ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಆರ್‌ಬಿಸಿ 5ಎ ಕಾಲುವೆಗಾಗಿ ಪ್ರತಿಭಟನೆ

Last Updated 3 ಮಾರ್ಚ್ 2021, 12:58 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ರೈತರಿಗೆ ಅನುಕೂಲವಾಗುವ ಎನ್‌ಆರ್‌ಬಿಸಿ 5ಎ ಪಾಮನಕಲ್ಲೂರು ಶಾಖಾ ಕಾಲುವೆ ಯೋಜನೆ ಅನುಷ್ಠಾನಗೊಳಿಸಲು 2021-22ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮೊದಲ ಹಂತವಾಗಿ ₹500 ಕೋಟಿ ಮೀಸಲಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ನೀರಾವರಿ ಸಂಘ, ಎನ್ಆರ್ ಬಿಸಿ5ಎ ಕಾಲುವೆ ಹೋರಾಟ ಸಮಿತಿಯ ನೇತೃತ್ವದಲ್ಲಿ ರೈತರು ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಡಾ.ಬಿ.ಆರ್‌. ಅಂಬೇಡ್ಕರ್ ವೃತ್ತದಲ್ಲಿ ರಸ್ತೆತಡೆ ಮಾಡಿದ್ದರಿಂದ ಕೆಲಕಾಲ ಸಂಚಾರಕ್ಕೆ ಸಮಸ್ಯೆಯಾಯಿತು. ಎನ್‌ಆರ್‌ಬಿಸಿ 5ಎ ಪಾಮನಕಲ್ಲೂರು ಶಾಖಾ ಕಾಲುವೆ ಯೋಜನೆ ಜಾರಿಗೆ ಆಗ್ರಹಿಸಿ ಮಸ್ಕಿ ವಿಧಾನಸಭಾ ಕ್ಷೇತ್ರದ ಪಾಮನಕಲ್ಲೂರಿನ ಆದಿಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 100 ದಿನ ಪೂರೈಸಿದೆ. ಯೋಜನೆ ಜಾರಿಗೆ ಒತ್ತಾಯಿಸಿ ಕಳೆದ 12 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಆದರೂ ರಾಜ್ಯ ಸರ್ಕಾರ ಈ ಭಾಗದ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.

ನಿರಂತರ ಹೋರಾಟದ ಫಲವಾಗಿ ಜಲಸಂಪನ್ಮೂಲ ಇಲಾಖೆಯು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಮೂಲಕ ಎನ್‌ಆರ್‌ಬಿಸಿ 5 ಪಾಮನಕಲ್ಲೂರು ಶಾಖಾ ಕಾಲುವೆ ಯೋಜನೆ ಸಂಕ್ಷಿಪ್ತ ಡಿಪಿಆರ್ ತಯಾರಿಸಿ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದೆ. ಯೋಜನೆ ಜಾರಿಯಾದರೆ ಬರಪೀಡಿತ ರಾಯಚೂರು, ಕೊಪ್ಪಳ ಜಿಲ್ಲೆಗಳ 7 ತಾಲ್ಲೂಕುಗಳ 107 ಗ್ರಾಮಗಳ 72,000 ಹೆಕ್ಟೇರ್ (177,912 ಎಕರೆ ) ಪ್ರದೇಶ ನೀರಾವರಿ ವ್ಯಾಪ್ತಿಗೊಳಪಡಲಿದೆ. ಯೋಜನೆಯ ಅಂದಾಜು ಮೊತ್ತವನ್ನು ₹2,755 ಕೋಟಿ ಹೇಳಿದ್ದು, ರಾಜಕೀಯ ಒತ್ತಡಗಳ ಕಾರಣ ಅನುಷ್ಠಾನಗೊಳಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯೋಜನೆಗೆ ಜಾರಿಗೆ ಒತ್ತಾಯಿಸಿ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಮಿನಗಡ, ಪಾಮನಕಲ್ಲೂರು, ವಟಗಲ್ ಹಾಗೂ ಅಂಕುಶದೊಡ್ಡಿ ಗ್ರಾಮ ಪಂಚಾಯಿತಿ ಹಳ್ಳಿಗಳ ಜನರು ಚುನಾವಣೆ ಬಹಿಷ್ಕರಿಸಿದ್ದು, 77 ಸ್ಥಾನಗಳಿಗೆ ಮತದಾನವೇ ನಡೆದಿಲ್ಲ. ಬರಸಿಡಿತ ಪ್ರದೇಶದಲ್ಲಿ ನಿತ್ಯ ನೂರಾರು ಸಂಕಷ್ಟ ಅನುಭವಿಸುತ್ತಿರುವ ಲಕ್ಷಾಂತರ ರೈತ ಕುಟುಂಬಗಳು ಜೀವನ ನಿರ್ವಹಣೆಗೆ ಸಮಸ್ಯೆಯಾಗಿದೆ ಎಂದರು.

ಪ್ರಸಕ್ತ 2021-22ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮೊದಲ ಹಂತವಾಗಿ ₹500 ಕೋಟಿ ಮೀಸಲಿಡಬೇಕು. ನಿರ್ಲಕ್ಷ್ಯ ವಹಿಸಿದ್ದಲ್ಲಿ ಮುಂಬರುವ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ನೀರಾವರಿ ಸಂಘದ ಮಸ್ಕಿ ಘಟಕದ ಅಧ್ಯಕ್ಷ ಬಸವರಾಜಪ್ಪ ಗೌಡ ಹರ್ವಾಪೂರ, ಗೌರವಾಧ್ಯಕ್ಷ ತಿಮ್ಮನಗೌಡ ಜಲ್ಕರಾಗಿ, ಕಾರ್ಯದರ್ಶಿ ನಾಗರೆಡ್ಡಪ್ಪ ದೇವರಮನಿ, ಎನ್.ಶಿವನಗೌಡ ವಟಗಲ್, ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ, ಕರಿಯಪ್ಪ, ಶಿವುಕುಮಾರ ಮ್ಯಾಗಳಮನಿ, ಶೇಖರ ಪಲ್ಲೇದ್, ರವಿ ದಾದಸ್, ಸಾದೀಕ ಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT