ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ‍ಪಾಲಕರಲ್ಲಿ ಆತಂಕ ಮೂಡಿಸಿದ ಚಿಣ್ಣರ ನೆಗಡಿ, ಜ್ವರ

ಶಾಲೆಗಳಲ್ಲಿ ಕಡಿಮೆಯಾಗುತ್ತಿದೆ ಮಕ್ಕಳ ಹಾಜರಾತಿ
Last Updated 30 ಜನವರಿ 2022, 19:31 IST
ಅಕ್ಷರ ಗಾತ್ರ

ರಾಯಚೂರು: ಮಕ್ಕಳನ್ನು ಆವರಿಸಿಕೊಳ್ಳುತ್ತಿರುವ ಜ್ವರ, ನೆಗಡಿ ಹಾಗೂ ಕೆಮ್ಮು ಬಾಧೆಗಳು ಪಾಲಕರನ್ನು ಆತಂಕಕ್ಕೀಡು ಮಾಡಿವೆ. ಇಂತಹ ಸಣ್ಣ ಪ್ರಮಾಣದ ಅನಾರೋಗ್ಯದಿಂದ ಬಳಲುವ ಮಕ್ಕಳ ಸಂಖ್ಯೆಯು ಅಧಿಕವಾಗುತ್ತಿರುವುದರಿಂದ ಶಾಲೆಗಳಲ್ಲಿ ಹಾಜರಾತಿಯು ಕುಸಿಯುತ್ತಿದೆ.

ಮಕ್ಕಳ ತಜ್ಞರ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಬರುತ್ತಿರುವ ಮಕ್ಕಳ ಸಂಖ್ಯೆ ಹಿಂದೆಂದಿಗಿಂತಲೂ ಅಧಿಕವಾಗುತ್ತಿದೆ. ಮಕ್ಕಳಲ್ಲಿ ದಿಢೀರ್‌ ಕಾಣಿಸಿಕೊಳ್ಳುತ್ತಿರುವ ಈ ರೀತಿಯ ಅನಾರೋಗ್ಯವನ್ನು ನೋಡಿ ಪಾಲಕರು ಚಿಂತೆಗೆ ಬಿದ್ದಿದ್ದಾರೆ. ಮನೆಮದ್ದು ಹಾಗೂ ಔಷಧಿ ಅಂಗಡಿಗಳ ಮೊರೆಹೋಗುವುದು ಸಾಮಾನ್ಯವಾಗಿ ಕಂಡುಬರುತ್ತಿದೆ.

ಮನೆಯಲ್ಲಿ ಒಬ್ಬರಿಗೆ ಕಾಣಿಸಿಕೊಂಡ ಜ್ವರ, ಶೀತ ಹಾಗೂ ಕೆಮ್ಮು ಎಲ್ಲರಿಗೂ ಆವರಿಸಿಕೊಳ್ಳುತ್ತಿದೆ. ಬಹಳಷ್ಟು ಪಾಲಕರು ಮಕ್ಕಳೊಂದಿಗೆ ಆಸ್ಪತ್ರೆಗಳಿಗೆ ಧಾವಿಸುತ್ತಿದ್ದಾರೆ. ವೈದ್ಯರ ಸಲಹೆ ಆಧರಿಸಿ ಔಷಧೋಪಚಾರ ಮುಂದುವರಿಸಿದ್ದಾರೆ.

’ವಾತಾವರಣವು ಕ್ಷಿಪ್ರವಾಗಿ ಬದಲಾವಣೆ ಆಗುತ್ತಿರುವುದರಿಂದ ಮಕ್ಕಳು ಸೇರಿದಂತೆ ಜನರಿಗೆ ಶೀತ, ಜ್ವರ ಹಾಗೂ ಕೆಮ್ಮಿನ ಸಮಸ್ಯೆ ವ್ಯಾಪಕವಾಗಿದೆ. ಇದಕ್ಕೆ ಆತಂಕಪಡುವ ಅಗತ್ಯವಿಲ್ಲ. ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿದರೆ, ಔಷಧಿಗಳನ್ನು ಕೊಡುತ್ತಾರೆ‘ ಎನ್ನುವುದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಕೃಷ್ಣ ಅವರು ಹೇಳುವ ಸಲಹೆಯಾಗಿದೆ.

ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಸೇರಿ ಯಾವುದೇ ಶಾಲೆಗಳಲ್ಲಿ ವಿಚಾರಿಸಿದರೂ, ಅನಾರೋಗ್ಯ ಕಾರಣದಿಂದ ಮಕ್ಕಳು ಗೈರುಹಾಜರಿ ಆಗುತ್ತಿದ್ದಾರೆ. ಒಂದು ವೇಳೆ, ಶೀತ, ಜ್ವರದಿಂದ ಬಳಲುವ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲೇ ಉಳಿಯುವಂತೆ ಶಿಕ್ಷಕರು ಸಲಹೆ ನೀಡುತ್ತಿದ್ದಾರೆ.

ನಿರೀಕ್ಷೆ ಮೀರಿದ ಪ್ರಕರಣಗಳು ವರದಿ
ಲಿಂಗಸುಗೂರು:
ಪ್ರತಿವರ್ಷ ಡಿಸೆಂಬರ್, ಜನವರಿ ತಿಂಗಳು ಆರೋಗ್ಯದ ತಿಂಗಳು ಎಂದು ಹೇಳಲಾಗುತ್ತಿತ್ತು. ಆದರೆ, ಈ ಬಾರಿ ಶೀತ, ಕೆಮ್ಮು, ಜ್ವರ ವೈರಸ್‍ ಪ್ರಕರಣಗಳು ನಿರೀಕ್ಷೆಗೂ ಮೀರಿ ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಂಡಿವೆ.

ಸಾಮಾನ್ಯವಾಗಿ ಈ ಎರಡು ತಿಂಗಳು ಶೀತ, ಕೆಮ್ಮು, ಜ್ವರ ಪ್ರಕರಣಗಳು ಅತಿ ವಿರಳ. ಈ ಬಾರಿ ಸಾಮಾನ್ಯಕ್ಕಿಂತ ಶೇ 40ರಷ್ಟು ಮಕ್ಕಳಲ್ಲಿ ಹೆಚ್ಚಾಗಿ ಕಾಯಿಲೆ ಕಾಣಿಸಿಕೊಂಡಿದೆ. ಕೋವಿಡ್‍ ಸೋಂಕು ಸಂದರ್ಭ ಅವಲೋಕನ ಮಾಡಿದಲ್ಲಿ ಅಂತಹ ಅಪಾಯಕಾರಿ ಯಾವುದೇ ಲಕ್ಷಣಗಳು ಕಂಡಿಲ್ಲ. ಎಲ್ಲ ಮಕ್ಕಳು ತ್ವರಿತವಾಗಿ ಗುಣಮುಖರಾಗುತ್ತಿದ್ದಾರೆ.

‘ಸರ್ಕಾರಿ ಆಸ್ಪತ್ರೆ ಸೇರಿದಂತೆ ಸ್ಥಳೀಯ ಖಾಸಗಿ ಆಸ್ಪತ್ರೆಗಳಲ್ಲಿ ಒಳ ರೋಗಿಗಳಾಗಿ ದಾಖಲಿಸಿ ಚಿಕಿತ್ಸೆ ಕೊಡಿಸಲು ಪರದಾಡುತ್ತಿದ್ದ ಸ್ಥಿತಿ ನಿರ್ಮಾಣಗೊಂಡಿತ್ತು. ಕೆಲ ದಿನಗಳಿಂದ ಮಕ್ಕಳಲ್ಲಿ ಶೀತ, ಕೆಮ್ಮು, ಜ್ವರ ಕಾಣಿಸಿಕೊಳ್ಳುವ ಪ್ರಕರಣಗಳು ಕಡಿಮೆ ಆಗಿವೆ. ಆದರೆ, ವಯಸ್ಕರಲ್ಲಿ ಅತಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ’ ಎಂದು ಮಕ್ಕಳ ತಜ್ಞ ಡಾ. ಎಸ್‍.ಎಸ್‍ ಕಿರ್ದಿ ಹೇಳುತ್ತಾರೆ.

ಆತಂಕ ಪಡಬೇಕಿಲ್ಲ
ದೇವದುರ್ಗ:
ಕಳೆದ ವಾರದಿಂದ ವಾತಾವರಣದಲ್ಲಿ ಆದ ಬದಲಾವಣೆಯಿಂದಾಗಿ 6 ವರ್ಷದ ಒಳಗಿನ ಮಕ್ಕಳಲ್ಲಿ ಕೆಮ್ಮು, ಜ್ವರ, ಶೀತ ಮುಂತಾದ ಲಕ್ಷಣಗಳು ಕಂಡು ಬರುತ್ತಿವೆ. ಪಾಲಕರು ಆತಂಕಪಡುವ ಅಗತ್ಯವಿಲ್ಲ. ಈ ಲಕ್ಷಣಗಳು ಮಕ್ಕಳ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರದೆ ಕೇವಲ ಎರಡು ಮೂರು ದಿನ ಜ್ವರ ಮಾತ್ರವಿರುತ್ತದೆ.

ನಿರ್ಲಕ್ಷ್ಯವಹಿಸದೆ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು. ಮಕ್ಕಳಿಗಾಗಿ ಆಸ್ಪತ್ರೆಗಳಲ್ಲಿ ಮೀಸಲಿಟ್ಟಿರುವ ಬೆಡ್ ಗಳು ಬಹುತೇಕ ಖಾಲಿ ಇವೆ. ಖಾಸಗಿ ಆಸ್ಪತ್ರೆಗಳು ಸೇರಿದಂತೆ ತಾಲ್ಲೂಕಿನಾದ್ಯಂತ ಮೂರನೇ ಅಲೆ ಪರಿಣಾಮ ಮಕ್ಕಳ ಮೇಲೆ ಬೀರಿಲ್ಲ ಎನ್ನುವುದು ವೈದ್ಯರ ಅಭಿಪ್ರಾಯವಾಗಿದೆ.

ಶಾಲೆಗೆ ಕಳಿಸಲು ಮಕ್ಕಳಿಗೆ ಒತ್ತಾಯ ಬೇಡ
’ಸಾಮಾನ್ಯವಾಗಿ ಡಿಸೆಂಬರ್‌, ಜನವರಿ ಮಕ್ಕಳಿಗೆ ಆರೋಗ್ಯಕರ ತಿಂಗಳುಗಳು ಎಂದು ಹೇಳಲಾಗುತ್ತಿತ್ತು. ಆದರೆ, ಈ ವರ್ಷ ಮಕ್ಕಳಲ್ಲಿ ವೈರಾಣು ಜ್ವರ ಸಮಸ್ಯೆ ವಿಪರೀತವಾಗಿದೆ. ಸಾಮಾನ್ಯ ದಿನಕ್ಕಿಂತಲೂ ದುಪ್ಪಟ್ಟು ಮಕ್ಕಳು ಈಗ ಆಸ್ಪತ್ರೆಗೆ ಬರುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಸ್ವಲ್ಪ ಕಡಿಮೆಯಾಗುತ್ತಿದೆ. ಜ್ವರದ ಸಮಸ್ಯೆ ಹೆಚ್ಚಾಗುತ್ತಿರುವುದಕ್ಕೆ ಹಲವಾರು ಕಾರಣಗಳಿವೆ‘ ಎನ್ನುವುದು ರಾಯಚೂರಿನ ಮಕ್ಕಳ ತಜ್ಞ ಡಾ.ಆರ್‌.ರಾಘವೇಂದ್ರ ಅವರ ವಿವರಣೆ.

’ಮಕ್ಕಳಿಗೆ ಸಣ್ಣ ಅನಾರೋಗ್ಯದ ಸಮಸ್ಯೆ ಇದ್ದರೂ ಪಾಲಕರು ಶಾಲೆಗೆ ಕಳುಹಿಸುತ್ತಿದ್ದಾರೆ. ಈ ವಿಷಯದಲ್ಲಿ ವೈದ್ಯರ ಸಲಹೆ ನಿರ್ಲಕ್ಷಿಸಿ ಮಕ್ಕಳನ್ನು ಒತ್ತಾಯದಿಂದ ಶಾಲೆಗೆ ಕಳುಹಿಸಬಾರದು. ಇಂಥ ಮಕ್ಕಳು ಶಾಲೆಗೆ ಹೋಗುವುದರಿಂದ ಬೇರೆ ಮಕ್ಕಳಿಗೆ ಹರಡಿಕೊಳ್ಳುತ್ತದೆ‘ ಎನ್ನುತ್ತಾರೆ ಅವರು.

’ಮಕ್ಕಳಿಗೆ ಕಾಲಕಾಲಕ್ಕೆ ಕೊಡುತ್ತಿದ್ದ ಲಸಿಕೆಗಳು ಕಳೆದ ಎರಡು ವರ್ಷಗಳಿಂದ ತಪ್ಪಿವೆ. ಮಕ್ಕಳಿಗೆ ಅನಾರೋಗ್ಯ ಕಾಣಿಸಿಕೊಳ್ಳುತ್ತಿರುವುದಕ್ಕೆ ಇದು ಕೂಡಾ ಕಾರಣ. ಅಂಗನವಾಡಿ ಅಥವಾ ಸರ್ಕಾರಿ ಆಸ್ಪತ್ರೆಗೆ ಹೋದರೆ ಸೂಕ್ತ ಚುಚ್ಚುಮದ್ದು, ಲಸಿಕೆ ಕೊಡುತ್ತಾರೆ. ಇದರಿಂದ ಮುಂಬರುವ ರೋಗಗಳನ್ನು ತಡೆಗಟ್ಟಬಹುದು‘ ಎಂದರು.

‘ಆಸ್ಪತ್ರೆಯಲ್ಲಿ ಔಷಧಿಗಳಿವೆ’
’ಅನಾರೋಗ್ಯದಿಂದ ಬಳಲುವ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದರೆ ಸೂಕ್ತ ಔಷಧಿ ಕೊಡುತ್ತೇವೆ. ಶೀತ, ಜ್ವರ ಹಾಗೂ ಕೆಮ್ಮಿನ ಸಮಸ್ಯೆಗೆ ಪ್ಯಾರಾಸೆಟಿಮಲ್‌, ಅಜಿತ್ರೊಮಸಿ, ಅಮಾಕ್ಸೊಸಿಲಿನ್‌, ಸಿಟ್ರೊಜಿನ್‌ ಸಿರಿಪ್‌ ಇಂಥ ಔಷಧಿಗಳನ್ನು ಕೊಡುತ್ತೇವೆ‘ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ತಿಳಿಸಿದರು.

’ಮನೆಯಲ್ಲಿ ಒಂದು ಮಗುವಿಗೆ ಇಂಥ ಸಮಸ್ಯೆ ಬಂದರೆ, ಸಹಜವಾಗಿ ಬೇರೆ ಮಕ್ಕಳಿಗೂ ಈ ಸಮಸ್ಯೆ ಹರಡಿಕೊಳ್ಳುತ್ತದೆ. ಸಮಸ್ಯೆ ವಿಪರೀತವಾಗಿದ್ದರೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡುತ್ತೇವೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT