ಭಾನುವಾರ, ಆಗಸ್ಟ್ 25, 2019
24 °C
ಸಂವಿಧಾನ ಪೀಠಿಕೆ, ಕಿರು ಹೊತ್ತಿಗೆ ಮತ್ತು ಸಸಿಗಳ ವಿತರಣೆ ಕಾರ್ಯಕ್ರಮ

‘ಗ್ರಾಮೀಣ ಪ್ರದೇಶಕ್ಕೆ ಸಾಹಿತ್ಯ ವಿಸ್ತರಣೆ ಕಾರ್ಯ ಸಂತಸದ ವಿಚಾರ’

Published:
Updated:
Prajavani

ರಾಯಚೂರು: ಪರಿಸರ ಮತ್ತು ಸಂವಿಧಾನದ ಬಗ್ಗೆ ತಿಳಿವಳಿಕೆ ಮೂಡಿಸುವ ಮಾದರಿ ಕಾರ್ಯದ ಮೂಲಕ ಗ್ರಾಮೀಣ ಭಾಗಕ್ಕೆ ಕಸಾಪ ಚಟುವಟಿಕೆ ವಿಸ್ತರಿಸುವ ಪ್ರಯತ್ನ ನಡೆಸಿರುವುದು ಸಂತಸದ ವಿಚಾರ ಎಂದು ಉಡಮಗಲ್ ಖಾನಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವೀರೇಶ ಅಂಗಡಿ ಹೇಳಿದರು.

ತಾಲ್ಲೂಕಿನ ಉಡಮಗಲ್ ಖಾನಾಪೂರ ಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಮಂಗಳವಾರ ಆಯೋಜಿಸಿದ್ದ ತಾಲ್ಲೂಕಿನ 45 ಪ್ರೌಢಶಾಲೆಗಳಿಗೆ ಸಂವಿಧಾನ ಪೀಠಿಕೆ, ಕಿರು ಹೊತ್ತಿಗೆ ಮತ್ತು ಸಸಿಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಿಗೆ ಸಂವಿಧಾನದ ಮಹತ್ವ ಮನವರಿಕೆ ಮಾಡಿಕೊಡುವ ಜತೆಗೆ ಪರಿಸರದ ಕಾಳಜಿ, ಸಾಹಿತ್ಯ ಅಭಿರುಚಿ ಬೆಳೆಸಲು ಪರಿಣಾಮಕಾರಿಯಾದ ಕೆಲಸವಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಮೂರು ವಿಷಯಗಳು ಅಗತ್ಯವಾಗಿದ್ದು, ಸಂವಿಧಾನ, ಸ್ವಚ್ಛತೆ ಮತ್ತು ಸಾಹಿತ್ಯ ಬೆಳವಣಿಗೆಗೆ ಅನುಕೂಲ ಆಗಲಿದೆ ಎಂದರು.

ಕಸಾಪ ಮಹಿಳಾ ಪ್ರತಿನಿಧಿ ಅರುಣಾ ಹಿರೇಮಠ ಪರಿಸರದ ಕುರಿತು ಮಾತನಾಡಿ, ಪರಿಸರ ಸಂರಕ್ಷಣೆ ಸರ್ಕಾರದ ಹೊಣೆ ಎಂಬ ಭಾವನೆ ತೊರೆಯಬೇಕು. ಈ ಹೊಣೆ ಎಲ್ಲರ ಮೇಲಿದೆ ಎಂಬುವುದು ಅರಿಯಬೇಕಿದೆ. ಇದರಿಂದ ಮಕ್ಕಳು ಕೂಡ ಪರಿಸರದ ಜವಾಬ್ದಾರಿ ಅರಿತುಕೊಂಡು ಉತ್ತಮ ನಾಗರಿಕರಾಗಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಶಿಕ್ಷಕಿ ಅಕ್ಕಮಹಾದೇವಿ ಉಪ್ಪಿನ್ ಮಾತನಾಡಿ, ಭಾರತದ ಸಂವಿಧಾನ ಪ್ರಪಂಚಕ್ಕೆ ಮಾದರಿಯಾಗಿದ್ದು, ಮಹತ್ವವನ್ನು ಅರಿತುಕೊಂಡು ಮುನ್ನಡೆಯಬೇಕು. ಕಾನೂನು ಇತಿಮಿತಿಯಲ್ಲಿ ನಾಗರಿಕಾರಬೇಕು ಎಂದು ತಿಳಿಸಿದರು.

ಸಂವಿಧಾನ ಪೀಠಿಕೆ, ಕಿರು ಹೊತ್ತಿಗೆ ಹಾಗೂ ಸಸಿ ಹಸ್ತಾಂತರಿಸಿದ ಕಸಾಪ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಶಿಖರಮಠ ಮಾತನಾಡಿ, ಎಲ್ಲ ಶಾಲೆಗಳಲ್ಲಿ ಪ್ರಬಂಧ ಸ್ಪರ್ಧೆ ನಡೆಸಿ ತಾಲ್ಲೂಕಿಗೆ ಮೂವರನ್ನು ಆಯ್ಕೆ ಮಾಡಿ, ಅವರಿಗೆ ನಗದು ಬಹುಮಾನ ನೀಡಲಾಗುತ್ತದೆ. ಉತ್ತಮ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಶಿಕ್ಷಕ ರಾಮಣ್ಣ ಬೊಯೇರ್, ಗೌರವ ಕಾರ್ಯದರ್ಶಿ ಬಿ.ವಿಜಯರಾಜೇಂದ್ರ, ಸೈಯದ್ ಹಫಿಜುಲ್ಲಾ, ಶ್ಯಾಮಸುಂದರ ಅಸ್ಕಿಹಾಳ, ಮಾಧ್ಯಮ ಸಂಚಾಲಕ ಸಂಗಮೇಶ, ಶಾಲೆಯ ಶಿಕ್ಷಕರಾದ ರವಿ ಮುದ್ಗಲ್, ಹೊನಕೇರಪ್ಪ, ಭಾಗ್ಯಲಕ್ಷ್ಮಿ, ನಫೀಜಾ ಇದ್ದರು.

Post Comments (+)