ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್‌ಫಾರಂ ದಾಟಲು ಅಂಗವಿಕಲರ ಪರದಾಟ

ಎಸ್ಕ್‌ಲೇಟರ್‌, ರ‍್ಯಾಂಪ್‌, ಲಿಫ್ಟ್‌ ಅಳವಡಿಸುವುದಕ್ಕೆ ರೈಲ್ವೆ ಅಧಿಕಾರಿಗಳ ನಿರ್ಲಕ್ಷ್ಯ
Last Updated 19 ಅಕ್ಟೋಬರ್ 2021, 20:45 IST
ಅಕ್ಷರ ಗಾತ್ರ

ರಾಯಚೂರು: ನಗರದ ರೈಲ್ವೆ ನಿಲ್ದಾಣದಲ್ಲಿ ಅಂಗವಿಕಲರು ಒಂದನೇ ಪ್ಲಾಟ್‌ಫಾರಂನಿಂದ ಎರಡನೇ ಪ್ಲಾಟ್‌ಫಾರಂಗೆ ತಲುಪುವುದಕ್ಕೆ ಹರಸಾಹಸ ಪಡುತ್ತಿದ್ದಾರೆ.

ಉರುಗೋಲು ಅವಲಂಬಿಸಿದವರಿಗೆ, ತೆವಳಿಕೊಂಡು ಹೋಗುವವರಿಗೆ, ಕೈಯಲ್ಲಿ ಹ್ಯಾಂಡಲ್‌ ಆಧಾರದ ಉರುಗೋಲು ಇಟ್ಟು ಮುಂದೆ ಹೋಗುವವರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ರೈಲ್ವೆ ಸಮಯಕ್ಕೆ ಒಂದು ಗಂಟೆ ಮೊದಲೇ ರೈಲ್ವೆ ನಿಲ್ದಾಣಕ್ಕೆ ಬರಬೇಕು. ಪ್ಲಾಟ್‌ಫಾರಂ ಮುಕ್ತಾಯಗೊಳ್ಳುವ ಹಂತಕ್ಕೆ ಸಂಚರಿಸಿ ಅಲ್ಲಿಂದ ಇನ್ನೊಂದು ಪ್ಲಾಟ್‌ಫಾರಂ ಸೇರಿಕೊಳ್ಳುವ ಅನಿವಾರ್ಯತೆ ಇದೆ. ಅಂಗವಿಕಲರ ನೆರವಿಗೆ ಇನ್ನೊಬ್ಬರು ಬೇಕೇಬೇಕು ಎನ್ನುವ ಸ್ಥಿತಿ ಇದೆ.

ಕನಿಷ್ಠಪಕ್ಷ ಸಮರ್ಪಕವಾದ ರ‍್ಯಾಂಪ್‌ ನಿರ್ಮಾಣಕ್ಕೂ ಅಧಿಕಾರಿಗಳು ಮುಂದಾಗುತ್ತಿಲ್ಲ. ಕೇಂದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಿದ್ದಾಗ ರಾಯಚೂರು ರೈಲ್ವೆ ನಿಲ್ದಾಣಕ್ಕೆ ಎಸ್ಕಲೇಟರ್‌, ಲಿಫ್ಟ್‌ ಅಳವಡಿಸುವುದಕ್ಕೆ ಮಂಜೂರಾತಿ ನೀಡಿದ್ದರು. ಹಲವು ವರ್ಷಗಳು ಉರುಳಿದರೂ ಸೌಲಭ್ಯಗಳನ್ನು ಮಾಡಿಕೊಡುವುದಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ಅಂಗವಿಕಲರು ಅನುಭವಿಸುತ್ತಿರುವ ಸಂಕಷ್ಟ ಕೊನೆಯಾಗುತ್ತಿಲ್ಲ.

ಘೋಷಿತ ಯೋಜನೆಗಳನ್ನು ಶೀಘ್ರದಲ್ಲೆ ಮಾಡಿಕೊಡುವ ಬಗ್ಗೆ ರೈಲ್ವೆ ಅಧಿಕಾರಿಗಳು ಮೇಲಿಂದ ಮೇಲೆ ಭರವಸೆಗಳನ್ನು ನೀಡಿ, ಪ್ರಚಾರ ಪಡೆಯುವುದು ಹಾಗೇ ಮುಂದುವರಿದಿದೆ. ವಾಸ್ತವದಲ್ಲಿ ಗುಂತಕಲ್‌ ರೈಲ್ವೆ ವಿಭಾಗದ ಅಧಿಕಾರಿಗಳು ಕಾರ್ಯೋನ್ಮುಖರಾಗಿ ಅಂಗವಿಕಲರು, ವಯೋವೃದ್ಧರಿಗೆ ಅನುಕೂಲ ಮಾಡಿಕೊಡುತ್ತಿಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯವನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಅನೇಕ ಬಾರಿ ಪ್ರತಿಭಟನೆಗಳನ್ನು ನಡೆಸಿ ಮನವಿ ಸಲ್ಲಿಸಿವೆ. ಆದರೆ, ಕಾರ್ಯಾನುಷ್ಠಾನ ಮಾತ್ರ ಶೂನ್ಯವಾಗಿದೆ.

ಸಾಮಾಜಿಕ ತಾಲತಾಣದಲ್ಲಿ ದೂರು: ನಗರದ ಶಾಂತಿಕಾಲೋನಿ ನಿವಾಸಿ ಅಂಗವಿಕಲರಾದ 15 ವರ್ಷದ ತನ್ಮಯ ಎ.ಮೂತಾ ಅವರು ಮಂಗಳವಾರ ರಾಯಚೂರಿನಿಂದ ಸಿಕಂದರಾಬಾದ್‌ಗೆ ಸಂಚರಿಸುವುದಕ್ಕಾಗಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಎರಡನೇ ಪ್ಲಾಟ್‌ಫಾರಂನಲ್ಲಿ ರೈಲ್ವೆ ನಿಲುಗಡೆಯಾಗಿತ್ತು. ಆಗ ಒಂದನೇ ಪ್ಲಾಟ್‌ಫಾರಂನಿಂದ ಹೋಗುವುದಕ್ಕೆ ಅವರು ತುಂಬಾ ತೊಂದರೆ ಅನುಭವಿಸಿದರು. ಈ ಅನಾನುಕೂಲದ ಬಗ್ಗೆ ತನ್ಮಯ ಸಂಬಂಧಿ ವಿನಯಕುಮಾರ್‌ ಮೂತಾ ಅವರು ರೈಲ್ವೆ ನಿಲ್ದಾಣದ ಅಧಿಕಾರಿಗಳಿಗೆ ಲಿಖಿತ ದೂರೊಂದನ್ನು ಸಲ್ಲಿಸಿದ್ದಾರೆ.

ಜೈನ್‌ ಸಮಾಜದ ಮುಖಂಡ ಕಮಲಕುಮಾರ್‌ ಅವರು ಅಂಗವಿಕಲರು ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಅನುಭವಿಸುತ್ತಿರುವ ತೊಂದರೆ ಕುರಿತು ಚಿತ್ರಗಳ ಸಹಿತ ಸಾಮಾಜಿಕ ತಾಲತಾಣ (ಟ್ವಿಟರ್‌) ಮೂಲಕ ಪ್ರಧಾನಮಂತ್ರಿ ಕಚೇರಿ, ರೈಲ್ವೆ ಸಚಿವರಿಗೆ ಹಾಗೂ ರೈಲ್ವೆ ಅಧಿಕಾರಿಗಳಿಗೆ ದೂರು ಬರೆದು ಟ್ಯಾಗ್‌ ಮಾಡಿರುವುದು ಈಗ ವೈರಲ್‌ ಆಗಿದೆ.

ಕೂಡಲೇ ಎಚ್ಚೆತ್ತುಕೊಂಡಿರುವ ಸಿಕಂದರಾಬಾದ್‌ ರೈಲ್ವೆ ಅಧಿಕಾರಿಗಳು, ಅಂಗವಿಕಲರು ಅನುಭವಿಸುತ್ತಿರುವ ತೊಂದರೆ ಗಮನಕ್ಕೆ ಬಂದಿದೆ. ಕೂಡಲೇ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT