ಶುಕ್ರವಾರ, ಮಾರ್ಚ್ 31, 2023
32 °C
ಮಾನ್ವಿ ತಾಲ್ಲೂಕು ಆಡಳಿತದ ಕಾರ್ಯವೈಖರಿಗೆ ಸಾರ್ವಜನಿಕರ ಅತೃಪ್ತಿ

ಉದ್ಘಾಟನೆ ಭಾಗ್ಯ ಕಾಣದ ಸರ್ಕಾರಿ ಕಟ್ಟಡಗಳು

ಬಸವರಾಜ ಭೋಗಾವತಿ Updated:

ಅಕ್ಷರ ಗಾತ್ರ : | |

Prajavani

ಮಾನ್ವಿ: ಪಟ್ಟಣದಲ್ಲಿ ವಿವಿಧ ಇಲಾಖೆಗಳಿಂದ ನಿರ್ಮಿಸಲಾದ ಸರ್ಕಾರಿ ಕಟ್ಟಡಗಳು ಉದ್ಘಾಟನೆ ಭಾಗ್ಯ ಕಾಣದಿರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.

ನೂತನ ತಾಯಿ ಮಕ್ಕಳ ಆಸ್ಪತ್ರೆ, ಟೌನ್‌ಹಾಲ್, ನಗರ ಯೋಜನಾ ಪ್ರಾಧಿಕಾರದ ಕಚೇರಿಯ ಕಟ್ಟಡ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣ ಮತ್ತು ಹೆಚ್ಚುವರಿ ಕೊಠಡಿಗಳು ಸೇರಿದಂತೆ ಹಲವು ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ.

ಉದ್ಘಾಟನೆ ವಿಳಂಬಕ್ಕೆ ಮಸ್ಕಿ ಉಪ ಚುನಾವಣೆಯ ನೀತಿ ಸಂಹಿತಿ ಹಾಗೂ ಕೋವಿಡ್ ನೆಪ ಹೇಳುತ್ತಿರುವ ಅಧಿಕಾರಿಗಳು ವರ್ಷದ ಹಿಂದೆ ಪೂರ್ಣಗೊಂಡ ಕಟ್ಟಡಗಳ ಉದ್ಘಾಟನೆ ಬಗ್ಗೆ ಸಮರ್ಪಕ ಉತ್ತರ ನೀಡುತ್ತಿಲ್ಲ. ರಾಜಕೀಯ ಕಾರಣಗಳಿಗಾಗಿ ಉದ್ಘಾಟನೆಗೆ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪ.

2017-18ನೇ ಸಾಲಿನಲ್ಲಿ ನಗರಾಭಿವೃದ್ಧಿ ಇಲಾಖೆಯ ₹ 38 ಲಕ್ಷ ವೆಚ್ಚದಲ್ಲಿ ನಗರ ಯೋಜನಾ ಪ್ರಾಧಿಕಾರದ ಕಚೇರಿಯ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಂಡು 6 ತಿಂಗಳು ಗತಿಸಿವೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಅಡಿಯಲ್ಲಿ ₹ 12 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 60 ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆ ಕಾಮಗಾರಿ ಮುಗಿದು ಒಂದು ವರ್ಷ ಕಳೆದಿದೆ.

ಕೆಕೆಆರ್‌ಡಿಬಿ ವತಿಯಿಂದ ₹ 1.88 ಕೋಟಿ ವೆಚ್ಚದಲ್ಲಿ ಟೌನ್‌ಹಾಲ್ ನಿರ್ಮಾಣಗೊಂಡು 7ತಿಂಗಳು ಗತಿಸಿವೆ. ನಗರ ಯೋಜನಾ ಪ್ರಾಧಿಕಾರದ ಕಚೇರಿ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳು ಖಾಸಗಿ ಬಾಡಿಗೆ ಕಟ್ಟಡಗಳಲ್ಲಿವೆ.

ಸ್ವಂತ ಕಟ್ಟಡ ನಿರ್ಮಾಣವಾದರೂ ಉದ್ಘಾಟನೆಯ ವಿಳಂಬದಿಂದಾಗಿ ಬಾಡಿಗೆ ವೆಚ್ಚ ಸರ್ಕಾರಕ್ಕೆ ಹೊರೆ ಎಂಬುದು ಸಾರ್ವಜನಿಕರ ದೂರು. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆದಷ್ಟು ಬೇಗನೆ ಹೊಸ ಸರ್ಕಾರಿ ಕಟ್ಟಡಗಳ ಉದ್ಘಾಟನೆಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು