ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಸರ್ಕಾರಿ ಶಾಲೆಗೆ ಹೆಚ್ಚಿದ ವಿದ್ಯಾರ್ಥಿನಿಯರ ಒಲವು

Published 9 ಜೂನ್ 2024, 6:36 IST
Last Updated 9 ಜೂನ್ 2024, 6:36 IST
ಅಕ್ಷರ ಗಾತ್ರ

ರಾಯಚೂರು: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ರಾಯಚೂರಿನ ಸ್ಟೇಷನ್ ರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚುತ್ತಿದ್ದು, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿದೆ.

ನಗರ ಮಾತ್ರವಲ್ಲದೇ ತಾಲ್ಲೂಕಿನ ಮಮದಾಪುರ, ನೆಲಹಾಳ, ಯರಗೇರಾ, ಮಟಮಾರಿ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳು ದಾಖಲಾತಿ ಪಡೆದಿದ್ದಾರೆ. ಪ್ರೌಢಶಾಲೆಯಲ್ಲಿ 8, 9 ಹಾಗೂ 10ನೇ ತರಗತಿಯಲ್ಲಿ ಹೆಚ್ಚು ಮಕ್ಕಳು ದಾಖಲಾಗುತ್ತಿರುವ ಕಾರಣ ‘ಎ’ ಮತ್ತು ‘ಬಿ’ ವಿಭಾಗ ಮಾಡಲಾಗಿದೆ. ಶಾಲೆ ಆರಂಭವಾಗಿ ಒಂದು ವಾರದೊಳಗೆ 8ನೇ ತರಗತಿಗೆ 73 ಬಾಲಕಿಯರು ಪ್ರವೇಶ ಪಡೆದಿದ್ದು, ಇನ್ನೂ ಸಮಯಾವಕಾಶ ಇರುವುದರಿಂದ ಮತ್ತಷ್ಟು ಹೆಚ್ಚಾಗಬಹುದು. ಕಳೆದ ವರ್ಷ 175 ವಿದ್ಯಾರ್ಥಿನಿಯರು ಇಲ್ಲಿ ಪ್ರವೇಶ ಪಡೆದುಕೊಂಡಿದ್ದರು.

ಪ್ರಸ್ತುತ 9ನೇ ತರಗತಿಯಲ್ಲಿ 156 ಹಾಗೂ 10ನೇ ತರಗತಿಯಲ್ಲಿ 181 ವಿದ್ಯಾರ್ಥಿನಿಯರು ಇದ್ದಾರೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳು ಇಲ್ಲ. ಶಾಲೆಯಲ್ಲಿ 8 ಕ್ಲಾಸ್ ರೂಮ್‌ಗಳು, ಗ್ರಂಥಾಲಯ, ಕಚೇರಿ ಸೇರಿ ಒಟ್ಟು 13 ಕೊಠಡಿಗಳಿವೆ. ಮಧ್ಯಾಹ್ನದ ಬಿಸಿಯೂಟ ಕಾಲೇಜಿನ ಕಟ್ಟಡದಲ್ಲಿ ಮಾಡಲಾಗುತ್ತಿದೆ. ಶಾಲೆಗೆ ಸ್ವಂತ ಕೊಠಡಿ ಬೇಕಾಗಿದೆ. ಒಂದು ಕ್ಲಾಸ್ ರೂಮ್, ಅಡುಗೆ ಕೋಣೆ, ಕ್ರೀಡಾ ಕೋಣೆ ಸೇರಿ ಇನ್ನೂ ಆರು ಕೊಠಡಿಗಳ ಅವಶ್ಯಕತೆ ಇದೆ.

ನಗರದ ಪ್ರೌಢಶಾಲೆಯೇ ಇಷ್ಟ: ತಾಲ್ಲೂಕಿನ ಚಂದ್ರಬಂಡಾ, ಯರಗೇರಾ, ಗುಂಜಳ್ಳಿ, ಯಾಪಲದಿನ್ನಿ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳೆಂದರೆ ಅಚ್ಚುಮೆಚ್ಚು. ಈ ಭಾಗದ ಪ್ರೌಢಶಾಲೆಗಳಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಾರೆ. ಅಲ್ಲಿ ಕೂರಲು ಆಸನಗಳು ದೊರೆಯದ ಕಾರಣ ನಗರದ ಸರ್ಕಾರಿ ಬಾಲಕಿಯರ ಶಾಲೆಯತ್ತ ಮುಖ ಮಾಡುತ್ತಾರೆ. 

‘ಈ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಬೋಧನೆ, ಸುಸಜ್ಜಿತ ಕೊಠಡಿಗಳು, ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಕೊಠಡಿ, ಆಟದ ಮೈದಾನವಿದೆ. ಮಕ್ಕಳು ಪಾಠದ ಜೊತೆ ಪಠ್ಯೇತರ ಚಟುವಟಿಕೆ ಹಾಗೂ ಕ್ರೀಡೆಗಳಲ್ಲಿಯೂ ಹೆಚ್ಚು ಆಸಕ್ತಿಯಿಂದ ಭಾಗವಹಿಸಿ ರಾಜ್ಯ ಮಟ್ಟದವರೆಗೆ ಆಯ್ಕೆಯಾಗಿದ್ದಾರೆ. ಪ್ರತಿ ವರ್ಷ ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ಗಮನಾರ್ಹ ಸಾಧನೆ ಮಾಡುತ್ತದೆ. ಕಳೆದ ವರ್ಷ ವಿಜ್ಞಾನ ವಿಷಯದಲ್ಲಿ ವಿದ್ಯಾರ್ಥಿನಿಯರು ಫೇಲಾದರು. ಹೀಗಾಗಿ ಫಲಿತಾಂಶ ಕೆಳಮಟ್ಟಕ್ಕೆ ಕುಸಿಯಿತು. ಈ ಬಾರಿ ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಂಡಿದ್ದೇವೆ’ ಎನ್ನುವುದು ಶಾಲೆಯ ಮುಖ್ಯಶಿಕ್ಷಕ ಶ್ರೀನಿವಾಸ ಹೇಳುತ್ತಾರೆ.

ಕೌಶಲ ತರಬೇತಿಗೆ ಆಯ್ಕೆ

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಿಂದ ಈ ವರ್ಷದಿಂದ 9ನೇ ತರಗತಿಯ ವಿದ್ಯಾರ್ಥಿನಿಯರನ್ನು NSQF ಯೋಜನೆಯಡಿಯಲ್ಲಿ ಕೌಶಲ ತರಬೇತಿ ನೀಡಲು ಆಯ್ಕೆ ಮಾಡಲಾಗಿದೆ. ಮಕ್ಕಳ ಸಂಖ್ಯೆ ಹೆಚ್ಚಿರುವ ಶಾಲೆಗಳನ್ನು ಆಯ್ಕೆ ಮಾಡಿದ್ದು ಜಿಲ್ಲೆಯ 50 ಶಾಲೆಗಳ ಪೈಕಿ ಈ ಶಾಲೆಯೂ ಆಯ್ಕೆಯಾಗಿದೆ. ಬಡ ಹಾಗೂ ಕಡು ಬಡ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದಿದ್ದಲ್ಲಿ ಎಸ್ಎಸ್‌ಎಲ್‌ಸಿ ನಂತರ ಬ್ಯೂಟಿ ಪಾರ್ಲರ್, ಇತರೆ ಕೌಶಲಾಧಾರಿತ ತರಬೇತಿ ಪಡೆದು ಸ್ವಾವಲಂಬಿ ಜೀವನ ನಡೆಸಬಹುದು ಎಂಬ ಆಲೋಚನೆಯಿಂದ ಸರ್ಕಾರ ಯೋಜನೆ ಜಾರಿ ಮಾಡಿದೆ ಎಂದು ಶ್ರೀನಿವಾಸ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT