ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದುರ್ಗ: ₹4 ಕೋಟಿ ವೆಚ್ಚವಾದರೂ ತಲುಪದ ನೀರು

ಜಲ ನಿರ್ಮಲ ಯೋಜನೆ: ತುಕ್ಕು ಹಿಡಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ
Last Updated 7 ನವೆಂಬರ್ 2020, 2:13 IST
ಅಕ್ಷರ ಗಾತ್ರ

ದೇವದುರ್ಗ: ಜಲನಿರ್ಮಲ ಯೋಜನೆಯಡಿ ರಾಮದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ನಾಲ್ಕು ಕೋಟಿ ಹಣ ಖರ್ಚು ಮಾಡಿದ್ದರೂ ನೀರು ಮಾತ್ರ ತಲುಪಿಲ್ಲ. ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯೋಜನೆ ತುಕ್ಕು ಹಿಡಿದಿದೆ.

ಗಬ್ಬೂರು ಹೋಬಳಿಯ ರಾಮದುರ್ಗ ಗ್ರಾಮದ ಜನರು ವರ್ಷಪೂರ್ತಿ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಕಚೇರಿ ಇದ್ದರೂ ಶಾಶ್ವತ ಪರಿಹಾರದ ಯೋಜನೆ ರೂಪಿಸಿಲ್ಲ. ಜಿನ್ನಾಪುರ, ಕಾಕರಗಲ್, ಸುಂಕೇಶ್ವರಹಾಳ ಮತ್ತು ಅಮರಾಪುರ ಗ್ರಾಮಗಳಿಗೂ ಇದೇ ಯೋಜನೆಯಡಿ ನೀರು ಒದಗಿಸಲು ಎಂಟು ವರ್ಷಗಳ ಹಿಂದೆ ಯೋಜನೆ ರೂಪಿಸಿ ರಾಮದುರ್ಗ ಗ್ರಾಮದ ಹೊರವಲಯದಲ್ಲಿ ಬೃಹತ್ ಕೆರೆಯನ್ನು ನಿರ್ಮಿಸಲಾಗಿದೆ.

ಕೆರೆಯಿಂದ ನೀರು ಎತ್ತುವುದಕ್ಕಾಗಿ ಪಂಪ್‌ಹೌಸ್‌ ನಿರ್ಮಿಸಲಾಗಿದೆ. ಕೆರೆಯ ಮೂಲಕ ಎಲ್ಲ ಗ್ರಾಮಗಳಿಗೂ ಪೈಪ್‌ಲೈನ್‌ ಮಾಡಲಾಗಿದೆ. ಆದರೆ ಗ್ರಾಮಗಳಿಗೆ ನೀರು ತಲುಪಿಸಲು ಸಾಧ್ಯವಾಗಿಲ್ಲ. ಪೈಪ್‌ಗಳೆಲ್ಲ ಈಗ ತುಕ್ಕು ಹಿಡಿದು ಬಿದ್ದಿವೆ. ಕೆರೆಯಲ್ಲಿ ನಿರ್ಮಿಸಿರುವ ಪಂಪ್‌ಹೌಸ್‌ಬಳಕೆ ಇಲ್ಲದ ಕಾರಣ ಅನಾಥವಾಗಿ ಬಿದ್ದಿದೆ.

ಕಾಮಗಾರಿ ಅಪೂರ್ಣಗೊಳಿಸಿ ಹಸ್ತಾಂತರ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಂಬಂಧ ಇಲ್ಲದಂಥ ಮೌನವಾಗಿದ್ದಾರೆ. ₹ 4 ಕೋಟಿ ಬೃಹತ್ ಯೋಜನೆ ಜನರಿಗೆ ಉಪಯೋಗ ಆಗದೆ ಬಿದ್ದಿರುವುದಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ.

‘ಯೋಜನೆ ವ್ಯಾಪ್ತಿಯ ಗ್ರಾಮಗಳ ಜನರು ಈಗಾಗಲೇ ತಹಶೀಲ್ದಾರ್ ಸೇರಿದಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಯುವ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಸಾಕಷ್ಟು ಚರ್ಚೆ ಆಗಿದೆಯಾದರೂ ಜನರಿಗೆ ನೀರು ನೀಡಲು ಯಾರೊಬ್ಬರಿಂದ ಸಾಧ್ಯವಾಗುತ್ತಿಲ್ಲ’ ಎಂಬುದು ರಾಮದುರ್ಗ ನಿವಾಸಿ ಗಂಗಾಧರ ಅವರ ಆರೋಪ.

ರಾಮದುರ್ಗ ದೊಡ್ಡ ಗ್ರಾಮವಾಗಿದ್ದು, ಜನರಿಗೆ ವರ್ಷ ಪೂರ್ತಿ ಕುಡಿಯುವ ನೀರಿನ ತೊಂದರೆ ಇದೆ. ಗ್ರಾಮದ ಪಕ್ಕದಲ್ಲಿಯೇ ಕೋಟಿಗಟ್ಟಲೇ ಹಣ ಖರ್ಚು ಮಾಡಿ ನಿರ್ಮಿಸಿದ ಕೆರೆ ಇದ್ದರೂ ಪ್ರಯೋಜನ ಇಲ್ಲದಂತಾಗಿದೆ ಎಂಬುದು ಜನರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT