ತುರ್ವಿಹಾಳ: ಆವರಣದಲ್ಲಿ ತೆರವಾದ ಕಟ್ಟಡಗಳ ನಿರುಪಯುಕ್ತ ಕಲ್ಲುಗಳ ರಾಶಿ, ಸುತ್ತಮುತ್ತ ಬೆಳೆದು ನಿಂತ ಮುಳ್ಳು ಗಿಡಗಳು, ಸ್ವಚ್ಛತೆಯ ಕೊರತೆ... ಇದು ಸಮೀಪದ ಕಲಮಂಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ.
ಈ ಶಾಲೆಯಲ್ಲಿ 1ರಿಂದ 7ನೇ ತರಗತಿಯ 240 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅಂದಾಜು 2 ಎಕರೆ 10 ಗುಂಟೆ ವಿಶಾಲವಾದ ಆಟದ ಮೈದಾನವಿದೆ. ಆದರೆ ಸ್ವಚ್ಛತೆ ಕೊರತೆಯಿಂದಾಗಿ ಕ್ರೀಡೆ ಹಾಗೂ ಶಾಲಾ ಚಟುವಟಿಕೆಗಳಿಗೆ ತೊಂದರೆ ಉಂಟಾಗಿದೆ ಎಂದು ಪಾಲಕರು ಆರೋಪಿಸಿದ್ದಾರೆ.
ಕಾಂಪೌಂಡ್ ಇಲ್ಲದ ಕಾರಣ ಆವರಣದಲ್ಲಿ ಸ್ಥಳೀಯರು ಮನೆ, ಹೋಟೆಲ್, ಡಬ್ಬಾ ಅಂಗಡಿ ಹಾಗೂ ಮೇವಿನ ಬಣವೆಗಳನ್ನು ಹಾಕುವ ಮೂಲಕ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದರು. 2021ರಲ್ಲಿ ಶಿಕ್ಷಣ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಅತಿಕ್ರಮಣ ತೆರವುಗೊಳಿಸಿದ್ದಾರೆ.
ಕಟ್ಟಡಗಳ ತೆರವುಗೊಳಿಸಿ 3 ವರ್ಷಗಳೇ ಕಳೆದರೂ ಶಾಲೆಯ ಪಕ್ಕದಲ್ಲಿ ಬಿದ್ದ ಕಲ್ಲುಗಳು, ಕಟ್ಟಿಗೆಗಳು, ನಿರುಪಯುಕ್ತ ವಸ್ತುಗಳು ಹಾಗೆಯೇ ಬಿದ್ದಿವೆ. ಮೈದಾನದ ಬಹುತೇಕ ಜಾಗವನ್ನು ಜಾಲಿ ಗಿಡಗಳು ಆಕ್ರಮಿಸಿಕೊಂಡಿದ್ದು ಮುಳ್ಳು ಗಿಡಗಳು ಶಾಲಾ ಕೊಠಡಿಗಳ ಒಳಗೆ ಚಾಚಿವೆ. ವಿಷ ಜಂತುಗಳ ಭಯದಲ್ಲಿ ಮಕ್ಕಳು ಪಾಠ ಕೇಳುವಂತಾಗಿದೆ.
‘ಸ್ವಚ್ಛತೆ ಕೊರತೆಯಿಂದ ಸೊಳ್ಳೆಗಳ ಕಾಟ ಹೆಚಿದ್ದು, ವಿದ್ಯಾರ್ಥಿಗಳು ಡೆಂಗಿ ಮತ್ತಿತರ ಸಾಂಕ್ರಾಮಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ’ ಎಂದು ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಬಾಷಾಸಾಬ್, ಗಂಗಾಧರ ಕಂದಕೂರು, ಶ್ಯಾಮಣ್ಣ ದೊಡ್ಡಮನಿ, ಶಶಿಕುಮಾರ ಕ್ಯಾರಿಹಾಳ ಆರೋಪಿಸಿದರು.
‘ಆವರಣದ ಸ್ವಚ್ಛತೆ ಹಾಗೂ ಕಾಂಪೌಂಡ್ ನಿರ್ಮಾಣ ಮಾಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಾಗೂ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಮಣ್ಣ ಬಡಿಗೇರ ದೂರಿದರು.
ಶಾಲೆಯ ಪಕ್ಕದಲ್ಲಿ ಬಿದ್ದಿರುವ ಕಲ್ಲುಗಳು ಹಾಗೂ ತ್ಯಾಜ್ಯ ವಸ್ತುಗಳು
ಶಾಲೆ ಮೈದಾನದ ಸ್ವಚ್ಛತೆ ಹಾಗೂ ತೆರವಾದ ಅಂಗಡಿ ಕಟ್ಟಡಗಳ ಸಾಮಗ್ರಿಗಳನ್ನು ಸ್ವಚ್ಛಗೊಳಿಸುವ ಸಲುವಾಗಿ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಶರಣಪ್ಪ ಪ್ರಭಾರ ಮುಖ್ಯಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಮಂಗಿ
ಶಾಲೆಯ ಸುತ್ತ ಸ್ವಚ್ಛತೆ ಇಲ್ಲದಿರುವುದು ಮಕ್ಕಳ ಕಲಿಕೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೂಡಲೇ ಮಕ್ಕಳಿಗೆ ಅನುಕೂಲವಾಗುವಂತೆ ಮೈದಾನ ಸ್ವಚ್ಛಗೊಳಿಸಬೇಕು.