ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತಾಳ | ಕೋಟಿ ಕೋಟಿ ಖರ್ಚಾದರೂ ಸಂಚಾರಕ್ಕೆ ಪರದಾಟ

ಮಂಜುನಾಥ ಎನ್‌ ಬಳ್ಳಾರಿ
Published 6 ಜನವರಿ 2024, 5:31 IST
Last Updated 6 ಜನವರಿ 2024, 5:31 IST
ಅಕ್ಷರ ಗಾತ್ರ

ಕವಿತಾಳ: ಸಮೀಪದ ಮಲ್ಲದಗುಡ್ಡ ಗ್ರಾಮದಿಂದ ತೋರಣದಿನ್ನಿ ಸಂಪರ್ಕಿಸುವ ಮುಖ್ಯ ರಸ್ತೆಯ ದುರಸ್ತಿ ಕಾಮಗಾರಿ ಕಳಪೆಯಾಗಿದ್ದು ಕಾಮಗಾರಿ ಮುಗಿದ ಕೆಲವೇ ದಿನಗಳಲ್ಲಿ ರಸ್ತೆ ಹಾಳಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು, ಗುತ್ತಿಗೆದಾರರ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಾನ್ವಿ ತಾಲ್ಲೂಕಿನ ಬ್ಯಾಗವಾಟ್‌ನಿಂದ ಮಸ್ಕಿ ತಾಲ್ಲೂಕಿನ ತೋರಣದಿನ್ನಿ ಸಂಪರ್ಕಿಸುವ 16 ಕಿ.ಮೀ. ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಲೊಕೋಪಯೋಗಿ ಇಲಾಖೆ ವತಿಯಿಂದ ಎರಡು ಪ್ಯಾಕೇಜ್‌ಗಳಲ್ಲಿ ಇಬ್ಬರು ಗುತ್ತಿಗೆದಾರರಿಗೆ ವಹಿಸಲಾಗಿದೆ.

ಮಲ್ಲದಗುಡ್ಡದಿಂದ ತೋರಣದಿನ್ನಿ ವರೆಗೆ 8 ಕಿ.ಮೀ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಅಂದಾಜು ₹8 ಕೋಟಿ ವೆಚ್ಚದಲ್ಲಿಕೈಗೊಳ್ಳಲಾಗಿದೆ. ಕಾಮಗಾರಿ ಮುಗಿದ ನಾಲ್ಕು ತಿಂಗಳಲ್ಲೇ ರಸ್ತೆ ಕುಸಿದು ಡಾಂಬರು ಮೇಲ್ಪದರು ಕಿತ್ತು ಬರುತ್ತಿದ್ದು ವಾಹನ ಸವಾರರು ತೊಂದರೆಗೆ ಸಿಲುಕಿದ್ದಾರೆ.

‘ಈ ಭಾಗ ಸಂಪೂರ್ಣ ನೀರಾವರಿ ವ್ಯವಸ್ಥೆ ಹೊಂದಿದ್ದು ರೈತರು ಜಮೀನುಗಳಲ್ಲಿ ಭತ್ತ ಬೆಳೆಯುತ್ತಾರೆ. ಭತ್ತ ತುಂಬಿದ ಬೃಹತ್‌ ಲಾರಿಗಳು ಓಡಾಡುತ್ತವೆ, ಸ್ವಲ್ಪ ಆಯ ತಪ್ಪಿದರೂ ಅನಾಹುತ ಸಂಭವಿಸುವ ರೀತಿಯಲ್ಲಿ ಬಹುತೇಕ ಕಡೆ ರಸ್ತೆ ಕುಸಿದಿದೆ, ಕಳಪೆ ಗುಣಮಟ್ಟದ ಮುರಂ, ಹಾಗೂ ಇಲಾಖೆ ನಿಯಮಗಳಂತೆ ಕಾಮಗಾರಿ ಕೈಗೊಳ್ಳದಿರುವುದು ಈ ದುಸ್ಥಿತಿಗೆ ಕಾರಣ’ ಎಂದು ಮಲ್ಲದಗುಡ್ಡ ಗ್ರಾಮದ ಮಲ್ಲಯ್ಯ ಗೋರ್ಕಲ್‌ ಆರೋಪಿಸಿದರು.

‘ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿಲ್ಲ, ಹೀಗಾಗಿ ಗುತ್ತಿಗೆದಾರರು ತಮಗೆ ತೋಚಿದಂತೆ ಕೆಲಸ ಮಾಡಿದ್ದಾರೆ. ಡಾಂಬರೀಕರಣ ಮುಗಿದ ಕೆಲ ದಿನಗಳಲ್ಲಿಯೇ ಕಿತ್ತುಹೋಗಿ ಕಂಕರ್‌  ಮೇಲೆ ಬಂದಿವೆ. ಬರೀ ಕೈಯಿಂದಲೂ ಡಾಂಬರ್ ಕಿತ್ತು ಬರುತ್ತಿದೆ, ಈ ಬಗ್ಗೆ ಹಿರಿಯ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಪಾಟೀಲ ಒತ್ತಾಯಿಸಿದ್ದಾರೆ.

‘ಗ್ರಾಮೀಣ ರಸ್ತೆ ದುರಸ್ತಿಗೆ ಸರ್ಕಾರ ಕೋಟಿ ಕೋಟಿ ಹಣ ಖರ್ಚು ಮಾಡಿದರೂ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ ಮತ್ತು ಗುತ್ತಿಗೆದಾರರ ಕಳ್ಳಾಟದಿಂದ ಹದಗೆಟ್ಟ ರಸ್ತೆಯಲ್ಲಿ ಓಡಾಡುವಂತಾಗಿದೆ’ ಎಂದು ಮರಿಸ್ವಾಮಿ ಮತ್ತು ಡೊಳ್ಳು ರಂಗಯ್ಯ ನಾಯಕ ಆರೋಪಿಸಿದರು.

ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ರಸ್ತೆ ದುರಸ್ತಿಗೆ ಶೀಘ್ರ ಮುಂದಾಗಬೇಕು
ಹನುಮಂತ ಡೊಣಮರಡಿ, ಮುಖಂಡ
ರಸ್ತೆ ದುರಸ್ತಿಗೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು. ಕಾಳಜಿ ವಹಿಸದಿದ್ದರೆ ಇಲಾಖೆ ನಿಯಮದಂತೆ ಕ್ರಮ ಜರುಗಿಸುತ್ತೇವೆ.
ರಾಜಕುಮಾರ ತೊರವಿ, ಎಇಇ, ಲೋಕೋಪಯೋಗಿ ಇಲಾಖೆ ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT