ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಮತ್ತೆ ಸುರಿದ ಮಳೆಯಿಂದ ಜೀವನ ಅಸ್ತವ್ಯಸ್ತ

ಚಂದ್ರಬಂಡಾ ಹೋಬಳಿಯಲ್ಲಿ 31 ಎಂಎಂ ಮಳೆ ದಾಖಲು
Last Updated 14 ಅಕ್ಟೋಬರ್ 2020, 15:56 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಡೀ ಮತ್ತೆ ಮಳೆ ಸುರಿದಿದ್ದರಿಂದ ಜನಜೀವನವು ಅಸ್ತವ್ಯಸ್ತವಾಗಿದೆ.

ಮುಖ್ಯವಾಗಿ ಗ್ರಾಮೀಣ ಭಾಗಗಳಲ್ಲಿ ಜನರು, ಜಾನುವಾರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಬಹಳಷ್ಟು ಕಡೆಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಾಯಚೂರು ನಗರದ ಸಿಯಾತಾಲಾಬ್, ಸುಖಾಣಿ ಕಾಲೋನಿ, ಜಹೀರಾಬಾದ್, ಎಲ್‌ಬಿಎಸ್‌ ನಗರದ ಟೀಚರ್ ಕಾಲೋನಿ ಸೇರಿ ತಗ್ಗು ಪ್ರದೇಶದಲ್ಲಿರುವ 20 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಜನರು ಜಾಗರಣೆ ಮಾಡಿದ್ದು, ನೀರೆತ್ತುವ ಪಂಪ್‌ನಿಂದ ಮನೆಗಳನ್ನು ಸ್ವಚ್ಛ ಮಾಡಿಕೊಳ್ಳುತ್ತಿರುವುದು ಬುಧವಾರ ಕಂತುಬಂತು. ಕೆಇಬಿ ಕಾಲೋನಿಯಲ್ಲಿ ದೊಡ್ಡ ನೀಲಗಿರಿ ಮರವೊಂದು ಉರುಳಿದೆ. ಮನೆಗಳಿಗೆ ಹೊಂದಿಕೊಂಡು ಬಿದ್ದಿರುವುದರಿಂದ ಯಾವುದೇ ಜೀವ ಹಾನಿಯಾಗಿಲ್ಲ.

ನೆಲಕಚ್ಚಿದ ರೈತನ ಬದುಕು: ಜಿಲ್ಲೆಯಲ್ಲಿ ಸಮೃದ್ಧವಾಗಿ ಬೆಳೆದಿದ್ದ ಭತ್ತವು ನಿರಂತರ ಮಳೆಯಿಂದಾಗಿ ನೆಲಕಚ್ಚಿದ್ದು, ಬೆಳೆ ಅವಲಂಬಿಸಿರುವ ರೈತನ ಬದುಕು ಕೂಡಾ ಕುಸಿದಂತಾಗಿದೆ.

ರಾಯಚೂರು ತಾಲ್ಲೂಕಿನ ಸರ್ಜಾಪೂರ ಗ್ರಾಮದಲ್ಲಿ ಭಾರಿ ಮಳೆಯಿಂದ ಹರಿದು ಬರುತ್ತಿರುವ ನೀರು ಹತ್ತಿ ಹಾಗೂ ಭತ್ತದ ಗದ್ದೆಗಳಲ್ಲಿ ಕಾಲುವೆಯಂತೆ ಹರಿಯುತ್ತಿದೆ. ತಗ್ಗು ಪ್ರದೇಶದ ಜಮೀನುಗಳಲ್ಲಿ ಬೆಳೆಗಳೆಲ್ಲ ಜಲಾವೃತವಾಗಿವೆ. ಜಲಾವೃತಗೊಂಡ ಮಾರ್ಗಗಳಲ್ಲಿ ರೈತರು ತಮ್ಮ ಜಮೀನುಗಳಿಗೆ ಹೋಗಲಾಗುತ್ತಿಲ್ಲ.

ಮಾನ್ವಿ ತಾಲ್ಲೂಕಿನ ಚೀಕಲಪರ್ವಿಯಲ್ಲಿ ಕಾಳುಕಟ್ಟಿದ್ದ ಭತ್ತಕ್ಕೆ, ಬಿಸಿಲು ವಾತಾವರಣ ಅಗತ್ಯವಿತ್ತು. ಆದರೆ ಮೋಡಕವಿದ ವಾತಾವರಣ ಮತ್ತು ಅಧಿಕ ಮಳೆ ಕಾರಣ ಭತ್ತವು ನೆಲಕ್ಕೆ ಒರಗಿದೆ. ಭತ್ತ ಬೆಳೆಯಲು ಸಾವಿರಾರು ರೂಪಾಯಿ ವೆಚ್ಚ ಮಾಡಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಿಂಗಸುಗೂರು ತಾಲ್ಲೂಕಿನ ಯಲಗಟ್ಟಾ ಗ್ರಾಮದಲ್ಲಿ 31 ಮನೆಗಳು ಕುಸಿದಿವೆ. ಯಾವುದೇ ಜೀವಹಾನಿಯಾಗಿಲ್ಲ.

18 ಮಿಲಿಮೀಟರ್‌ ಮಳೆ: ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನವರೆಗೂ ಜಿಲ್ಲೆಯಲ್ಲಿ ಸರಾಸರಿ 18 ಮಿಲಿಮೀಟರ್‌ ಮಳೆ ಸುರಿದಿದೆ. ವಾಡಿಕೆ ಮಳೆ 5 ಮಿಲಿಮೀಟರ್‌ಗಿಂತ ಶೇ 267 ರಷ್ಟು ಅಧಿಕ ಮಳೆ ಬಿದ್ದಿದೆ. ದೇವದುರ್ಗ ತಾಲ್ಲೂಕಿನಲ್ಲಿ 21 , ಲಿಂಗಸುಗೂರು ತಾಲ್ಲೂಕಿನಲ್ಲಿ 13, ಮಾನ್ವಿ ತಾಲ್ಲೂಕಿನಲ್ಲಿ 13, ರಾಯಚೂರು ತಾಲ್ಲೂಕಿನಲ್ಲಿ 22, ಸಿಂಧನೂರು ತಾಲ್ಲೂಕಿನಲ್ಲಿ 18, ಮಸ್ಕಿ ತಾಲ್ಲೂಕಿನಲ್ಲಿ 18 ಹಾಗೂ ಸಿರವಾರ ತಾಲ್ಲೂಕಿನಲ್ಲಿ 17 ಮಿಲಿಮೀಟರ್‌ ಮಳೆಯಾಗಿದೆ. ರಾಯಚೂರು ತಾಲ್ಲೂಕಿನಲ್ಲಿ ಚಂದ್ರಬಂಡಾ ಹೋಬಳಿಯಲ್ಲಿ ಅತಿಹೆಚ್ಚು 31 ಮಿಲಿಮೀಟರ್‌ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT