ಗುರುವಾರ , ಸೆಪ್ಟೆಂಬರ್ 23, 2021
28 °C
ಗುಲಬರ್ಗಾ ವಿಶ್ವವಿದ್ಯಾಲಯದಿಂದ ಬೇರ್ಪಡುವ ಪ್ರಕ್ರಿಯೆ ವಿಳಂಬ

ರಾಯಚೂರು ವಿವಿಗೆ ‘ಶಕ್ತಿ’ ನೀಡದ ಸರ್ಕಾರ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಹತ್ತಾರು ಸವಾಲು ಎದುರಿಸಿ ರಾಯಚೂರು ವಿಶ್ವವಿದ್ಯಾಲಯ ಸ್ಥಾಪಿಸುವ ಕಡತಕ್ಕೆ ರಾಜ್ಯಪಾಲರ ಒಪ್ಪಿಗೆ ಪಡೆದಿದ್ದ ರಾಜ್ಯ ಸರ್ಕಾರ, ಸ್ವತಃ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ನೂತನ ವಿಶ್ವವಿದ್ಯಾಲಯಕ್ಕೆ ಇದುವರೆಗೂ ಅನುದಾನ ನೀಡಿಲ್ಲ!

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭಿಸಲು ಪೂರ್ವ ತಯಾರಿ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಯಚೂರು ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಅವರಿಗೆ ಕಳೆದ ಜೂನ್‌ನಲ್ಲಿ ಪತ್ರವೊಂದನ್ನು ಬರೆದಿದ್ದರು. ಸರ್ಕಾರ ಈಗಲಾದರೂ ಸ್ಪಂದಿಸಿದ್ದು, ಅನುದಾನದ ನೆರವು ಕೊಡಬಹುದು ಹಾಗೂ ಸ್ವತಂತ್ರ ಕಾರ್ಯನಿರ್ವಹಣೆ ಸಾಧ್ಯವಾಗಬಹುದು ಎಂದು ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಶೈಕ್ಷಣಿಕ ವಲಯದಲ್ಲಿ ಚರ್ಚೆ ಶುರುವಾಗಿತ್ತು. ಇದ್ದಕ್ಕಿದ್ದಂತೆ ಉನ್ನತ ಅಧಿಕಾರಿಗಳಿಂದ ಈಚೆಗೆ ಮತ್ತೊಂದು ಮೌಖಿಕ ಸೂಚನೆಯನ್ನು ನೀಡಲಾಗಿದ್ದು, ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆ ಪ್ರಾರಂಭಿಸುವುದನ್ನು ತಾತ್ಕಾಲಿಕ ತಡೆ ಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.

ಅನುದಾನ ಬರದಿದ್ದರೂ ವಿಶ್ವವಿದ್ಯಾಲಯಕ್ಕೆ ಬೂನಾದಿ ಹಾಕುವ ಕಾರ್ಯ ಆರಂಭಿಸಿದ್ದ ವಿಶೇಷಾಧಿಕಾರಿ ಡಾ.ಜಿ. ಕೊಟ್ರೇಶ್ವರ ಅವರು ಕಾರ್ಯಸ್ಥಗಿತಗೊಳಿಸಿ ಬೆಂಗಳೂರಿಗೆ ಧಾವಿಸಿದ್ದಾರೆ. ಅನುದಾನದ ಬೇಡಿಕೆಗೆ ಸಂಬಂಧಿಸಿದ ಕಡತಗಳನ್ನು ಹಿಡಿದು ಉನ್ನತ ಅಧಿಕಾರಿಗಳನ್ನು ಹಾಗೂ ಸಚಿವರನ್ನು ಭೇಟಿ ಮಾಡುತ್ತಿದ್ದಾರೆ.

‘ಕೋವಿಡ್‌ ಕಾರಣದಿಂದ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಯಾವುದೇ ಕಡತಗಳು ವಿಲೇವಾರಿ ಆಗುತ್ತಿಲ್ಲ. ಮೌಖಿಕವಾಗಿ ಸ್ಪಂದನೆ ಸಿಕ್ಕಿದೆಯಾದರೂ ಅನುದಾನ ಬಿಡುಗಡೆ ಮಾಡಿಲ್ಲ. ರಾಯಚೂರು ಜಿಲ್ಲೆಯ ಸಂಸದರಾದ ರಾಜಾ ಅಮರೇಶ್ವರ ನಾಯಕ, ಅಶೋಕ ಗಸ್ತಿ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೂ ಕೆಲಸ ಕೈಗೂಡುತ್ತಿಲ್ಲ. ಆದಷ್ಟು ಬೇಗನೆ ಬೇಡಿಕೆ ಈಡೇರುವ ನಿರೀಕ್ಷೆ ಇದೆ’ ಎಂದು ಡಾ.ಜಿ.ಕೋಟ್ರೇಶ್ವರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಜೂನ್‌ನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಕಳುಹಿಸಿದ್ದ ಪತ್ರ ಆಧರಿಸಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕಾಲೇಜು ಶಿಕ್ಷಣ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವ ಕಾರ್ಯವನ್ನು ವಿಶೇಷಾಧಿಕಾರಿ ಆರಂಭಿಸಿದ್ದರು. ಇದಕ್ಕಾಗಿ, ಎರಡು ಜಿಲ್ಲೆಗಳ ಸ್ನಾತಕೋತ್ತರ ಕೇಂದ್ರಗಳು ಹಾಗೂ ಕಾಲೇಜುಗಳ ಪ್ರಾಂಶುಪಾಲರಿಗೆ ಜೂನ್‌ 20 ರಂದು ಪತ್ರ ಬರೆದಿದ್ದರು.

‘ರಾಯಚೂರು ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಮೊದಲಿನಿಂದಲೂ ಅಸಡ್ಡೆ ಎದ್ದು ಕಾಣುತ್ತಾ ಬಂದಿದೆ. ಜಿಲ್ಲೆಯ ಜನಪ್ರತಿನಿಧಿಗಳು ಇಂತಹ ವಿಷಯಗಳ ಹಿಂದೆಬಿದ್ದು ಕೆಲಸ ಮಾಡಿಸುವುದಿಲ್ಲ ಎನ್ನುವುದು ವಿಷಾದದ ಸಂಗತಿ. ಜಿಲ್ಲೆಯ ಶೈಕ್ಷಣಿಕ ಸ್ವರೂಪವನ್ನು ಬದಲಿಸುವ ಶಕ್ತಿ ಇರುವ ವಿಶ್ವವಿದ್ಯಾಲಯವನ್ನು ಮಾದರಿ ರೂಪದಲ್ಲಿ ಸ್ಥಾಪಿಸಬೇಕು ಎನ್ನುವ ಎನ್ನುವ ಕಾಳಜಿ, ಶಾಸಕರಲ್ಲಿ ಇಲ್ಲ. ರಾಯಚೂರು ವಿಶ್ವವಿದ್ಯಾಲಯಕ್ಕೆ ವಿಶೇಷಾಧಿಕಾರಿಗಳನ್ನು ನೇಮಕಗೊಳಿಸಿ, ಅಲೆದಾಡಿಸುವ ಕೆಲಸ ಮಾಡಿಸುತ್ತಿದೆ. ಸ್ಥಾನಕ್ಕೆ ತಕ್ಕಂತಹ ಗೌರವ ಅವರಿಗೂ ಸಿಗುತ್ತಿಲ್ಲ. ಕಡತಗಳನ್ನು ಹಿಡಿದು ಬೆಂಗಳೂರಿನಲ್ಲಿ ಕುಳಿತುಕೊಳ್ಳುವ ಅನಿವಾರ್ಯತೆ ಇದೆ’ ಎಂದು ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್‌ ಉಸ್ತಾದ್‌ ಬೇಸರ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು