ಸೋಮವಾರ, ಆಗಸ್ಟ್ 2, 2021
19 °C
ಜಿಲ್ಲಾಧಿಕಾರಿ ಕಚೇರಿ ಎದುರು ದಿನಸಿ ಪ್ರದರ್ಶನ

ದರ ಏರಿಕೆ ವಿರುದ್ಧ ಜೆಡಿಎಸ್‌ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ದೇಶದಲ್ಲಿ ಪೆಟ್ರೋಲ್, ಡಿಸೇಲ್, ರಸಗೊಬ್ಬರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಕೋವಿಡ್ ನಿರ್ವಹಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲರಾಗಿದೆ ಎಂದು ಆರೋಪಿಸಿ ಜಿಲ್ಲಾ ಜೆಡಿಎಸ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ದಿನಸಿ ವಸ್ತುಗಳನ್ನು ಪ್ರದರ್ಶಿಸಿ ವಿನೂತನ ಪ್ರತಿಭಟನೆ ನಡೆಸಲಾಯಿತು.

ಆನಂತರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಇಂಧನ ಮತ್ತು ಅಗತ್ಯ ವಸ್ತಗಳ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುವಂತಾಗಿದೆ. ದೇಶದಲ್ಲಿ ಹೆಮ್ಮಾರಿ ಕೋವಿಡ್ ಸೋಂಕಿನಿಂದ ಮೃತಪಟ್ಟಿರುವ ಕುಟುಂಬಗಳಿಗೆ ಪರಿಹಾರ ನೀಡಬೇಕು‌ ಎಂದು ಒತ್ತಾಯಿಸಿದರು.

ಇಂಧನ, ರಸಗೊಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರನ್ನು ಬೀದಿಪಾಲು ಮಾಡುವ ಹುನ್ನಾರ ನಡೆಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸುವುದನ್ನು ಬಿಟ್ಟು ಸರ್ಕಾರ ಬೆಲೆ ಏರಿಕೆ ಮಾಡುತ್ತಿರುವುದು ಖಂಡನೀಯ.

ಲಾಕ್‌ಡೌನ್‌ನಿಂದಾಗಿ ಅನೇಕ ಕುಟುಂಬಗಳು ಬೀದಿ ಪಾಲಾಗಿವೆ. ಹಲವು ಕುಟುಂಬಗಳು ನಿರ್ಗತಿಕರಾಗಿದ್ದಾರೆ. ಇಂದಿನ ಪರಿಸ್ಥಿತಿಯನ್ನು ಅವಲೋಕನೆ ಮಾಡಿದ್ದರೆ ಒಂದು ಹೊತ್ತು ಊಟಕ್ಕೂ ಜನರು ಪರದಾಡುವಂತಾಗಿದೆ ಎಂದರು.

ಕೇಂದ್ರ ಸರ್ಕಾರ 23 ಬಾರಿ ತೈಲ ಬೆಲೆ ಏರಿಕೆ ಮಾಡಿದೆ. ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಪೆಟ್ರೋಲ್ ಮತ್ತು ಡಿಸೇಲ್ ದರವು ಶತಕ ದಾಟಿದೆ. ರಾಯಚೂರು ಜಿಲ್ಲೆಯಲ್ಲಿ ಪ್ರತಿ ಲೀಟರ್‌ಗೆ ಪೆಟ್ರೋಲ್ ಬೆಲೆ ₹ 100, ಡಿಸೇಲ್ ₹ 93 ಮುಟ್ಟಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕುಸಿಯುತ್ತಿದ್ದರೂ ಕೇಂದ್ರ ಸರ್ಕಾರ ವಿಧಿಸುವ ಅಬಕಾರಿ ಶುಲ್ಕವನ್ನು ಹೆಚ್ಚಿಸಿದೆ. ಇಂಧನ ಬೆಲೆ ಏರಿಕೆಯಿಂದ ಬಸ್ಸು, ಸರಕು, ಸಾಗಣೆ, ಟ್ಯಾಕ್ಸಿ ಮತ್ತು ಆಟೋಗಳ ದರ ಹೆಚ್ಚಾಗುತ್ತಿರುವುದರಿಂದ ಶ್ರೀಸಾಮಾನ್ಯನು ಬಳಸುವ ಆಹಾರ ಸಾಮಾಗ್ರಿಗಳ ದರವೂ ಗಗನದ ಕಡೆಗೆ ಹೋಗುತ್ತಿದೆ ಎಂದು ಹೇಳಿದರು.

ಮುಂಗಾರು ಆರಂಭ ಆಗಿರುವುದರಿಂದ ರಸಗೊಬ್ಬರ ಬೆಲೆ ಏರಿಕೆ ಮಾಡಿ, ರೈತರು ಕೃಷಿ ಚಟುವಟಿಕೆ ನಿರ್ವಹಿಸಲು ತೀವ್ರ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸೋಂಕಿನಿಂದ ಬಡತನ ರೇಖೆಗಿಂತ ಕೆಳಗಿರುವ ಬಡ ಕುಟುಂಬಗಳಿಗೆ ಸರ್ಕಾರ ಈಗಾಗಲೇ ₹ 1 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದೆ. ₹ 1 ಲಕ್ಷ ಒದಗಿಸಿ ₹ 5 ಲಕ್ಷ ಮೃತರ ಕುಟುಂಬಕ್ಕೆ ನೀಡಬೇಕು ಮತ್ತು ಇಂಧನ, ರಸಗೊಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ, ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ, ಮುಖಂಡ ಯೂಸೂಫ್ ಖಾನ್, ಲಕ್ಷ್ಮೀಪತಿ ಗಾಣಾಧಾಳ, ರವಿ ಪಾಟೀಲ, ಶಿವಶಂಕರ, ಬಿ.ತಿಮ್ಮಾರೆಡ್ಡಿ, ಪಿ.ಯಲ್ಲಪ್ಪ, ರಾಮಕೃಷ್ಣ, ದಾನಪ್ಪ ಯಾದವ, ವಿಶ್ವನಾಥ ಪಟ್ಟಿ, ಆಲಂಬಾಬು, ನಿಜಾಮುದ್ದೀನ್, ಶ್ರೀನಿವಾಸರೆಡ್ಡಿ, ಅಮರೇಶ ಪಾಟೀಲ, ನರಸಪ್ಪ ಆಶಾಪೂರು, ಆಮೃದ್, ರವಿಯಾದವ್, ನರಸಿಂಹಲು, ಖಲೀಲ್, ನವಾಬ್, ಲಕ್ಷ್ಮಣ ವಕೀಲ, ಆಂಜಿನೆಯ್ಯ ವಕೀಲ, ಆದಿರಾಜ, ಈರಣ್ಣ, ಖಲೀಲ್, ನರಸಿಂಹ, ವಿಜಯ, ವೆಂಕಟೇಶ, ರವಿ ಯಾದವ, ವಿ.ಕೆ.ಬಾಬು, ಶಾಲಂ , ನವಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.