ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದ ಜಿಲ್ಲೆ ಅಭಿವೃದ್ಧಿಗೆ ಸಲಹೆ ಕೊಡಿ: ಕುಮಾರ ಬಂಗಾರಪ್ಪ

ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿ ಅಧ್ಯಕ್ಷ
Last Updated 17 ಆಗಸ್ಟ್ 2022, 13:26 IST
ಅಕ್ಷರ ಗಾತ್ರ

ರಾಯಚೂರು: ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿ ಜಾರಿಗೊಳಿಸಲು ಮತ್ತು ಸಾಮಾನ್ಯ ಜನರಿಗೆ ಅನುಕೂಲ ಒದಗಿಸಲು ಮಾಡಿದ ಮಾದರಿ ಕೆಲಸಗಳ ಬಗ್ಗೆ ತಿಳಿಸಿ ಅಥವಾ ಯೋಜನೆ ಅನುಷ್ಠಾನಕ್ಕೆ ಯಾವ ಅಂಶಗಳು ಅಡ್ಡಿಯಾಗುತ್ತಿವೆ ಎಂಬುದನ್ನು ಬಾಯಿಬಿಟ್ಟು ಹೇಳಬೇಕು ಎಂದು ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ಕುಮಾರ ಬಂಗಾರಪ್ಪ ಅವರು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸಮಿತಿ ಸಭೆ ಆಯೋಜನೆ ಕುರಿತು ಮೊದಲೇ ಪತ್ರ ಬರೆಯಲಾಗಿತ್ತು. ಆದರೂ ಅಧಿಕಾರಿಗಳು ಪೂರ್ವ ತಯಾರಿ ಮಾಡಿಕೊಂಡಿಲ್ಲ. ಸಮಿತಿ ಸದಸ್ಯರೆಲ್ಲರೂ ಪಿಕ್‌ನಿಕ್‌ ಮಾಡುವುದಕ್ಕೆ ರಾಯಚೂರಿಗೆ ಬಂದಿಲ್ಲ. ವಿಧಾನಸಭೆ ಚುನಾವಣೆ ಹತ್ತಿರ ಇರುವುದರಿಂದ ಕ್ಷೇತ್ರದಲ್ಲೇ ಅನೇಕ ಕಾರ್ಯಕ್ರಮಗಳಿದ್ದರೂ ಬಿಟ್ಟು ರಾಯಚೂರು ಜಿಲ್ಲೆ ಅಭಿವೃದ್ಧಿಗೆ ಮಹತ್ವ ಕೊಟ್ಟು ಬಂದಿದ್ದೇವೆ. ಜನಸಾಮಾನ್ಯರ ಜೀವನಮಟ್ಟ ಸುಧಾರಿಸಲು ಏನುಬೇಕು ಎಂಬುದನ್ನು ಅಧಿಕಾರಿಗಳು ತಿಳಿಸಿದರೆ, ಸಮಿತಿ ಪರವಾಗಿ ಸರ್ಕಾರದಿಂದ ಕೆಲಸ ಮಾಡಿಸಿಕೊಡುತ್ತೇವೆ‘ ಎಂದರು.

‘ವಿವಿಧ ಯೋಜನೆಗಳಡಿ ರಾಯಚೂರು ಮತ್ತು ಸಿಂಧನೂರಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ವಸತಿ ನಿಲಯಗಳನ್ನು ನಿರ್ಮಾಣ ಮಾಡಲಾಗಿದ್ದು, ಅವುಗಳನ್ನು ಅನ್ಯ ಉದ್ದೇಶಕ್ಕೆ ಬಳಸಬಾರದು. ಈ ಬಗ್ಗೆ ಮಾಹಿತಿ ನೀಡಬೇಕಿದ್ದ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್‌ ಸಭೆಗೆ ಬಂದಿಲ್ಲ. ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗೂ ಸರಿಯಾಗಿ ಮಾಹಿತಿ ಇಲ್ಲ. ಇಬ್ಬರಿಗೂ ಶೋಕಾಸ್‌ ನೋಟಿಸ್‌ ಕೊಡಿ‘ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

’ಹಿಂದುಳಿದ ವರ್ಗಗಳ ವಸತಿ ನಿಲಯಗಳ ನಿರ್ವಹಣೆಗೆ ಸರ್ಕಾರವು ನೀಡುತ್ತಿರುವ ಅನುದಾನ ಸಾಕಾಗುತ್ತಿಲ್ಲ. ಇದು ರಾಜ್ಯಮಟ್ಟದ ಸಮಸ್ಯೆಯಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಗಮನ ಸೆಳೆಯುವ ಕೆಲಸವಾಗಿದೆ. ಪ್ರತಿ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಬಿಸಿನೀರಿನ‌ ವ್ಯವಸ್ಥೆ ಮಾಡಬೇಕು.‌ ಎಲ್ಲೆಲ್ಲಿ ಸೋಲಾರ್ ವ್ಯವಸ್ಥೆ ಇಲ್ಲ ಎಂಬುದರ ಪಟ್ಟಿ ಕೊಡಬೇಕು.‌ ವಸತಿ ನಿಲಯಗಳಿಗೆ ಹೊದಿಕೆಗಳನ್ನು ಒದಗಿಸುವ ವಿಷಯವನ್ನು ಮುಖ್ಯಮಂತ್ರಿ ಜೊತೆ ಮಾತನಾಡಲಾಗುವುದು‘ ಎಂದು ತಿಳಿಸಿದರು.

ಗಡಿಭಾಗದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿ ನಡೆಯುತ್ತವೆ. ಡ್ರಗ್ಸ್ ಸಾಗಣೆ ಮೇಲೆ ನಿಗಾ ಇಡಬೇಕು. ವಸತಿಗಳ ನಿರ್ಮಾಣದಲ್ಲಿ ಗುಣಮಟ್ಟದ ಬಗ್ಗೆ ಎಚ್ಚರಿಕೆ ವಹಿಸಿ,‌ ಮುಖ್ಯವಾಗಿ ಸಲಕರಣೆಗಳು ಉತ್ತಮವಾಗಿರುವ ಬಗ್ಗೆ ಖಾತರಿ ಮಾಡಿಕೊಳ್ಳಿ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸಲಹೆ ನೀಡಿದರು.

ಜಿಲ್ಲೆಯಲ್ಲಿ ನರೇಗಾ ಯೋಜನೆ ಸದುಪಯೋಗ ಮಾಡಬೇಕು. ಗುಳೆ ಹೋಗುವುದನ್ನು ತಡೆಯುವ ಕೆಲಸ ಆಗಬೇಕು.‌ ಪ್ರತಿ ಗ್ರಾಮ ಪಂಚಾಯಿತಿಯಡಿ ಕನಿಷ್ಠ ಎರಡು ಎಕರೆ ಭೂಮಿ ನಿವೇಶನಗಳ ಅಭಿವೃದ್ಧಿಗೆ ಮೀಸಲಿಡಬೇಕು. ವಸತಿ ರಹಿತರ ಪಟ್ಟಿ ಮಾಡಿ, ಅವರಿಗೆ ನಿವೇಶನ ಒದಗಿಸುವ ಯೋಜನೆ ಮಾಡಬೇಕು. ಕೂಡಲೇ ವಸತಿ ರಹಿತರ ಪಟ್ಟಿ ಅನ್ ಲೈನ್ ಗೆ ಸೇರ್ಪಡೆ ಮಾಡಬೇಕು ಎಂದು ಸೂಚಿಸಿದರು.

ಸಮಿತಿ ಸದಸ್ಯ ಗೂಳಿಹಟ್ಟಿ ಶೇಖರ್ ಮಾತನಾಡಿ, ಅನುದಾನ ಲಭ್ಯವಿದ್ದರೂ ಕಟ್ಟಡಗಳನ್ನು ನಿರ್ಮಿಸದೆ ಇರುವುದು ಲೋಕೋಪಯೋಗಿ ಇಲಾಖೆಯವರ ಹೊಣೆಗೇಡಿತನ. ಕೆಲವು ಅಧಿಕಾರಿಗಳನ್ನು ಅಮಾನತು ಮಾಡಿಸಬೇಕು. ರಾಯಚೂರು ಜಿಲ್ಲೆಯನ್ನು ವಿಶೇಷವಾಗಿ ಪರಿಶೀಸಲು ಸಮಿತಿ ಬಂದಿದೆ. ಆದರೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸದಿರುವುದು ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ಚರ್ಚ್ ದುರಸ್ತಿಗೆ ಯಾವ ದಾಖಲಾತಿ ಕೇಳುತ್ತಿದ್ದೀರಿ. ನೈಜ ಕ್ರೈಸ್ತರು ಮತ್ತು ಮತಾಂತರಗೊಂಡ ಕ್ರೈಸ್ತರ ಪಟ್ಟಿ ಮಾಡಿ ಕಳುಹಿಸಿ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ ಮಾತನಾಡಿ, ರಾಯಚೂರು ಮಹತ್ವಾಕಾಂಕ್ಷೆ ಜಿಲ್ಲೆ ಆಗಿರುವುದರಿಂದ 20 ಕಂಪೆನಿಗಳಿಗೆ ಸಿಎಸ್ ಆರ್ ಅನುದಾನ ಕೋರಲಾಗಿದೆ. ಕೆಲವು ಕಂಪೆನಿಗಳು ನೀಡಿದ ಅನುದಾನ ಶಾಲೆಗಳಿಗೆ ಬಳಕೆ ಮಾಡಲಾಗುತ್ತಿದೆ. ಸಮಿತಿ ಸಭೆ ನಡೆಯುವ ಪೂರ್ವಭಾವಿಯಾಗಿ ಸಭೆ ಮಾಡುವಾಗ ಎಲ್ಲ‌ ಇಲಾಖೆ ಅಧಿಕಾರಿಗಳಿದ್ದರು. ಇವತ್ತೆ ಕೆಲವು ಅಧಿಕಾರಿಗಳು ಕಾಣುತ್ತಿಲ್ಲ.‌ ಅನುಮತಿ ಕೂಡಾ ತೆಗೆದುಕೊಂಡಿಲ್ಲ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್‌ ಬಿ. ಮಾತನಾಡಿ, ಆಂಧ್ರಪ್ರದೇಶ ಮತ್ತು, ತೆಲಂಗಾಣ ರಾಜ್ಯಗಳ ಮಧ್ಯೆ ರಾಯಚೂರು ಇದೆ. ಈ ಮೊಸಲು ಪೊಲೀಸ್‌ ವಸತಿ ಸಮಸ್ಯೆ ಇತ್ತು .‌ಆದರೆ ಹಂತಹಂತವಾಗಿ ಪರಿಹಾರವಾಗುತ್ತಿದೆ. ಮೂರು ಬ್ಲಾಕ್ ಗಳು ಮಂಜೂರಿಯಾಗಿವೆ. ದೇವದುರ್ಗ, ಜಾಲಹಳ್ಳಿ ಹೊಸ ಪೊಲೀಸ್ ಠಾಣೆಗಳು ಮಂಜೂರಿಯಾಗಿವೆ. ಸಿಎಚ್ ಪೌಡರ್ ಸಮಸ್ಯೆ ರಾಯಚೂರು ತಾಲ್ಲೂಕಿನಲ್ಲಿದೆ. ಈ ಸಮಸ್ಯೆ ವಿರುದ್ಧ ನಿಗಾ ವಹಿಸಲಾಗಿದ್ದು, ಈ ವರ್ಷ ಆರು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.

ಸಮಿತಿ ಸದಸ್ಯರಾದ ಲಾಲಜಿ ಆರ್‌.ಮೆಂಡನ್‌, ದಿನಕರ್‌ ಕೇಶವಶೆಟ್ಟಿ, ಕೆ.ಬಿ.ಅಶೋಕ ನಾಯ್ಕ್‌, ಸಿ.ಎಂ.ನಿಂಬಣ್ಣವರ್‌, ದೇವಾನಂದ ಚವ್ಣಾಣ, ಕೆ.ಮಹದೇವ, ರಾಜಾ ವೆಂಕಟಪ್ಪ ನಾಯಕ, ಅರವಿಂದಕುಮಾರ್ ಅರಳಿ, ಕೆ.ಪ್ರತಾಪಸಿಂಹ ನಾಯಕ್‌, ವೈ.ಎಂ. ಸತೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT