ಶನಿವಾರ, ಜೂನ್ 12, 2021
24 °C
ಸ್ವಾತಂತ್ರ್ಯ ದಿನಾಚರಣೆ: ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ

ಹೋರಾಟದಲ್ಲಿ ರಾಯಚೂರಿಗೆ ಮಹತ್ವವಿದೆ: ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಕೃಷ್ಣ ಮತ್ತು ತುಂಗಭದ್ರಾ ನದಿಗಳ ಬೀಡಿನಲ್ಲಿರುವ ರಾಯಚೂರು ಜಿಲ್ಲೆಗೆ ತನ್ನದೇ ಆದ ಮಹತ್ವ ಸ್ಥಾನವಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಜಿಲ್ಲಾಡಳಿತದಿಂದ ಶನಿವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಈ ಭಾಗದ ಸ್ವಾತಂತ್ರ್ಯ ಸೇನಾನಿಗಳಾಗಿದ್ದ ಹಮ್ಮಿಗೆ ಕೆಂಚನಗೌಡರವರು, ಶಿರೂರು ವೀರಭದ್ರಯ್ಯನವರು, ಜನಾರ್ಧನರಾಯ ದೇಸಾಯಿಯವರು, ಎಲ್.ಕೆ. ಸರಾಫ್‌, ಬಿಂದು ಮಾಧವರಾವ್‌, ಬಿ.ಕೆ. ಪ್ರಾಣೇಶಾಚಾರ್ಯ ಸೇರಿ ಹಲವು ಧೀಮಂತರ ಸೇವೆಯನ್ನು ಸ್ಮರಿಸುವುದು ಎಲ್ಲರ ಕರ್ತವ್ಯ ಎಂದರು.

ಕೋವಿಡ್‌ ಮಹಾಮಾರಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮರ್ಥವಾಗಿ ನಿಭಾಯಿಸುತ್ತಿವೆ. ಕೋವಿಡ್ ಸಂಕಷ್ಟದಲ್ಲಿದ್ದ ಜಿಲ್ಲೆಯ 26,655 ಕಟ್ಟಡ ಕಾರ್ಮಿಕರಿಗೆ ₹5 ಸಾವಿರ ಪರಿಹಾರ ನೀಡಲಾಗಿದೆ. 5,531 ಅಗಸರು ಹಾಗೂ 2,715 ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ವಲಯದ ಒಟ್ಟು 8,246 ಕಾರ್ಮಿಕರಿಗೆ ಒಂದು ಬಾರಿ ಪರಿಹಾರವಾಗಿ ತಲಾ ₹5 ಸಾವಿರ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ರೈತರ ಸಂಕಷ್ಟ ನಿವಾರಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಲಾಕ್‌ಡೌನ್ ಸಮಯದಲ್ಲಿ ಕೃಷಿ ಪರಿಕರಗಳ ಸುಗಮ ವಿತರಣೆಗಾಗಿ ರೈತರಿಗೆ ಗ್ರೀನ್‌ಪಾಸ್ ವಿತರಿಸಿ, ಕೃಷಿ ಚಟುವಟಿಕೆಗಳಿಗೆ, ಕೃಷಿ ಯಂತ್ರೋಪಕರಣಗಳಿಗೆ ಮತ್ತು ಕೃಷಿ ಯಂತ್ರಗಳ ರಿಪೇರಿ ಮಳಿಗೆಗಳಿಗೆ ಸರ್ಕಾರ ನಿರ್ಬಂಧ ತೆರವುಗೊಳಿಸಿತ್ತು. ಅಲ್ಲದೆ, ಪ್ರತಿ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಉಚಿತ ಮಾಸ್ಕ್ ವಿತರಿಸಲಾಗಿದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯಲ್ಲಿ 2,07,402 ರೈತರಿಗೆ, ₹288.58 ಕೋಟಿ ನೆರವು ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ₹154.58 ಮತ್ತು ರಾಜ್ಯದಿಂದ ₹74 ಕೋಟಿ ನೀಡಲಾಗಿದೆ ಎಂದು ತಿಳಿಸಿದರು.

ಕೋವಿಡ್ ಲಾಕ್‌ಡೌನ್‌ನಿಂದ ಸಂಕಷ್ಟಗೊಳಗಾದ ಹೂವು, ಹಣ್ಣು, ಮತ್ತು ತರಕಾರಿ ಬೆಳೆಗಳನ್ನು ಬೆಳೆದು ಹಾನಿಗೊಳಗಾದ ರೈತರು ಹಾಗೂ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ₹10 ಲಕ್ಷ ಪರಿಹಾರಧನವನ್ನು ವಿತರಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೊರೊನಾ ವಿರುದ್ಧ ಸೈನಿಕರಂತೆ ಶ್ರಮಿಸಿದ ಆರೋಗ್ಯ ಕಾರ್ಯಕರ್ತರು, ಆಶಾ, ಅಂಗನವಾಡಿ ಕಾರ್ಯಕರ್ತರು, ಪೌರ ಕಾರ್ಯಕರ್ತರು, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಪೊಲೀಸರು, ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳನ್ನು ಪ್ರಮಾಣಪತ್ರ ನೀಡಿ ಸನ್ಮಾನಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಸಂಸದ ರಾಜಾ ಅಮರೇಶ್ವರ ನಾಯಕ, ರಾಜ್ಯಸಭೆ ಸದಸ್ಯ ಅಶೋಕ್ ಗಸ್ತಿ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ, ಉಪವಿಭಾಗಾಧಿಕಾರಿ ಆಯುಕ್ತ ಸಂತೋಷ್ ಕಾಮಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು