ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ರಾಂತಿಯಿಂದ ಕಾರ್ಮಿಕರ ವಿಮೋಚನೆ’

ಪ್ರಥಮ ಜಿಲ್ಲಾಮಟ್ಟದ ಎಐಟಿಯುಸಿ ಕಾರ್ಮಿಕರ ಸಮ್ಮೇಳನದ ಬಹಿರಂಗ ಸಭೆ
Last Updated 23 ನವೆಂಬರ್ 2019, 13:47 IST
ಅಕ್ಷರ ಗಾತ್ರ

ರಾಯಚೂರು:ದೇಶವು ಬಂಡವಾಳಶಾಹಿಗಳ ಕೈಯಲ್ಲಿದೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಬಂಡವಾಳಗಾರರಾದ ಅದಾನಿ, ಅಂಬಾನಿ, ಟಾಟಾ, ಬಿರ್ಲಾ ಅವರಂಥ ಉದ್ಯಮಿಗಳ ಸೇವೆ ಮಾಡುತ್ತಾರೆ ಎಂದು ಎಸ್‌ಯುಸಿಐ–ಕಮ್ಯೂನಿಸ್ಟ್‌ ರಾಜ್ಯ ಸಮಿತಿ ಸದಸ್ಯ ಎಚ್.ವಿ.ದಿವಾಕರ್ ಹೇಳಿದರು.

ನಗರದ ಟಿಪ್ಪು ಸುಲ್ತಾನ್ ಗಾರ್ಡನ್‌ನಲ್ಲಿ ಎಐಯುಟಿಯುಸಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಥಮ ಜಿಲ್ಲಾ ಮಟ್ಟದ ಕಾರ್ಮಿಕ ಸಮ್ಮೇಳನದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಸಾಮಾನ್ಯ ಜನರು ಮಾತ್ರ ಕಷ್ಟಗಳನ್ನು ಅನುಭವಿಸಬೇಕಾಗಿದೆ. ಬಂಡವಾಳಗಾರರು ಕುಬೇರರಾದರೆ, ಜನರು ಭಿಕಾರಿಗಳಾಗಬೇಕಾಗಿದೆ. 1917ರಲ್ಲಿ ರೋಗಿಷ್ಟ ದೇಶ ರಷ್ಯಾದಲ್ಲಿ ಲೆನಿನ್ ಅವರ ನೇತೃತ್ವದಲ್ಲಿ ಕ್ರಾಂತಿಯಾದ 10 ವರ್ಷಗಳಲ್ಲಿ ಬಡತನ, ನಿರುದ್ಯೋಗ, ಭ್ರಷ್ಟಾಚಾರ, ವೇಶಾವಾಟಿಕೆಯನ್ನು ಸಂಪೂರ್ಣ ನಿವಾರಣೆ ಮಾಡಲಾಯಿತು ಎಂದರು.

ರಷ್ಯಾದಲ್ಲಿ ಮಾನವನಿಂದ ಮಾನವನ ಶೋಷಣೆ ಕೊನೆಗಾಣಿಸಲಾಯಿತು. ಭಾರತ ಸ್ವಾತಂತ್ರ್ಯ ಪಡೆದು 72 ವರ್ಷಗಳು ಕಳೆದರೂ ಜನರ ಶೋಷಣೆ ನಿಂತಿಲ್ಲ. ಇದಕ್ಕೆಲ್ಲ ಬಂಡವಾಳಶಾಹಿ ವ್ಯವಸ್ಥೆ ಕಾರಣವಾಗಿದ್ದು, ಇದನ್ನು ಕಿತ್ತು ಹಾಕಲು ಕಾರ್ಮಿಕರು ಏಕತೆಯಿಂದ ಹೋರಾಟ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ್ ಮಾತನಾಡಿ, ಬರೀ ಭಾಷಣದ ಮೂಲಕ ಅಧಿಕಾರಕ್ಕೆ ಬಂದ ಮೋದಿ ಸರ್ಕಾರವು ಈ ಮೊದಲು ಕಾರ್ಮಿಕರ ಪರ ಇದ್ದ ನೀತಿಗಳನ್ನು ಮಾಲೀಕರ ಪರ ತಿದ್ದುಪಡಿ ಮಾಡಿದ್ದಾರೆ. ಎಲ್ಲವನ್ನು ಖಾಸಗೀಕರಣ ಮಾಡುತ್ತಿದ್ದಾರೆ. ಸ್ವದೇಶಿ ಎಂದು ಹೇಳುತ್ತಾ ಎಲ್ಲಾ ಕಡೆ ಬಹುರಾಷ್ಟ್ರೀಯ ಕಂಪನಿಗಳನ್ನು ಬಂಡವಾಳ ಹೂಡಲು ಬಿಟ್ಟಿದ್ದಾರೆ ಎಂದರು.

ರೈಲ್ವೆ, ಬಿಎಸ್‌ಎನ್‌ಎಲ್, ವಿಮಾನಯಾನ ಖಾಸಗಿಯವರಿಗೆ ವಹಿಸಲಾಗುತ್ತದೆ. ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಜಾಗತೀಕರಣ, ಖಾಸಗೀಕರಣ ನೀತಿಗಳು ದೇಶವನ್ನು ದಿವಾಳಿ ಮಾಡುತ್ತಿವೆ. ದೇಶದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಪಕ್ಷಗಳು ಇದೇ ನೀತಿಗಳನ್ನು ಅನುಸರಿಸಿವೆ ಎಂದು ವಿವರಿಸಿದರು.

ಜೆಎನ್‌ಯು ವಿದ್ಯಾರ್ಥಿಗಳು ಭಾರಿ ಪ್ರಮಾಣದ ಶುಲ್ಕ ಏರಿಕೆಯ ವಿರುದ್ಧ ಹೋರಾಟ ಮಾಡಿದರೆ ಅವರ ಮೇಲೆ ಪೋಲಿಸರನ್ನು ಬಿಟ್ಟು ಲಾಠಿ ಚಾರ್ಜ್ ಮಾಡಿಸಲಾಗಿದೆ. ಅವರ ಮೇಲೆ ಕೇಸ್ ಹಾಕಲಾಗಿದೆ. ಬಡ-ಪ್ರತಿಭಾವಂತ ವಿದ್ಯಾರ್ಥಿಗಳು ಅಧ್ಯಯನ ಮಾಡುವ ಜೆಎನ್‌ಯು ಮುಚ್ಚುವ ಹುನ್ನಾರ ನಡೆಸಿದೆ. ಪ್ರಶ್ನೆ ಮಾಡುವವರನ್ನು ಹೋರಾಟ ಮಾಡುವವರನ್ನು ತುಳಿಯಲಾಗುತ್ತಿದೆ. ಇನ್ನೊಂದು ಕಡೆ ಜಾತಿ ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯಲಾಗುತ್ತಿದೆ ಎಂದು ತಿಳಿಸಿದರು.

ಯಾದಗಿರಿಯ ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ಸೋಮಶೇಖರ್ ಮಾತನಾಡಿ, ಆಶಾ, ಅಂಗನವಾಡಿ, ಬಿಸಿಯೂಟ, ಶಿಲ್ಪಾ, ರಾಯ್‌ಕೆಂ, ಹಾಸ್ಟೆಲ್, ಕೆಪಿಟಿಸಿಎಲ್ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಯಾಗಿಲ್ಲ. ಗೌರವ ಘನತೆಯಿಂದ ಜೀವನ ನಡೆಸುವಂತಹ ವೇತನ ಸರ್ಕಾರ ನೀಡಬೇಕು. ಕನಿಷ್ಠ ಮಾಸಿಕ ವೇತನ 21 ಸಾವಿರ ಜಾರಿಯಾಗಬೇಕು. ಅದಕ್ಕಾಗಿ ಎಐಯುಟಿಯುಸಿ ನಿರಂತರ ರಾಜಿ ರಹಿತ ಹೋರಾಟ ಬೆಳೆಸುತ್ತಿದೆ. ಸಂಘವನ್ನು ಬಲಪಡಿಸಲು ಪ್ರತಿಯೊಬ್ಬರು ಶ್ರಮಿಸುವಂತೆ ಕರೆ ನೀಡಿದರು.

ವೀರೇಶ್‌ ಎನ್.ಎಸ್. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ತಿರುಮಲರಾವ್ ಪ್ರಾಸ್ತವಿಕವಾಗಿ ಮಾತನಾಡಿದರು. ಮಹೇಶ್, ಅಣ್ಣಪ್ಪ, ಶಿವರಾಜ, ಮತ್ತು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT