ಶನಿವಾರ, ಅಕ್ಟೋಬರ್ 23, 2021
25 °C
ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಡಿಸಿ ಡಾ.ಬಿ.ಸಿ.ಸತೀಶ್‌ ಹೇಳಿಕೆ

ರಾಯಚೂರು: ಒಗ್ಗಟ್ಟಿನಿಂದ ಕೋವಿಡ್‌ ಎದುರಿಸಲು ಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೋವಿಡ್‌ ಮಹಾಮಾರಿಯನ್ನು ಎಲ್ಲರೂ ಒಗ್ಗಟ್ಟಿನಿಂದ ಎದುರಿಸಬೇಕಿದೆ. ಸಾರ್ವಜನಿಕರು ಮುಂಜಾಗೃತೆ ವಹಿಸಿ ಸರ್ಕಾರವು ನೀಡಿರುವ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ್‌ ಹೇಳಿದರು.

ನಗರದ ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಆಯೋಜಿಸಿದ್ದ ‘ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ’ಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಇದುವರೆಗೂ 9.9 ಲಕ್ಷ ಜನರಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಜಿಲ್ಲೆಯಾದ್ಯಂತ ವ್ಯಾಪಕವಾಗಿ ಲಸಿಕೆ ಅಭಿಯಾನ ಆರಂಭಿಸಲಾಗಿದೆ. ಪ್ರತಿದಿನ 30 ಸಾವಿರ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಗರ್ಭಿಣಿ, ನವಜಾತ ಶಿಶುಗಳ ರಕ್ಷಣೆಗಾಗಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ, ರಕ್ತ ಪೂರೈಕೆ ಕೈಗೊಳ್ಳಲಾಗಿದೆ ಎಂದರು.

ಕೋವಿಡ್‌ ರೋಗಿಗಳಿಗೆ ಆಮ್ಲಜನಕ ಪೂರೈಸುವುದು ಅಗತ್ಯ ಎಂಬುದನ್ನು ಅರಿತು ಸಾರಿಗೆ ಸಂಸ್ಥೆಯು ಮೂರು ವಾಹನಗಳನ್ನು ಪರಿವರ್ತಿಸಿ ಆಕ್ಸಿಜನ್‌ ವಾಹನ ಮಾಡಿದೆ. ಕೋವಿಡ್‌ ಮಹಾಮಾರಿ ತಡೆಗಟ್ಟಬೇಕಿದ್ದು, ಎಲ್ಲರೂ ಕೋವಿಡ್‌ ಎರಡೂ ಲಸಿಕೆ ಪಡೆಯುವುದು ಕಡ್ಡಾಯ. ಸಂಘ, ಸಂಸ್ಥೆಗಳು ಹಾಗೂ ಸಮುದಾಯಗಳು ಈ ಬಗ್ಗೆ ಸಹಕಾರ ನೀಡಲು ಮುಂದೆ ಬರಬೇಕು ಎಂದು ಹೇಳಿದರು.

ಕಳೆದ ತಿಂಗಳು ಕೃಷ್ಣಾನದಿ ಪ್ರವಾಹದಿಂದ ಆಗಿದ್ದ ಬೆಳೆಹಾನಿಗೆ 807 ರೈತರಿಗೆ ಸಹಾಯಧನ ಜಮಾಗೊಳಿಸಲು ಅನುಮೋದನೆ ನೀಡಲಾಗಿದೆ. ಬಹುದಿನಗಳ ಕನಸಾಗಿರುವ ರಾಯಚೂರು ವಿಮಾನ ನಿಲ್ದಾಣ ನನಸಾಗುವ ಹಂತದಲ್ಲಿದ್ದು, ಈಗಾಗಲೇ ಭೂಮಿ ಸರ್ವೇ ಆರಂಭಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯಿಂದ ₹40 ಕೋಟಿ ಹಾಗೂ ಜಿಲ್ಲಾ ಗಣಿ ನಿಧಿ (ಡಿಎಂಎಫ್‌)ಯಿಂದ ₹10 ಕೋಟಿ ಮೀಸಲಿಡಲಾಗಿದೆ. ಕೆಎಸ್‌ಐಐಡಿಸಿ ಮತ್ತು ಆರ್‌ಐಟಿಇಎಸ್‌ ಸಂಸ್ಥೆಗಳಿಂದ ವಿಸ್ತೃತ ಯೋಜನೆ ಸಿದ್ಧಪಡಿಸಲಾಗುತ್ತಿವೆ ಎಂದರು.

ಕೇಂದ್ರ ಸರ್ಕಾರದ ಜಲಜೀವನ್‌ ಮಿಷನ್‌ ಯೋಜನೆಯಡಿ 313 ಕಾಮಗಾರಿಗಳಿಗೆ ಅನುಮೋದನೆ ಸಿಕ್ಕಿದ್ದು, ಗ್ರಾಮೀಣ ಭಾಗದ ಪ್ರತಿ ಮನೆಗಳಿಗೂ ನೀರಿನ ಸಂಪರ್ಕ ಕಲ್ಪಿಸಲಾಗುವುದು. ರಾಜ್ಯ ಸರ್ಕಾರವು ಈಗಾಗಲೇ ₹225 ಕೋಟಿ ಅನುದಾನಕ್ಕೆ ಮಂಜೂರಾತಿ ನೀಡಿದ್ದು, 213 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ ಎಂದು ತಿಳಿಸಿದರು.

₹200 ಕೋಟಿ ವೆಚ್ಚದ ಬಿ.ಆರ್‌.ಗಣೇಕಲ್‌ ಏತ ನೀರಾವರಿ ಹಾಗೂ ರಾಯಚೂರು ತಾಲ್ಲೂಕಿನ ಲಿಂಕ್‌ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ₹212 ಕೋಟಿ ವೆಚ್ಚದ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ. ರಾಯಚೂರು ನಗರಕ್ಕೆ ವರ್ತುಲ ರಸ್ತೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರವು ಪ್ರಸಕ್ತ ಬಜೆಟ್‌ನಲ್ಲಿ ₹80 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು