ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮರಾಜ್ಯ ಕನಸು ಕಂಡಿದ್ದ ಗಾಂಧೀಜಿ

ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರಿ ಜಯಂತಿಯಲ್ಲಿ ಶಾಸಕ ಡಾ.ಶಿವರಾಜ ಪಾಟೀಲ ಹೇಳಿಕೆ
Last Updated 3 ಅಕ್ಟೋಬರ್ 2019, 14:09 IST
ಅಕ್ಷರ ಗಾತ್ರ

ರಾಯಚೂರು: ಜೀವನದುದ್ದಕ್ಕೂ ಶಾಂತಿ ಪ್ರತಿಪಾದಿಸಿದ ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯದ ನಂತರ ರಾಮರಾಜ್ಯದ ಕನಸು ಕಂಡಿದ್ದರು ಎಂದು ಶಾಸಕ ಡಾ.ಶಿವರಾಜ ಪಾಟೀಲ ಹೇಳಿದರು.

ನಗರದ ಎಸ್‌ಆರ್‌ಕೆ ಶಿಕ್ಷಣ ಕಾಲೇಜಿನಲ್ಲಿ ವಿಜಯಪುರದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ, ನಗರಸಭೆ, ನೆಹರು ಯುವ ಕೇಂದ್ರ, ಭಾರತ ಸೇವಾದಳದಿಂದ ಬುಧವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿಯ 150ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಗಾಂಧೀಜಿ ಪ್ರಕಾರ ರಾಮರಾಜ್ಯವೆಂದರೆ ಸರ್ವ ಧರ್ಮಗಳನ್ನು ಸಮಾನವಾಗಿ ಗೌರವಿಸುವ ಸಮಾನತೆ ಸಾರುವ ರಾಜ್ಯವಾಗಿತ್ತು. ಅವರು ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವ ಹೋರಾಟ ವಿಶ್ವಕ್ಕೆ ಮಾದರಿಯಾಗಿದೆ ಎಂದರು.

ಸ್ವಚ್ಛ ಭಾರತ ಅಭಿಯಾನಕ್ಕೆ ಗಾಂಧೀಜಿಯವರು ಹೆಚ್ಚಿನ ಮಹತ್ವ ನೀಡಿದ್ದರು. ಗ್ರಾಮೀಣ ಹಾಗೂ ನಗರದ ಪ್ರದೇಶದ ಜನರು ತ್ಯಾಜ್ಯವನ್ನು ಸಂಪೂರ್ಣವಾಗಿ ನಿರ್ವಹಣೆ ಮಾಡಬೇಕು. ಸಂಸ್ಕರಣೆ ಮತ್ತು ಮರುಬಳಕೆ ಮಾಡಬೇಕು. ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.

ಬಡವರಿಗಾಗಿ ಎರಡು ಸಾವಿರ ಮನೆಗಳನ್ನು ಮಂಜೂರು ಮಾಡಿಸಲಾಗಿದ್ದು, ಕೇಂದ್ರ ಸರ್ಕಾರ 5 ವರ್ಷಗಳಲ್ಲಿ 5 ಕೋಟಿ ಮನೆಗಳನ್ನು ನಿರ್ಮಿಸಿದೆ. 2022ರ ವೇಳೆಗೆ ಪ್ರತಿಯೊಬ್ಬರಿಗೂ ಸೂರು ದೊರೆಯಲಿದೆ. ಜಿಲ್ಲೆಯಲ್ಲಿ 8 ಸಾವಿರ ಕುಟುಂಬಗಳಿಗೆ ಉಜ್ವಲ ಯೋಜನೆ ಸೌಲಭ್ಯ ಒದಗಿಸಲಾಗಿದೆ ಎಂದರು.

ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಟಿ.ಎಂ.ವಿರುಪಾಕ್ಷಿ ಉಪನ್ಯಾಸ ನೀಡಿದರು. ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಪ್ರಚಾರಾಧಿಕಾರಿ ಮುರುಳಿಧರ್ ಕಾರಭಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಟಾಗೋರ್ ಸ್ಮಾರಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಕೆ.ಅಮರೇಶ ಮಾತನಾಡಿದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ದರೂರು ಬಸವರಾಜ, ಪ್ರಾಚಾರ್ಯೆ ಅರುಣಾಕುಮಾರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಚ್.ಜಿ.ರವಿರಾಜ, ಭಾರತ ಸೇವಾದಳ ವಿಭಾಗ ಸಂಘಟಕ ವಿದ್ಯಾಸಾಗರ ಚಿಣಮಗೇರಿ, ಜಿ.ಎಸ್.ಹಿರೇಮಠ, ಅತ್ತಾವುಲ್ಲಾ, ದಂಡಪ್ಪ ಬಿರಾದರ, ಮಹೇಂದ್ರ ರೆಡ್ಡಿ ಇದ್ದರು.

ಸ್ವಾತಂತ್ರ್ಯ ಹೋರಾಟಗಾರ ಆಲ್ಕೋಡ್ ಅಮರೇಶ ಅವರನ್ನು ಸನ್ಮಾನಿಸಲಾಯಿತು. ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಸ್ವಚ್ಛ ಭಾರತ ಅಭಿಯಾನ:ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ನಗರದ ರೈಲು ನಿಲ್ದಾಣದಲ್ಲಿ ದಕ್ಷಿಣ ರೈಲ್ವೆ ವಲಯ ಹಾಗೂ ರೋಟರಿ ಕ್ಲಬ್‌ನಿಂದ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಗುಂತಕಲ್ ವಿಭಾಗದ ಅಧಿಕಾರಿ ಕೆ.ಸೂರ್ಯನಾರಾಯಣ ಮಾತನಾಡಿ, ಗುಂತಕಲ್ ವಿಭಾಗದ ಎಲ್ಲ ರೈಲು ನಿಲ್ದಾಣಗಳನ್ನು ಪ್ಲಾಸ್ಟಿಕ್ ಮುಕ್ತವಾದ ನಿಲ್ದಾಣಗಳನ್ನಾಗಿ ಮಾಡಲಾಗುತ್ತದೆ. ಇದಕ್ಕಾಗಿ ಈಗಾಗಲೇ ನಿಲ್ದಾಣದಲ್ಲಿ ಯಾವುದೇ ಪ್ಲಾಸ್ಟಿಕ್ ಬಳಸದಂತೆ ಆದೇಶ ನೀಡಲಾಗಿದೆ ಎಂದರು.

ರಾಯಚೂರಿನ ರೈಲು ನಿಲ್ದಾಣಕ್ಕೆ ಗಾಂಧೀಜಿ ಭೇಟಿ ನೀಡಿರುವುದರಿಂದ ಮಹತ್ವದ ನಿಲ್ದಾಣವಾಗಿದೆ. ಆದ್ದರಿಂದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.

ರೋಟರಿ ಕ್ಲಬ್‌ ನಿರ್ದೇಶಕ ಎನ್.ಶಿವಶಂಕರ, ರೈಲ್ವೆ ಸಲಹ ಸಮಿತಿ ಸದಸ್ಯ ಜಗದೀಶ್ ಗುಪ್ತಾ ಮಾತನಾಡಿದರು.

ವಲಯ ಉಪ ಅಧಿಕಾರಿ ಅಕ್ಕಿರೆಡ್ಡಿ, ರಾಯಚೂರು ನಿಲ್ದಾಣ ಮುಖ್ಯಸ್ಥ ಸುದರ್ಶನ್, ಸ್ಟೇಶನ್ ಮ್ಯಾನೇಜರ್‌ ಸರ್ಕಾರ್, ಅಧಿಕಾರಿ ವಿವೇಕಾನಂದ ಶೇಖರ, ವಿಜಯಕುಮಾರ ಸಜ್ಜನ, ಶೇಖರ, ವಿಜಯ ಮಹಾತೇಂಶ, ರಾಘವೇಂದ್ರ, ಶಫಿ ಇದ್ದರು.

ರೈಲು ನಿಲ್ದಾಣದ ಮುಂಭಾಗದಲ್ಲಿ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ಪ್ರಾದೇಶಿಕ ಅರಣ್ಯ ವಿಭಾಗ:ನಗರದ ಆರ್‌ಟಿಒ ವೃತ್ತದ ಹತ್ತಿರವಿರುವ ಅರಣ್ಯ ಇಲಾಖೆಯ ನಿಸರ್ಗಧಾಮದಲ್ಲಿ ಮಹಾತ್ಮಗಾಂಧೀಜಿ ಜಯಂತಿ ನಿಮಿತ್ತ ಪ್ರಾದೇಶಿಕ ಅರಣ್ಯ ವಿಭಾಗದಿಂದ ಸ್ವಚ್ಛ ನಿಸರ್ಗಧಾಮ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸಿಬ್ಬಂದಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು. ಈ ಕಾರ್ಯಕ್ಕೆ ಸಾರ್ವಜನಿಕರು, ನವೋದಯ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು, ಅರಣ್ಯ ಇಲಾಖೆಯ ದಿನಗೂಲಿ ನೌಕರರು ಕೈಜೋಡಿಸಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಪಿ.ಬೋರಳೆ ಮಾತನಾಡಿ, ಸಿಬ್ಬಂದಿ ಸ್ವಚ್ಛತೆ ಕಾಪಾಡುವ ಮೂಲಕ ಜನರಿಗೆ ಮಾದರಿಯಾಗಿ ಇರಬೇಕು ಎಂದು ಹೇಳಿದರು.

ಅಧಿಕಾರಿಗಳಾದ ಮಹಾಬಲೇಶ್ವರ, ನೀಲಕಂಠ, ಮಮ್ಮದ್ ಸಾಲರ್ ಹುಸೇನ್, ರಕ್ಷಕರಾದ ಶ್ರೀಕಾಂತಪ್ಪ, ರಾಘವೇಂದ್ರ, ಯಲ್ಲಪ್ಪ ಮರ್ಚೆಡ್, ರಾಮಯ್ಯ, ನಾರಾಯಣ, ಹನುಮಂತ, ಕ್ಯಾಶ್ ರಾಮಪ್ಪ, ನಾರಾಯಣ ಜಂಬಲದಿನ್ನಿ, ವಿಜಯ್, ಅಬ್ದುಲ್ ಭಾಷ, ಶಿವಪ್ಪ, ಹುಸೇನಪ್ಪ, ನರಸಪ್ಪ, ವಿದ್ಯಾರ್ಥಿಗಳಾದ ಹೈಮದ್, ರುಮಾನಾ, ಶೃತಿ, ಸಾರಿಕಾ ಇದ್ದರು.

ಆರೋಗ್ಯ ಅಧಿಕಾರಿ ಕಚೇರಿ:ತಾಲ್ಲೂಕು ಆರೋಗ್ಯ ಅಧಿಕಾರಿ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ ಶಾಸ್ತ್ರಿ ಜಯಂತಿ ಆಚರಿಸಲಾಯಿತು. ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಎಂ.ಡಿ.ಶಾಕೀರ ಮಾತನಾಡಿದರು. ರಂಗರಾವ ಕುಲಕರ್ಣಿ ಐಕೂರ ಪ್ರತಿಜ್ಞಾ ವಿಧಿ ಬೋಧಿಸಿದರು. ನಂತರ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ಡಾ.ರಾಕೇಶ, ರಾಘವೇಂದ್ರ, ಸಂಧ್ಯಾ, ಸರೋಜ, ಮರಿಯಾಳಮ್ಮ, ಮಂಜುಳಾ, ಸತೀಶ, ನವೀನ, ಆಬೀದ ಇದ್ದರು.

ಶ್ರಮದಾನ ಕಾರ್ಯಕ್ರಮ:ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ ನಿಮಿತ್ತ ನಗರದ ಟಾಗೋರ ಸ್ಮಾರಕ ಶಿಕ್ಷಣ ಸಂಸ್ಥೆಯ ಸೀತಾ ಸುಬ್ಬರಾಜು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯುವ ರೆಡ್‌ಕ್ರಾಸ್‌ ಘಟಕ, ಎನ್‌ಸಿಸಿ ಘಟಕದಿಂದ ಸ್ವಚ್ಛತಾ ಹಿ ಸೇವಾ ಅಭಿಯಾನದಡಿ ಪ್ಲಾಸ್ಟಿಕ್ ತ್ಯಾಜ್ಯ ಸ್ವಚ್ಛತೆಗೆ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಗಾಂಧೀಜಿ ಭಾವಚಿತ್ರಕ್ಕೆ ಎನ್‌ಸಿಸಿ ಅಧಿಕಾರಿ ಬಸವರಾಜಪ್ಪ ಮಾಲಾರ್ಪಣೆ ಮಾಡಿದರು. ಎನ್‌ಎಸ್‌ಎಸ್‌ ಅಧಿಕಾರಿ ಶ್ರೀನಿವಾಸ ರಾಯಚೂರಕರ್ ಮಾತನಾಡಿದರು. ಕೆ.ಬಸವರಾಜ, ಪಿ.ವೆಂಕಟೇಶ, ಪ್ರಭುದೇವ, ರವಿಕುಮಾರ, ವಿಜಯಲಕ್ಷ್ಮಿ, ರಾಜೇಶ್ವರಿ ಇದ್ದರು.

ಬಿಆರ್‌ಬಿ ಕಾಲೇಜು:ತಾರಾನಾಥ ಶಿಕ್ಷಣ ಸಂಸ್ಥೆಯ ಬಿಆರ್‌ಬಿ ಕಾಲೇಜಿನಲ್ಲಿ ಎನ್‌ಸಿಸಿ ಹಾ ಎನ್‌ಎಸ್‌ಎಸ್‌ ಘಕಟದಿಂದ ಮಹಾತ್ಮ ಗಾಂಧೀಜಿ ಜಯಂತಿ ಆಚರಿಸಲಾಯಿತು.

ಪ್ರಾಚಾರ್ಯ ಬಿ.ದೇವರೆಡ್ಡಿ ಮಾತನಾಡಿದರು. ಎನ್‌ಸಿಸಿ ಅಧಿಕಾರಿ ತಿಪ್ಪಣ್ಣ, ಎನ್‌ಎಸ್‌ಎಸ್‌ ಅಧಿಕಾರಿ ಮಲ್ಲಿಕಾರ್ಜುನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT