇಧಿಸಲಾಗಿದೆ. ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಗುಂಪು ಚಟುವಟಿಕೆಗಳನ್ನು ಮಾಡಕೂಡದು. ನಾಡಗೀತೆ ಹಾಗೂ ರಾಷ್ಟ್ರಗೀತೆ ಪ್ರಾರ್ಥನೆಯನ್ನು ಆಯಾ ತರಗತಿಗಳ ಕೊಠಡಿಯಲ್ಲೇ ನಡೆಸಬೇಕು. ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಸ್ತಲಾಘವ ಮಾಡಬಾರದು. ಕೋವಿಡ್‌ ರೋಗದ ಲಕ್ಷಣಗಳು ಕಂಡುಬಂದಿರುವ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಶಾಲಾ, ಕಾಲೇಜಿನಲ್ಲಿ ಕೋವಿಡ್‌ ದೃಢಪಟ್ಟ ವಿದ್ಯಾರ್ಥಿಯನ್ನು 10 ದಿನ ಪ್ರತ್ಯೇಕಗೊಳಿಸಬೇಕು. ಒಬ್ಬ ವಿದ್ಯಾರ್ಥಿಗೆ ಕೋವಿಡ್‌ ದೃಢಪಟ್ಟಲ್ಲಿ ಆ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸುವುದು. ಒಂದು ತರಗತಿಯಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಪ್ರಕರಣಗಳು ಕಂಡುಬಂದಲ್ಲಿ, ಮೂರು ದಿನಗಳ ಮಟ್ಟಿಗೆ ತರಗತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು. ಮೂರು ದಿನವೂ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಬೋಧನೆ ಮುಂದುವರಿಸಬೇಕು. ಶಾಲಾ, ಕಾಲೇಜಿನ ತರಗತಿಯ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಬೇಕು. ಯಾವುದೇ ಶಾಲೆ, ಕಾಲೇಜಿನಲ್ಲಿ ಏಳು ಅಥವಾ ಅದಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಕರಣಗಳು ಕಂಡುಬಂದಲ್ಲಿ ಭೌತಿಕ ತರಗತಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಮೂರು ದಿನ ಆನ್‌ಲೈನ್‌ ಬೋಧನೆ ಮುಂದುವರಿಸಬೇಕು. ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಲಾಗಿದೆ.

ಯಾವುದೇ ಶಾಲೆ, ಕಾಲೇಜಿನಲ್ಲಿ ಕೋವಿಡ್‌ ಲಕ್ಷಣಗಳಿರುವ ವಿದ್ಯಾರ್ಥಿ ಇದ್ದಲ್ಲಿ ಪರೀಕ್ಷೆಗೆ ಒಳಪಡಿಸಬೇಕು. ಲಕ್ಷಣಗಳಿಲ್ಲದ ವಿದ್ಯಾರ್ಥಿಗಳು ಮೂರು ದಿನಗಳ ಬಳಿಕ ತರಗತಿಗಳಿಗೆ ಹಾಜರಾಗಬೇಕು. ಶಾಲೆ, ಕಾಲೇಜುಗಳಲ್ಲಿ ತರಗತಿಗಳನ್ನು ಆರಂಭಿಸುವ ಪೂರ್ವದಲ್ಲಿ ಸ್ಯಾನಿಟೈಜ್‌ ಮಾಡಬೇಕು. ವಸತಿ ನಿಲಯದಲ್ಲಿ ಕೋವಿಡ್‌ ದೃಢಪಟ್ಟ ವಿದ್ಯಾರ್ಥಿಯನ್ನು 10 ದಿನ ಪ್ರತ್ಯೇಕಿಸಬೇಕು. ಕೋವಿಡ್‌ ದೃಢಪಟ್ಟ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳನ್ನು ಹತ್ತಿರದ ಕೋವಿಡ್‌ ಕೇರ್‌ ಸೆಂಟರ್‌ಗೆ ಕಳುಹಿಸಬೇಕು ಎಂದು ತಿಳಿಸಲಾಗಿದೆ.

ಮನೆಯಲ್ಲೇ ಪ್ರತ್ಯೇಕ ಶೌಚಾಲಯ ಹಾಗೂ ವಾಸಕ್ಕೆ ಅನುಕೂಲ ಇದ್ದ ವಿದ್ಯಾರ್ಥಿಯನ್ನು ಸ್ವಂತ ವಾಹನದಲ್ಲಿ ಪ್ರತ್ಯೇಕವಾಗಿ ಪಾಲಕರ ದೃಢೀಕರಣದೊಂದಿಗೆ ಕಳುಹಿಸಬೇಕು. 8ನೇ ಅಥವಾ ಅದಕ್ಕಿಂತ ಕೆಳಗಿನ ತರಗತಿಯ ವಿದ್ಯಾರ್ಥಿಗಳಿಗೆ ಕೋವಿಡ್‌ ದೃಢವಾದರೆ, ಆಯಾ ವಸತಿ ನಿಲಯದಲ್ಲೇ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಬೇಕು. ಕೋವಿಡ್‌ ದೃಢಪಟ್ಟವರಿರುವ ಮಹಡಿಯನ್ನು ವಸತಿ ನಿಲಯದಲ್ಲಿ ಪ್ರತ್ಯೇಕಿಸಬೇಕು. ವಸತಿ ನಿಲಯದಲ್ಲಿ ಕೋವಿಡ್‌ ಲಕ್ಷಣಗಳಿರುವ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಬೇಕು ಹಾಗೂ ಲಕ್ಷಣಗಳಿಲ್ಲದವರನ್ನು ಮೂರು ದಿನಗಳ ಬಳಿಕ ಶಾಲೆಗೆ ಕಳುಹಿಸಬೇಕು. ವಸತಿ ಶಾಲೆ, ವಸತಿ ನಿಲಯ ಆರಂಭಿಸುವ ಪೂರ್ವ ಸ್ಯಾನಿಟೈಜ್‌ ಮಾಡಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT