ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಜೀವ ಉಳಿಸಿಕೊಳ್ಳಲು ಅಶುದ್ಧ ನೀರೇ ಗತಿ

ಬಾಗಿಲು ಮುಚ್ಚಿದ ಶುದ್ಧ ನೀರಿನ ಘಟಕಗಳು
Published 15 ಏಪ್ರಿಲ್ 2024, 4:47 IST
Last Updated 15 ಏಪ್ರಿಲ್ 2024, 4:47 IST
ಅಕ್ಷರ ಗಾತ್ರ

ರಾಯಚೂರು: ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕ ಇರುವವರೆಗೂ ಗ್ರಾಮಗಳಲ್ಲಿ ಯಾವುದೇ ಆತಂಕ ಇರಲಿಲ್ಲ. ನಿರ್ವಹಣೆಯ ನಿರ್ಲಕ್ಷ್ಯ ಹಾಗೂ ತಾಂತ್ರಿಕ ಸಮಸ್ಯೆಯಿಂದ ಸ್ಘಗಿತಗೊಂಡ ನಂತರ ಜನ ಬೆಂಕಿ ಬಿಸಿಲಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

ಒಂದಲ್ಲ, ಎರಡಲ್ಲ ಜಿಲ್ಲೆಯ 137 ಗ್ರಾಮಗಳ ಜನ ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಸೈಕಲ್‌, ಬೈಕ್‌, ಕೈಗಾಡಿಗಳ ಮೇಲೆ ಕೊಡಗಳನ್ನು ಇಟ್ಟುಕೊಂಡು ಶುದ್ಧ ನೀರಿಗಾಗಿ ಅಲೆದಾಡ ತೊಡಗಿದ್ದಾರೆ. ಕಂದಾಯ ಸಚಿವರು ಫೆಬ್ರುವರಿ ತಿಂಗಳಲ್ಲೇ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.

ಅಧಿಕಾರಿಗಳು ಶುದ್ಧ, ಅಶುದ್ಧ ನೀರು ಹೀಗೆ ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ನೀರು ಒದಗಿಸುವ ಕಾರ್ಯಕ್ಕೆ ಮಾತ್ರ ಮಹತ್ವ ನೀಡಿದ್ದಾರೆ. ಗ್ರಾಮಗಳ ಜನರು ಮಾತ್ರ ಶುದ್ಧ ಕುಡಿಯುವ ನೀರಿಗಾಗಿ ಅಲೆದಾಡುವುದು ತಪ್ಪಿಲ್ಲ.

ಶುದ್ಧ ನೀರಿಗಾಗಿ ವಿವಿಧೆಡೆ ಅಲೆದಾಟ

ಸುತ್ತಲಿನ ಗ್ರಾಮೀಣ ಪ್ರದೇಶದ ಜನರ ನೀರಿನ ದಾಹ ತೀರಿಸಬೇಕಾದ ಶುದ್ಧ ಕುಡಿಯುವ ನೀರಿನ ಘಟಕಗಳು ಅನೇಕ ವರ್ಷಗಳಿಂದ ದುರಸ್ತಿ ಕಾಣದೆ ಜನರು ಶುದ್ಧ ನೀರಿಗಾಗಿ ಪರದಾಡಬೇಕಾಗಿದೆ.

ಮುದಗಲ್ ಹೋಬಳಿಯ ರಾಮತನಾಳ, ಕನ್ನಾಪುರ ಹಟ್ಟಿ, ಆಶಿಹಾಳ ತಾಂಡಾ ಸೇರಿದಂತೆ 20 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್ ಆಗಿವೆ. ಯಂತ್ರಗಳು ದುರಸ್ತಿ ಕಂಡಿಲ್ಲ. ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಉಪ ವಿಭಾಗದಿಂದ ನಿರ್ಮಿಸಿದ ಲಕ್ಷಾಂತರ ರೂಪಾಯಿ ಮೊತ್ತದ ಯಂತ್ರೋಪಕರಣಗಳು ದೂಳು ಹಿಡಿದಿವೆ.

ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರುತ್ತಿದೆ. ಶುದ್ಧ ಜೀವ ಜಲಕ್ಕೆ ಪರಿತಪ್ಪಿಸುವಂತಾಗಿದೆ. ಅಧಿಕಾರಿಗಳು ನೀರಿನ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಗ್ರಾಮಸ್ಥರು ಶುದ್ಧ ಕುಡಿಯುವ ನೀರು ಪೂರೈಸುವಂತೆ ಜನರು ಜನಪ್ರತಿನಿಧಿಗಳ ಬಳಿ ಅಂಗಲಾಚುವುದು ಸಾಮಾನ್ಯವಾಗಿದೆ.

ರಾಮತನಾಳ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಚುನಾಯಿತ ಜನಪ್ರತಿನಿಧಿಗಳ ಹಾಗೂ ಹೂನೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎರಡು ವರ್ಷಗಳಿಂದ ಘಟಕ ದುರಸ್ತಿ ಕಾಣದೆ ಹಾಳು ಬೀಳುವ ಹಂತಕ್ಕೆ ತಲುಪಿದೆ.
ಕನ್ನಾಪುರಹಟ್ಟಿ ಗ್ರಾಮದಲ್ಲಿ ಸರಿಯಾಗಿ ನಿರ್ವಹಣೆ ಇಲ್ಲದೆ ಶುದ್ಧ ಕುಡಿಯುವ ನೀರಿನ ಘಟಕದ ಯಂತ್ರಗಳು ತುಕ್ಕು ಹಿಡಿದು ಹೋಗಿವೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಸಿಗದ ಹಿನ್ನಲೆ ಜನರು ಫ್ಲೋರೈಡ್ ಯುಕ್ತ ನೀರು ಸೇವಿಸಿ, ಅನೇಕ ರೋಗಗಳಿಗೆ ತುತ್ತಾಬೇಕಾಗಿದೆ.

ರಾಗಲಪರ್ವಿ ಗ್ರಾಮಸ್ಥರಿಗೆ ಅಶುದ್ಧ ನೀರು

ಸಿಂಧನೂರು ತಾಲ್ಲೂಕಿನ ರಾಗಲಪರ್ವಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಯಾಪಲಪರ್ವಿ ಮತ್ತು ವಲ್ಕಂದಿನ್ನಿ ಗ್ರಾಮದಲ್ಲಿ ಶುದ್ದ ನೀರಿನ ಘಟಕಗಳು ಹಲವು ತಿಂಗಳಿಂದ ಸ್ಥಗಿತಗೊಂಡಿವೆ. ಹೀಗಾಗಿ ಗ್ರಾಮಸ್ಥರು ಅಶುದ್ದ ನೀರನ್ನೇ ಸೇವಿಸುತ್ತಿದ್ದಾರೆ.

ಸಾರ್ವಜನಿಕರು ಆಗಾಗ್ಗೆ ವಾಂತಿಭೇದಿಯಿಂದ ಪರಿತಪಿಸುವುದು ಸಾಮಾನ್ಯವಾಗಿದೆ. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಒಲಕಮದಿನ್ನಿ ಮತ್ತು ಯಾಪಲಪರ್ವಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದುರಸ್ತಿ ನೆಪದಲ್ಲಿ ಬಾಗಿಲು ಮುಚ್ಚಿದ ಘಟಕಗಳು

ಸಿರವಾರ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಶಾಖಾಪೂರು, ಗಣದಿನ್ನಿ, ಪಟಕನದೊಡ್ಡಿ, ಜಕ್ಕಲದಿನ್ನಿ ಸೇರಿದಂತೆ ಬಹಳಷ್ಟು ಗ್ರಾಮಗಳ ನೀರಿನ ಘಟಕಗಳು ರಿಪೇರಿ ನೆಪದಲ್ಲಿ ಮುಚ್ಚಲಾಗಿದೆ.

‘ಪಂಚಾಯಿತಿ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಇದ್ದರೂ ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ.
ಶಾಖಾಪೂರ ಗ್ರಾಮದ ಘಟಕಕ್ಕೆ ಎರಡು ವರ್ಷದಿಂದ ಬೀಗ ಹಾಕಲಾಗಿದೆ. ಇದರ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಈ ತಿಂಗಳು ರಿಪೇರಿ ಮಾಡುತ್ತೇವೆ ಎನ್ನುತ್ತಲೇ ಎರಡು ವರ್ಷ ಕಳೆದಿದ್ದಾರೆ’ ಎಂದು ಗ್ರಾಮಸ್ಥ ಹನುಮೇಶ ನಾಯಕ ಆರೋಪಿಸಿದ್ದಾರೆ

ಲಕ್ಷಾಂತರ ಖರ್ಚಾದರೂ ಶುದ್ಧ ನೀರಿಲ್ಲ

ದೇವದುರ್ಗ ತಾಲ್ಲೂಕಿನಲ್ಲಿ 146  ಶುದ್ಧ ಕುಡಿಯುವ ನೀರಿನ ಘಟಕಗಳಿವೆ. 94 ಕಾರ್ಯ ನಿರ್ವಹಿಸುತ್ತಿದ್ದು 52 ಸ್ಥಗಿತಗೊಂಡಿವೆ. 

ಒಂದು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ₹14 ರಿಂದ 20 ಲಕ್ಷ ವರೆಗೆ ವೆಚ್ಚ ಮಾಡಲಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಡಿಎಲ್), ಶಾಸಕರ ಅನುದಾನ ಹಾಗೂ ಸಹಕಾರ ಸಂಘಗಳ ನೆರವಿನಿಂದ, ಕಲ್ಯಾಣ ಕರ್ನಾಟಕ ಪ್ರಾದೇಶಿಕ ಮಂಡಳಿ ಅನುದಾನದಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಲಾಗಿದೆ. ಗುತ್ತಿಗೆ ಪಡೆದಿರುವ ಕಂಪೆನಿಯಾಗಲಿ, ಗ್ರಾಮ ಪಂಚಾಯಿತಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ದುರಸ್ತಿ ಮಾಡದೆ ನಿರ್ಲಕ್ಷ್ಯವಹಿಸಿರುವುದರಿಂದ ತುಕ್ಕು ಹಿಡಿದಿವೆ. 

ಪ್ರತಿ ವರ್ಷ ಅಂತರ್ಜಲ ಕುಸಿತದ ಸಮಸ್ಯೆ ಎದುರಿಸುವ ದೇವದುರ್ಗ ಕುಡಿಯುವ ನೀರಿನಲ್ಲಿ ಜಿಲ್ಲೆಯಲ್ಲೇ ಅತಿಹೆಚ್ಚು ಫ್ಲೋರೈಡ್ ಅಂಶ ಹೆಚ್ಚಾಗಿದ್ದು, ಬಹುತೇಕ ಜನರು ಹಲ್ಲು ಮತ್ತು ಮೂಳೆಗಳ ರೋಗದಿಂದ ಬಳಲುತ್ತಿದ್ದಾರೆ. ಅಶುದ್ಧ ನೀರು ಸೇವಿಸಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೂ ಜಿಲ್ಲಾಡಳಿತ ಗಂಭೀರವಾಗಿಲ್ಲ.

ದೇವದುರ್ಗ ತಾಲ್ಲೂಕಿನ ಚಿಕ್ಕಬುದೂರು ಗ್ರಾಮದಲ್ಲಿ ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕ
ದೇವದುರ್ಗ ತಾಲ್ಲೂಕಿನ ಚಿಕ್ಕಬುದೂರು ಗ್ರಾಮದಲ್ಲಿ ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕ
ಸಿಂಧನೂರು ತಾಲ್ಲೂಕಿನ ಒಲಕಮದಿನ್ನಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದ ದುಃಸ್ಥಿತಿ
ಸಿಂಧನೂರು ತಾಲ್ಲೂಕಿನ ಒಲಕಮದಿನ್ನಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದ ದುಃಸ್ಥಿತಿ
ಸಿರವಾರ ತಾಲ್ಲೂಕಿನ ಗಣದಿನ್ನಿ ಗ್ರಾಮದ ನೀರಿನ ಘಟಕ
ಸಿರವಾರ ತಾಲ್ಲೂಕಿನ ಗಣದಿನ್ನಿ ಗ್ರಾಮದ ನೀರಿನ ಘಟಕ

ಜಿಲ್ಲೆಯಲ್ಲಿ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿರುವ ಶುದ್ಧ ನೀರಿನ ಘಟಕಗಳ ದುರಸ್ತಿಗೆ ಅಂದಾಜು ವೆಚ್ಚದ ಮಾಹಿತಿ ಸಿದ್ಧಪಡಿಸಿಕೊಂಡು ಟೆಂಡರ್‌ ಕರೆಯಲಾಗಿದೆ.

-ರಾಹುಲ್ ಪಾಂಡ್ವೆ ಜಿಲ್ಲಾ ಪಂಚಾಯಿತಿ ಸಿಇಒ

ಸಹಕಾರ: ಪಿ.ಕೃಷ್ಣ ಸಿರವಾರ, ಶರಣಪ್ಪ ಆನೆಹೊಸೂರು, ಡಿ.ಎಚ್.ಕಂಬಳಿ, ಯಮನೇಶ ಗೌಡಗೇರಾ, ಮಲ್ಲೇಶ ತುರ್ವಿಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT