ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಆವರಣದಲ್ಲಿ ಹಸಿರಿನ ಕಲರವ

ಶಾಲಾ ಕಟ್ಟಡದ ಮೇಲೆ ರೈಲು ಬೋಗಿಗಳ ಚುಕುಬುಕು ಚಿತ್ರದಿಂದ ಹೆಚ್ಚಿದ ಮಕ್ಕಳ ಆಸಕ್ತಿ 
Last Updated 26 ಜನವರಿ 2019, 19:45 IST
ಅಕ್ಷರ ಗಾತ್ರ

ಸಿಂಧನೂರು: ಶಿಕ್ಷಕರಾಗಿ ಪ್ರಮಾಣಿಕವಾಗಿ ಸೇವೆ ಸಲ್ಲಿಸಿದ್ದರೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆಯಬಹುದು. ಆದರೆ, ಮುಂಬರುವ ಮಕ್ಕಳಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಶಾಲಾ ಪರಿಸರವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡುವ ಮೂಲಕ ಆರ್‌.ಎಚ್‌. ಕ್ಯಾಂಪ್‌ 5 ರ ಶಾಲೆಯು ಗಮನ ಸೆಳೆಯುತ್ತಿದೆ.

1971 ರಲ್ಲಿ ಬಾಂಗ್ಲಾದೇಶ ವಿಮೋಚನೆಯ ನಂತರ ನಿರಾಶ್ರಿತರಾದ ಜನರಿಗೆ ಕೇಂದ್ರ ಸರ್ಕಾರ ತಾಲ್ಲೂಕಿನಲ್ಲಿ ಐದು ಕ್ಯಾಂಪುಗಳನ್ನು ಮಾಡಿಕೊಡಲಾಗಿದೆ. ಎಲ್ಲರಿಗೂ ತಲಾ ನಾಲ್ಕು ಎಕರೆ ಜಮೀನು ನೀಡಿ ನೆಲೆ ಒದಗಿಸಲಾಗಿದೆ. ಅದರಲ್ಲಿ ಪುನರ್ವಸತಿ ಕ್ಯಾಂಪ್ ನಂ.5 ಒಂದಾಗಿದೆ. ಈ ಶಾಲೆಯಲ್ಲಿ 1 ರಿಂದ 8ನೇ ತರಗತಿಯವರೆಗೆ ಶಿಕ್ಷಣ ಇದ್ದು, ಎಂಟು ಕೊಠಡಿಗಳಿವೆ. 255 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಐದು ಜನ ಕಾಯಂ ಶಿಕ್ಷಕರಿದ್ದಾರೆ. ನಾಲ್ಕು ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

1983 ರಲ್ಲಿ ಪ್ರಾರಂಭವಾಗಿರುವ ಈ ಶಾಲೆಯಲ್ಲಿ ಬಂಗಾಲಿ ಮಾತೃ ಭಾಷೆಯನ್ನು ಹೊಂದಿರುವ ವಿದ್ಯಾರ್ಥಿಗಳೆ ಓದುತ್ತಿದ್ದು, ಕನ್ನಡ ಕಲಿಸಲು ಶಿಕ್ಷಕರು ಕಷ್ಟಪಡಬೇಕಾಗಿದೆ. ಆದಾಗ್ಯೂ ಶಿಕ್ಷಕರ ಪ್ರಯತ್ನದಿಂದ ವಿದ್ಯಾರ್ಥಿಗಳು ಕನ್ನಡವನ್ನು ಮಾತೃಭಾಷೆಯ ರೀತಿಯಲ್ಲಿ ಅರಳು ಹುರಿದಂತೆ ಮಾತನಾಡುತ್ತಾರೆ.

ಎಂಟು ಶೌಚಾಲಯಗಳಿದ್ದು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆಯಿದೆ. ಸಮರ್ಪಕ ನೀರಿನ ವ್ಯವಸ್ಥೆ ಇದ್ದು ಶಿಕ್ಷಕರೆ ಪೈಪ್‍ಲೈನ್ ಹಾಕಿ ಸಿಂಟೆಕ್ಸ್ ಅಳವಡಿಸಿದ್ದಾರೆ. ಬಿಸಿಯೂಟ ಮಾಡಿದ ವಿದ್ಯಾರ್ಥಿಗಳಿಗೆ ಕೈ ತೊಳೆಯಲು ನಳದ ವ್ಯವಸ್ಥೆ ಕಲ್ಪಿಸಲಾಗಿದೆ. 250 ಮಕ್ಕಳು ಕುಳಿತುಕೊಳ್ಳಬಹುದಾದಷ್ಟು ಓದಲು ಮತ್ತು ಊಟ ಮಾಡಲು ಬೆಂಚ್‍ಗಳನ್ನು ನಿರ್ಮಿಸಲಾಗಿದೆ. ಹದಿನೈದು ವಿದ್ಯಾರ್ಥಿಗಳು ಏಕಕಾಲಕ್ಕೆ ನಿಂತು ಊಟ ಮಾಡಬಹುದಾದ ಸ್ಟ್ಯಾಂಡಿಂಗ್ ಡೈನಿಂಗ್ ಟೇಬಲ್ ಕೂಡಾ ನಿರ್ಮಿಸಲಾಗಿದೆ.

ಗಿಡಗಳನ್ನು ಮೇಕೆ, ಕುರಿ, ದನ ಕರುಗಳು ಹಾಳು ಮಾಡದಂತೆ ಬಿದಿರಿನ ಬೇಲಿ ಕಟ್ಟಿದ್ದಾರೆ. ಈ ಎಲ್ಲ ಕೆಲಸವನ್ನು ಶಿಕ್ಷಕರು ಕೇವಲ 37 ಸಾವಿರ ಶಾಲಾ ಅನುದಾನ ಪಡೆದು ಮಾಡಿದ್ದಾರೆ. ಶೇ 90 ರಷ್ಟು ಹಣ ಖರ್ಚಾಗಬಹುದಾದ ಕೂಲಿ ಕೆಲಸವನ್ನು ತಾವೇ ನಿರ್ವಹಿಸಿದ್ದಾರೆ. ಸಾರ್ವಜನಿಕರಿಂದ ಯಾವುದೇ ಸ್ವರೂಪದ ದೇಣಿಗೆ ಪಡೆಯದೆ ಶಾಲೆಯ ಅಂದಚಂದವನ್ನು ಹೆಚ್ಚಿಸುವಲ್ಲಿ ಶಿಕ್ಷಕರು ಶ್ರಮಿಸಿದ್ದಾರೆ.

ಅದರಲ್ಲೂ ಶಿಕ್ಷಕ ಬಾಲಪ್ಪ ವಳಕಲದಿನ್ನಿ ಅವರು ಶಾಲೆಯ ಪ್ರತಿಯೊಂದು ಗೋಡೆಯನ್ನು ಚಿತ್ರಗಳಿಂದ ಸೌಂದರ್ಯೀಕರಣಗೊಳಿಸಿದ್ದಾರೆ.

ಸುಂದರ ಆವರಣ:

ಶಾಲೆಯ ಆವರಣ ಗೋಡೆಗೆ ಕಿಂಚಿತ್ತು ಜಾಗ ಬಿಡದ ಹಾಗೆ ಕಲಿಕೆಗೆ ಯೋಗ್ಯವಾದ ಮಗ್ಗಿ, ಗಣಿತ ಸೂತ್ರ, ದೇಶ, ರಾಜ್ಯಗಳ ಮಾಹಿತಿ, ನದಿಗಳ ಮಾಹಿತಿ, ಭಾರತೀಯ ಭಾಷೆಗಳ ಪರಿಚಯ, ಇಂಗ್ಲೀಷ ವ್ಯಾಕರಣ, ಹೀಗೆ ‘ಕಲಿ-ನಲಿ’ ಭೋದನಾ ಪದ್ದತಿಗೆ ಪೂರಕವಾದ ಎಲ್ಲ ಮಾಹಿತಿಗಳನ್ನು ಬರೆಯಲಾಗಿದೆ.

ಶಾಲಾ ಕೊಠಡಿಗಳ ಒಳಾಂಗಣದಲ್ಲಿ ಸರಳ ಪದ, ವಾರ, ತಿಂಗಳು, ಸಾರಿಗೆ ವ್ಯವಸ್ಥೆಯ ಪರಿಚಯ, ನೀರಿನ ಮೂಲಗಳು ಕಾಗುಣಿತಾಕ್ಷರ, ವಿವಿಧ ಪ್ರಾಣಿಗಳ ಮುಖವಾಡಗಳು, ವಾಚಕಗಳ ಬರವಣಿಗೆ ಸೇರಿ ‘ನಲಿ-ಕಲಿ’ ಭೋದನಾ ಪದ್ದತಿಗೆ ಪೂರಕವಾದ ಅಂಶಗಳು ನೋಡುಗರನ್ನು ಆಕರ್ಷಿಸುತ್ತಿವೆ. ಕಿಟಕಿ, ಕಂಬ, ಬಾಗಿಲು, ಗೋಡೆ, ನೆಲದ ಮೇಲೆಯೂ ‘ನಲಿ-ಕಲಿ’ಯ ಸಂಗತಿಗಳನ್ನು ಬರೆದಿರುವುದರಿಂದ ಶಾಲೆಯಲ್ಲಿ ಪ್ರವೇಶಿಸಿದರೆ ಸಾಕು ಜ್ಞಾನ ದೇಗುಲ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಶಾಲೆಯ ಮುಂಭಾಗದಲ್ಲಿ ಸಭಾ ಮಂಟಪ ಕಟ್ಟಿ ಅದಕ್ಕೆ ಬರವಣಿಗೆಯ ತೋರಣ ನಿರ್ಮಿಸಲಾಗಿದೆ. ಶಾಲೆಯ ಮೂರು ಕೊಠಡಿಗಳನ್ನೊಳಗೊಂಡು ಪೇಂಟಿಂಗ್ ಮಾಡಲಾಗಿದ್ದು ರೈಲ್ವೆ ಡಬ್ಬಾ ಮತ್ತು ಇಂಜನ್‍ನಂತೆ ಶಾಲೆಯ ಹೊರಾಂಗಣ ಗೋಚರಿಸುತ್ತದೆ.

ಹಸಿರು ವಾತವರಣ: ಶಾಲಾ ಆವರಣದಲ್ಲಿ ಮರವೊಂದರ ಸುತ್ತ ಅರಳೆಕಟ್ಟೆ ಕಟ್ಟಿ ಸಿಂಗರಿಸಲಾಗಿದೆ. ಈ ಕಟ್ಟೆ ಮಕ್ಕಳ ಊಟ ಮತ್ತು ಅಭ್ಯಾಸಕ್ಕೆ ಅನುಕೂಲವಾಗಿದೆ. ಶಾಲಾ ಕಂಪೌಂಡಿನಲ್ಲಿ ಬೇವು, ಹೊಂಗೆ, ಸೀತಾಫಲ, ಮಾವು, ಪೇರಲ, ಬಾರೆ ಸೇರಿದಂತೆ ವಿವಿಧ ಗಿಡ ಮರಗಳು, ಹೂವಿನ ಗಿಡಗಳು, ಅಶೋಕ ವೃಕ್ಷಗಳು ಬೆಳೆದು ಹಸಿರು ಸೂಸುತ್ತಿದ್ದು, ಒಟ್ಟು 120 ಗಿಡಗಳನ್ನು ಬೆಳೆಸಲಾಗಿದೆ.

ಪ್ರಶಸ್ತಿಯ ಗರಿ: ಶಾಲೆಯ ಬಾಹ್ಯ ಅಂದವನ್ನು ಹೆಚ್ಚಿಸಿರುವ ಶಿಕ್ಷಕರು ಮಕ್ಕಳ ಆಂತರಿಕ ಪ್ರೌಢಿಮೆಯನ್ನು ಸಹ ಹೆಚ್ಚಿಸುವಲ್ಲಿ ಶ್ರಮಿಸುತ್ತಿದ್ದಾರೆ. ವಿಭಾಗ ಮಟ್ಟದ ಕಬಡ್ಡಿಯಲ್ಲಿ ಬಾಲಕಿಯರು ಸ್ಪರ್ಧಿಸಿ ಉತ್ತಮ ಸಾಧನೆ ಮಾಡಲು ಶಿಕ್ಷಕರು ಪ್ರೇರಣೆಯಾಗಿದ್ದಾರೆ. ತಾಲ್ಲೂಕು ಮತ್ತು ಜಿಲ್ಲಾ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಪುನರ್ವಸತಿ ಕ್ಯಾಂಪ್ ನಂ.5ರ ಹಿರಿಮೆಯನ್ನು ಜಿಲ್ಲಾ ಮಟ್ಟದಲ್ಲಿ ಪರಿಚಯಿಸಿದ್ದಾರೆ.

ಶಿಕ್ಷಕ ಬಾಲಪ್ಪ ವಳಕಲದಿನ್ನಿ ಅವರ ವಿಶೇಷ ಪ್ರಯತ್ನದಿಂದ ನಿರ್ಮಾಣಗೊಂಡ ‘ನಲಿ-ಕಲಿ’ ಕೊಠಡಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಪ್ರಶಸ್ತಿ ದೊರಕಿದೆ. ಎನ್‍ಪಿಎಸ್ ನೌಕರರ ಸಂಘದ ಜಿಲ್ಲಾ ಸಮಿತಿಯು ಬಾಲಪ್ಪನವರಿಗೆ ಅತ್ಯುತ್ತಮ ಶಿಕ್ಷಕ ಎನ್ನುವ ಪ್ರಶಸ್ತಿ ನೀಡಿ ಗೌರವಿಸಿದೆ. ಸಂಕೇತ ಎಜ್ಯುಕೇಶನ್ ಟ್ರಸ್ಟ್ ಸಮಿತಿಯು ಮುಖ್ಯಶಿಕ್ಷಕ ರಾಜಕುಮಾರ ಮತ್ತು ಶಿವಮೂರ್ತಿಯವರಿಗೆ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿದೆ.

‘ಶಾಲೆಯ ಶಿಕ್ಷಕರಾದ ಆಲ ನಾಯಕ, ಕೆ.ಪಂಕಜ, ಶಿವಮೂರ್ತಿ, ವಿನುತಾ, ನಾಗರಾಜ, ವೆಂಕಟೇಶ ಅಲಬನೂರು ಅವರು ಶಾಲೆಯಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕೈಗೊಳ್ಳುವ ಎಲ್ಲ ಕಾರ್ಯಕ್ರಮಗಳಿಗೆ ಸಹಕರಿಸುತ್ತಿರುವುದರಿಂದ ಶಾಲೆಯ ಸೌಂದರ್ಯ ಮತ್ತು ಮಕ್ಕಳ ಪ್ರಗತಿಯನ್ನು ಕಂಡುಕೊಳ್ಳಲು ಸಾಧ್ಯವಾಗಿದೆ’ ಎನ್ನುತ್ತಾರೆ ಎಸ್‍ಡಿಎಂಸಿ ಅಧ್ಯಕ್ಷ ಪ್ರಹ್ಲಾದ ಬಿಸ್ವಾಸ್ ಮತ್ತು ಮುಖ್ಯಶಿಕ್ಷಕ ರಾಜಕುಮಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT