ಮಂಗಳವಾರ, ನವೆಂಬರ್ 12, 2019
28 °C
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಂದ ಪ್ರಗತಿ ಪರಿಶೀಲನೆ

ನವೆಂಬರ್‌ನೊಳಗೆ ರಸ್ತೆ ಗುಂಡಿ ಮುಚ್ಚಲು ಸೂಚನೆ

Published:
Updated:
Prajavani

ರಾಯಚೂರು: ನವೆಂಬರ್‌ ಅಂತ್ಯದೊಳಗೆ ಜಿಲ್ಲೆಯಾದ್ಯಂತ ರಾಜ್ಯಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿಸುವ ಕೆಲಸ ಪೂರ್ಣಗೊಳಿಸಬೇಕು ಎಂದು ಲೋಕೋಪಯೋಗಿ ಸಚಿವರೂ ಆದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ ಪ್ರವಾಹ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಪ್ರವಾಹ ಪೀಡಿತ ಗ್ರಾಮಗಳಲ್ಲಿ ರಸ್ತೆ ದುರಸ್ತಿ ಹಾಗೂ ಸೇತುವೆ ದುರಸ್ತಿಗಳನ್ನು ಆದ್ಯತೆ ವಹಿಸಿ ಪೂರ್ಣ ಮಾಡಬೇಕು. ಕೂಡಲೇ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಬೇಕು. ವಿಳಂಬ ಮಾಡಿದರೆ ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಗ್ರಾಮೀಣ ಭಾಗಗಳಲ್ಲಿ ಕೆಲವು ರೈತರು ರಸ್ತೆ ಒತ್ತುವರಿ ಮಾಡಿಕೊಂಡು ಬಿತ್ತನೆ ಮಾಡುತ್ತಾರೆ. ಇಂಥದ್ದನ್ನು ಕೂಡಲೇ ತಡೆಗಟ್ಟಬೇಕು. ರಸ್ತೆಗೆ ಗಿಡಗಂಟಿಗಳು ಚಾಚಿಕೊಂಡಿರುವುದನ್ನು ಕೂಡಲೇ ಕತ್ತರಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ದೇವದುರ್ಗ ತಾಲ್ಲೂಕಿನಲ್ಲಿ ಯಾವುದೇ ಅನುಮತಿಯಿಲ್ಲದೆ ರಸ್ತೆ ಅಗೆಯುವ ಕೆಲಸ ಮಾಡುತ್ತಿದ್ದಾರೆ ಎನ್ನುವ ದೂರುಗಳಿವೆ. ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ, ರಸ್ತೆ ಅಗೆದವರಿಂದ ಶುಲ್ಕ ಕಟ್ಟಿಸಿಕೊಂಡು ರಸ್ತೆ ದುರಸ್ತಿ ಮಾಡಬೇಕು ಎಂದು ತಿಳಿಸಿದರು.

ರಸ್ತೆಗಳ ಪಕ್ಕದಲ್ಲಿ ಮಳೆನೀರು ಹರಿದುಹೋಗುವಂತೆ ಚರಂಡಿಗಳನ್ನು ನಿರ್ಮಿಸಬೇಕು. ರಾಯಚೂರು ನಗರದೊಳಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಾಕಿ ಇರುವುದನ್ನು ಅಕ್ಟೋಬರ್‌ 1 ರೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಅಕ್ಟೋಬರ್‌ 2 ರಂದು ಅಮಾನತು ಆದೇಶ ಕಳುಹಿಸಲಾಗುವುದು ಎಂದು ಹೇಳಿದರು.

ಅನುದಾನ ಬಾಕಿ:

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಸರ್ಕಾರದಿಂದ ₹14.36 ಅನುದಾನ ಬರಬೇಕಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಬ್ರಹ್ಮಣ್ಯ ಅವರು ಉಪಮುಖ್ಯಮಂತ್ರಿಗೆ ಮನವರಿಕೆ ಮಾಡಿದರು.

ಅಚ್ಚರಿ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, ಸರ್ಕಾರದ ಮಂಜೂರಾತಿ ಇಲ್ಲದಿದ್ದರೂ ಶೇ 100 ರಷ್ಟು ಹೆಚ್ಚುವರಿ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಲ್ಲಿ ಇರಿಸಲಾಗಿದೆ. ಇದರಿಂದ ಎಲ್ಲ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗುತ್ತದೆ. ಅನುದಾನ ಬರಬೇಕಿದೆ ಎಂದು ಕೇಳುತ್ತಿರುವ ಮೊದಲ ಜಿಲ್ಲೆ ಇದಾಗಿದ್ದು, ಕೂಡಲೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೂಲಕ ಸರ್ಕಾರಕ್ಕೆ ಬೇಡಿಕೆ ಕಳುಹಿಸಿ ಎಂದು ಸೂಚನೆ ನೀಡಿದರು.

ಹಾಸ್ಟೆಲ್‌ ನಿರ್ಮಾಣಕ್ಕೆ ನಿವೇಶನಗಳ ಲಭ್ಯತೆ ಇರುವ ಬಗ್ಗೆ ಸವಿವರವನ್ನು ಕಳುಹಿಸಿದರೆ, ಕಟ್ಟಡ ನಿರ್ಮಾಣಕ್ಕೆ ಕೂಡಲೇ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

* ದೇವದುರ್ಗ ತಾಲ್ಲೂಕಿನ ರಸ್ತೆ ಕಾಮಗಾರಿಗಳನ್ನು ಸಮರ್ಪಕವಾಗಿ ಪೂರ್ಣಗೊಳಿಸಲು ಲೋಕೋಪಯೋಗಿ ಎಂಜಿನಿಯರುಗಳು ಯೋಜನೆ ರೂಪಿಸಬೇಕು. ಗೂಗಲ್‌ ಸಂಪರ್ಕಿಸುವ ರಸ್ತೆಗಳ ಸ್ಥಿತಿ ಅಧೋಗತಿಯಲ್ಲಿದ್ದು, ಕೂಡಲೇ ಕಾಮಗಾರಿ ಆರಂಭಿಸಬೇಕು.

-ಶಿವನಗೌಡ ನಾಯಕ, ಶಾಸಕ

* ದೇವದುರ್ಗ ತಾಲ್ಲೂಕಿನ ಪ್ರವಾಹ ಪೀಡಿತ ಗ್ರಾಮಗಳ ರಸ್ತೆಗಳು ಸರಿಯಾಗಿಲ್ಲ ಎಂದು ಸರ್ಕಾರಿ ಬಸ್‌ಗಳು ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗದೆ ಒಂದು ತಿಂಗಳಿಂದ ಮನೆಯಲ್ಲಿದ್ದಾರೆ. ರಸ್ತೆ ಸರಿಪಡಿಸಿ.

-ಬಸವರಾಜ ಪಾಟೀಲ ಇಟಗಿ, ವಿಧಾನ ಪರಿಷತ್‌ ಸದಸ್ಯ

* ರಾಯಚೂರಿನಲ್ಲಿ ನೌಕರಿ ಮಾಡುವುದಕ್ಕೆ ಬರುವ ಗ್ರಾಮೀಣ ಭಾಗದ ಮಹಿಳೆಯರಿಗಾಗಿ ಕೂಡಲೇ ‘ಉದ್ಯೋಗಸ್ಥ ಮಹಿಳೆಯರ ಹಾಸ್ಟೆಲ್‌’ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು.

-ಡಾ.ಶಿವರಾಜ ಪಾಟೀಲ, ಶಾಸಕ

* ರಾಯಚೂರು ಗ್ರಾಮೀಣ ಭಾಗಕ್ಕೆ ಈಗಾಗಲೇ ಎಚ್‌ಕೆಆರ್‌ಡಿಬಿಯಿಂದ ಹಂಚಿಕೆ ಮಾಡಿರುವ ಅನುದಾನ ಕಡಿತ ಮಾಡಬಾರದು. ಈ ವಿಷಯದಲ್ಲಿ ಪಕ್ಷ ಪರಿಗಣಿಸಬಾರದು. ಇದು ಮೀಸಲು ಕ್ಷೇತ್ರ ಎಂಬುದನ್ನು ಪರಿಗಣಿಸಿ.

- ಬಸನಗೌಡ ದದ್ದಲ, ಶಾಸಕ

* ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹರಿಸಲು ಜಲಧಾರೆ ಯೋಜನೆಯೊಂದನ್ನು ರೂಪಿಸಲಾಗಿತ್ತು. ಅದನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು. ಕಾಮಗಾರಿಯನ್ನು ಹಂತಹಂತವಾಗಿ ಮಾಡಬಹುದಾಗಿದೆ.

-ವೆಂಕಟರಾವ್‌ ನಾಡಗೌಡ, ಶಾಸಕ

* ಜಿಲ್ಲೆಯಲ್ಲಿ ಬರಗಾಲದ ಬವಣೆಯಿದ್ದು, ಕನಿಷ್ಠಪಕ್ಷ ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ 10 ಗಂಟೆಗಳ ಕಾಲ ವಿದ್ಯುತ್‌ ಪೂರೈಸಲು ಕ್ರಮ ವಹಿಸಬೇಕು.

-ರಾಜಾ ವೆಂಕಟಪ್ಪ ನಾಯಕ, ಶಾಸಕ

* ಲಿಂಗಸುಗೂರು ತಾಲ್ಲೂಕಿನ ಕೃಷ್ಣಾನದಿ ನಡುಗಡ್ಡೆ ಪ್ರದೇಶಗಳಿಗೆ ಸಂಪರ್ಕ ಸಾಧ್ಯವಾಗಲು ಹೊಸ ಸೇತುವೆಯೊಂದನ್ನು ನಿರ್ಮಿಸಬೇಕು. ಸದ್ಯದ ಸೇತುವೆಗಳು ಕೆಳಹಂತದಲ್ಲಿವೆ.

-ರಾಜಾ ಅಮರೇಶ್ವರ ನಾಯಕ, ಸಂಸದ

* ಲೋಕೋಪಯೋಗಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅನುದಾನ ಮತ್ತು ಕಾಮಗಾರಿಗಳ ಮಾಹಿತಿ ಸಮರ್ಪಕವಾಗಿ ತಿಳಿದುಕೊಂಡಿರಬೇಕು. ವೇಗಕ್ಕೆ ಹೊಂದಿಕೊಂಡು ಕೆಲಸ ಮಾಡದಿದ್ದರೆ ಮನೆಗೆ ಕಳುಹಿಸಲಾಗುವುದು.

-ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

ಪ್ರತಿಕ್ರಿಯಿಸಿ (+)