ಉಚಿತ ಬಸ್‌ ಪಾಸ್‌: ಅನುದಾನ ಮೀಸಲಿಡಲು ಒತ್ತಾಯ

7
ಆಲ್‌ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ಉಚಿತ ಬಸ್‌ ಪಾಸ್‌: ಅನುದಾನ ಮೀಸಲಿಡಲು ಒತ್ತಾಯ

Published:
Updated:
Prajavani

ರಾಯಚೂರು: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡಲು ಬೇಕಾಗುವ ಹಣವನ್ನು ಬಜೆಟ್‌ನಲ್ಲಿ ಮೀಸಲಿಡಬೇಕು ಹಾಗೂ ಸಮರ್ಪಕ ವಸತಿ ನಿಲಯ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಆಲ್‌ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ (ಎಐಡಿಎಸ್‌ಓ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು.

ಐದು ವರ್ಷಗಳ ಹೋರಾಟದ ಪರಿಣಾಮ ಹಿಂದಿನ ಕಾಂಗ್ರೆಸ್‌ ಸರ್ಕಾರ ಉಚಿತ ಬಸ್‌ ಪಾಸ್ ನೀಡಲು ಭರವಸೆ ನೀಡಿ ಬಜೆಟ್‌ನಲ್ಲಿ ₨ 860 ಕೋಟಿ ಅನುದಾನ ಮೀಸಲಿಟ್ಟಿತ್ತು. ಆದರೆ, ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್ ದೊರೆಯಲಿಲ್ಲ. ಅಧಿಕಾರಕ್ಕೆ ಬಂದ ಮೈತ್ರಿ ಸರ್ಕಾರವೂ ಇದನ್ನು ಜಾರಿಗೊಳಿಸದೇ ವಿದ್ಯಾರ್ಥಿಗಳಿಂದ ಪ್ರತಿಭಟನೆ ಎದುರಿಸುವಂತಾಯಿತು. ಸರ್ಕಾರಿ ಶಾಲಾ– ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಬಸ್‌ ಪಾಸ್‌ ನೀಡುವ ಮಾತನ್ನಾಡಿದ ಸರ್ಕಾರ ಅದನ್ನು ಕೂಡ ಜಾರಿಗೊಳಿಸಿಲ್ಲ ಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಆರೋಪಿಸಿದರು.

ರೈತ ಪರವೆಂದು ಕರೆದುಕೊಳ್ಳುವ ಸರ್ಕಾರ ರೈತರ ಮಕ್ಕಳಿಗೆ ಅನುಕೂಲವಾಗುವ ಈ ಯೋಜನೆ ಜಾರಿಗೊಳಿಸದಿರುವುದು ಬೇಸರದ ಸಂಗತಿಯಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಯೋಜನೆ ಜಾರಿಗೊಳಿಸಲಾಗುವುದೆಂದು ಸಾರಿಗೆ ಸಚಿವರು ಭರವಸೆ ನೀಡಿದ್ದು, ಈ ಬಾರಿಯಾದರೂ ಜಾರಿಗೊಳಿಸುತ್ತದೆಯೇ ಎಂಬ ಜಿಜ್ಞಾಸೆ ತಲೆದೂರಿದೆ. ಆದ್ದರಿಂದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ಕಾರಿ ವಸತಿ ನಿಲಯಗಳ ಸಮಸ್ಯೆಯೂ ಅಗಾಧವಾಗಿದ್ದು, ಅಗತ್ಯ ವಸತಿ ನಿಲಯಗಳೂ ಇಲ್ಲವಾಗಿವೆ. ಇರುವ ವಸತಿ ನಿಲಯಗಳಲ್ಲಿ ಮೂಲ ಸೌಕರ್ಯವೂ ಇಲ್ಲ. ಉತ್ತಮ ಸೌಲಭ್ಯ ನೀಡಲು ವಿದ್ಯಾರ್ಥಿಯೊಬ್ಬರಿಗೆ ನಾಲ್ಕೂವರೆ ಸಾವಿರ ಹಣದ ಅಗತ್ಯವಾಗಿದೆ. ಆದರೆ, ಸರ್ಕಾರ ₨1600 ನೀಡುತ್ತಿದೆ. ಈ ಹಣದಲ್ಲಿ ಪೌಷ್ಟಿಕವಾದ ಆಹಾರ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಲು ದುಡ್ಡಿಲ್ಲ ಎನ್ನುವ ಸರ್ಕಾರ ಜನರ ವಿರೋಧದ ನಡುವೆಯೂ ₨ 35 ಸಾವಿರ ಕೋಟಿ ವೆಚ್ಚದ ಎಲಿವೇಟೆಡ್‌ ಕಾರಿಡಾರ್ ಯೋಜನೆ ಅನುಷ್ಠಾನಕ್ಕೆ ತುದಿಗಾಲಲ್ಲಿ ನಿಂತಿರುವುದು ನೋವಿನ ಸಂಗತಿಯಾಗಿದೆ. ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳು ಕಾರ್ಪೊರೇಟ್ ಮನೆತನಗಳನ್ನು ಬೆಳೆಸಲು ಪ್ರಯತ್ನಿಸುತ್ತಿರುವ ಸಂಶಯ ಮೂಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಶೇ 1ರಷ್ಟು ಜನರಲ್ಲಿ ಶೇ 51.53 ರಷ್ಟು ದೇಶದ ಸಂಪತ್ತಿದೆ ಎಂಬ ಅಂಕಿ ಅಂಶ ಹೊರಬಂದಿದೆ ಎಂದರು.

ವರ್ಷದಿಂದ ವರ್ಷಕ್ಕೆ ದೇಶದಲ್ಲಿ ಶತ ಕೋಟ್ಯಾಧೀಶರ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ ರೈತರ ಆತ್ಮಹತ್ಯೆ, ನಿರುದ್ಯೋಗವೂ ಹೆಚ್ಚಾಗುತ್ತಿದೆ. ಶಿಕ್ಷಣವನ್ನು ವ್ಯಾಪಾರದ ಸರಕು ಮಾಡಲಾಗಿದ್ದು, ಇದಕ್ಕೆ ಉದಾಹರಣೆ ಎಂಬಂತೆ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎನ್‌ಆರ್ಐ ಕೋಟಾ ಜಾರಿಗೊಳಿಸಿ, ಶುಲ್ಕ ಏರಿಕೆ ಮಾಡುತ್ತಿದೆ. ಕೇಂದ್ರದ ಬಜೆಟ್‌ನಲ್ಲೂ ಈ ಸಮಸ್ಯೆಗಳಿಗೆ ಪರಿಹಾರ ನೀಡುವ ಕ್ರಮವಾಗಿಲ್ಲ ಎಂದು ದೂರಿದರು.

ಜಿಲ್ಲಾ ಘಟಕ ಅಧ್ಯಕ್ಷ ಮಹೇಶ್ ಚೀಕಲಪರ್ವಿ, ಕಾರ್ಯದರ್ಶಿ ಪ್ರಮೋದ ಕುಮಾರ, ಉದಯ ಶಂಕರ, ಮಲ್ಲನಗೌಡ, ಆಂಜನೇಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !