ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಲಜೀವನ್ ಮಿಷನ್‌’ ಅನುಷ್ಠಾನ ಇನ್ಮುಂದೆ ನಿಧಾನ!

‘ಜಲಧಾರೆ ಯೋಜನೆ‘ಗಾಗಿ ಸಮೀಕ್ಷೆ ಕಾರ್ಯ ಆರಂಭ
Last Updated 29 ಜೂನ್ 2022, 22:30 IST
ಅಕ್ಷರ ಗಾತ್ರ

ರಾಯಚೂರು: ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಗೂ ನೀರಿನ ಸಂಪರ್ಕ ಒದಗಿಸುವುದಕ್ಕಾಗಿ ಜಾರಿಗೆ ತಂದಿರುವ ‘ಜಲ ಜೀವನ್‌ ಮಿಷನ್‌‘ ಯೋಜನೆ ಕಾಮಗಾರಿಗಳನ್ನು ಉದ್ದೇಶಪೂರ್ವಕ ನಿಧಾನಗೊಳಿಸಲಾಗುತ್ತಿದೆ.

ಕಾಮಗಾರಿ ವಿಳಂಬ ಹಾಗೂ ನಿಧಾನವಾಗಿ ನಡೆಯುವ ಸರ್ಕಾರಿ ಕೆಲಸಗಳ ವಿರುದ್ಧ ಸಂಘ–ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಧ್ವನಿ ಎತ್ತುವುದು ಸಾಮಾನ್ಯ. ಆದರೆ, ಜಲಜೀವನ ಮಿಷನ್‌ ಕಾಮಗಾರಿಗಳನ್ನು ಮಾತ್ರ ನಿಧಾನಗೊಳಿಸಲು ಜನರೇ ಕೇಳುತ್ತಿದ್ದಾರೆ. ನೀರಿನ ಮೂಲವಿಲ್ಲದೆ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿದರೆ, ಕೆಲವೇ ತಿಂಗಳುಗಳಲ್ಲಿ ಅದು ಹಾಳಾಗಬಹುದು ಎನ್ನುವ ಸಂಗತಿಯು ಈಗ ಪ್ರಸ್ತಾಪಕ್ಕೆ ಬಂದಿದೆ.

ಜಲಜೀವನ್‌ ಮಿಷನ್‌ ಯೋಜನೆಯಡಿ ಎಲ್ಲ ಮನೆಗಳಿಗೂ ಮೊದಲು ನಲ್ಲಿ ಅಳವಡಿಸಲು ಆದ್ಯತೆ ವಹಿಸಲಾಗಿದೆ. ಆನಂತರ ಜಲಧಾರೆ ಯೋಜನೆ ಮೂಲಕ ನಾರಾಯಣಪುರ ಜಲಾಶಯದಿಂದ ಪ್ರತಿ ಗ್ರಾಮಕ್ಕೂ ನೀರು ಒದಗಿಸುವುದಕ್ಕೆ ಯೋಜಿಸಲಾಗಿದೆ.. ಆದರೆ, ಜಲಧಾರೆ ಯೋಜನೆ ಇನ್ನೂ ಆರಂಭ ಹಂತದಲ್ಲಿದೆ. ಕಾಮಗಾರಿ ಜಾರಿಗಾಗಿ ಇನ್ನೂ ಸಮೀಕ್ಷೆ ಕಾರ್ಯ ಆರಂಭಿಸಲಾಗಿದೆ.

ಒಂದು ವೇಳೆ ಜಲಜೀವನ್‌ ಮಿಷನ್‌ ಯೋಜನೆ ಕ್ಷಿಪ್ರವಾಗಿ ಜಾರಿಗೊಳಿಸಿ, ಮನೆಗಳಿಗೆಲ್ಲ ನಲ್ಲಿ ಅಳವಡಿಸಿದರೆ ಎರಡು ವರ್ಷಗಳವರೆಗೂ ಅದು ಉಳಿದುಕೊಳ್ಳುವುದೇ ಎನ್ನುವ ಪ್ರಶ್ನೆ ಎದುರಾಗಿದೆ. ಜೀವಧಾರೆ ಯೋಜನೆ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಇನ್ನೂ ಎರಡು ವರ್ಷಗಳಾದರೂ ಬೇಕಾಗಬಹುದು.

ಜಲ ಜೀವನ ಮಿಷನ್‌ ಮೊದಲ ಹಂತದಲ್ಲಿ 311 ಗ್ರಾಮಗಳಲ್ಲಿ ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. 83,480 ಮನೆಗಳಿಗೆ ಪೈಪ್‌ಲೈನ್‌ ಅಳವಡಿಸಿ ನಲ್ಲಿ ಸಂಪರ್ಕ ಒದಗಿಸಲಾಗುತ್ತಿದೆ. ಇದಕ್ಕಾಗಿ ಒಟ್ಟು ₹211 ಕೋಟಿ ವ್ಯಯಿಸಲಾಗುತ್ತಿದೆ. 43 ಗ್ರಾಮಗಳಲ್ಲಿ ಈಗಾಗಲೇ ಕಾಮಗಾರಿ ಪೂರ್ಣಗೊಂಡಿವೆ.

ಎರಡನೇ ಹಂತದಲ್ಲಿ 262 ಗ್ರಾಮಗಳ ಮನೆಗಳಿಗೆ ಪೈಪ್‌ಲೈನ್‌ ಮತ್ತು ನಲ್ಲಿ ಸಂಪರ್ಕ ಕಲ್ಪಿಸಲು ಡಿಪಿಆರ್‌ ಸಿದ್ಧಪಡಿಸಲಾಗುತ್ತಿದೆ. ಅರ್ಧಕ್ಕೂ ಹೆಚ್ಚು ಕಾಮಗಾರಿಗಳ ಡಿಪಿಆರ್‌ ಅನುಮೋದನೆಗೊಂಡಿದ್ದು, ಕಾಮಗಾರಿಯೂ ಆರಂಭವಾಗಿವೆ. ಒಟ್ಟು ₹124 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇನ್ನೂ ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ ಪೈಪ್‌ಲೈನ್‌ ಅಳವಡಿಸಲು, ಡಿಪಿಆರ್‌ ಸಿದ್ಧಪಡಿಸುವುದು ಬಾಕಿ ಇದ್ದು, ಮೂರನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಆದರೆ, ಮೊದಲ ಹಂತದ ಕಾಮಗಾರಿಗಳೇ ಇನ್ನೂ ಮುಗಿದಿಲ್ಲ. ಅಲ್ಲದೆ, ನೀರಿಲ್ಲದೆ ನಲ್ಲಿ ಹಾಕುವುದು ಪ್ರಾಯೋಗಿಕವಲ್ಲ ಎನ್ನುವ ಮಾತುಗಳು ಶುರುವಾಗಿವೆ.

ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ ಅವರು, ‘ಸದ್ಯ ನನ್ನ ಕ್ಷೇತ್ರಕ್ಕೆ ಒಳಪಡುವ ಗ್ರಾಮಗಳಲ್ಲಿ ಜಲಜೀವನ್‌ ಮಿಷನ್‌ ಯೋಜನೆ ಜಾರಿ ಮಾಡುವುದು ಬೇಡ. ನೀರು ಒದಗಿಸುವುದಕ್ಕೆ ವ್ಯವಸ್ಥೆಯಾದ ಮೇಲೆಯೇ ನಲ್ಲಿ ಹಾಕುವ ಕಾರ್ಯ ಆರಂಭಿಸಿ‘ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಲಧಾರೆ ಯೋಜನೆ ಜಾರಿಗೆ ರಾಜ್ಯ ಸರ್ಕಾರವು 2021 ಜೂನ್‌ನಲ್ಲಿ ಅನುಮೋದನೆ ನೀಡಿದೆ. ಇದಕ್ಕಾಗಿ ₹1,988 ಕೋಟಿ ಅನುದಾನ ಒದಗಿಸಲಾಗುತ್ತಿದೆ. ನಾರಾಯಣಪುರ ಜಲಾಶಯದಿಂದ 1,406 ಗ್ರಾಮಗಳಿಗೆ ನೀರು ಪೂರೈಸಲು ಯೋಜಿಸಿದ್ದು, ಇದರಲ್ಲಿ ಏಳು ತಾಲ್ಲೂಕು ಕೇಂದ್ರಗಳು ಒಳಗೊಂಡಿವೆ. ಯೋಜನೆಯನ್ನು ವಿನ್ಯಾಸಗೊಳಿಸಿ, ಕಾಮಗಾರಿ ಪೂರ್ಣಗೊಳಿಸಿ, ನಿರ್ವಹಣೆ ಮಾಡಿದ ನಂತರ ಅದನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವ ಸಾಮರ್ಥ್ಯವಿರುವ ಕಂಪೆನಿಗೆ ಈ ಕಾಮಗಾರಿ ಗುತ್ತಿಗೆ ನೀಡಲಾಗುತ್ತದೆ.

ಜಿಲ್ಲೆಯಾದ್ಯಂತ ಎಲ್ಲ ಮನೆಗಳಿಗೂ ಸಮರ್ಪಕವಾಗಿ ನೀರು ಒದಗಿಸುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾಗಳು ಸಹಯೋಗದಲ್ಲಿ ಜಲಧಾರೆ ಮತ್ತು ಜಲ ಜೀವನ್‌ ಮಿಷನ್‌ ಯೋಜನೆ ಜಾರಿಗೊಳಿಸುತ್ತಿವೆ. ಆದರೆ, ನಲ್ಲಿ ಮೊದಲು ಹಾಕಬೇಕೆ ಅಥವಾ ಮೊದಲು ನೀರಿನ ವ್ಯವಸ್ಥೆ ಮಾಡಬೇಕೆ ಎನ್ನುವ ಪ್ರಶ್ನೆಗಳು ಶುರುವಾಗಿವೆ. ಎರಡೂ ಯೋಜನೆ ಏಕಕಾಲಕ್ಕೆ ಪ್ರಾರಂಭಿಸಿದ್ದರೆ, ಈ ಸಮಸ್ಯೆ ಇರುತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT