ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳದಲ್ಲಿ ಸಾರ್ವಜನಿಕ ಶೌಚಾಲಯ ಕೊರತೆ: ಮೂತ್ರ ವಿಸರ್ಜನೆಗೆ ಪರದಾಡುವ ಪರಿಸ್ಥಿತಿ

Published 21 ಮಾರ್ಚ್ 2024, 6:32 IST
Last Updated 21 ಮಾರ್ಚ್ 2024, 6:32 IST
ಅಕ್ಷರ ಗಾತ್ರ

ಕವಿತಾಳ: ಪಟ್ಟಣದಲ್ಲಿ ಶೌಚಾಲಯ, ಮೂತ್ರಾಲಯ ಕೊರತೆಯಿಂದ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ವಿವಿಧ ಕೆಲಸ ಕಾರ್ಯಗಳಿಗಾಗಿ ಪಟ್ಟಣಕ್ಕೆ ಬರುವ ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಅಂದಾಜು 25 ರಿಂದ 30 ಸಾವಿರ ಜನ ಸಂಖ್ಯೆಯನ್ನು ಹೊಂದಿದ ಪಟ್ಟಣದ ವ್ಯಾಪ್ತಿಗೆ 52 ಹಳ್ಳಿಗಳು ಮತ್ತು19 ಕ್ಯಾಂಪ್‌ಗಳು ಬರುತ್ತವೆ. ಪಟ್ಟಣ ಪಂಚಾಯಿತಿ, ಸಮುದಾಯ ಆರೋಗ್ಯ ಕೇಂದ್ರ, ನೆಮ್ಮದಿ ಕೇಂದ್ರ, ಪೊಲೀಸ್ ಠಾಣೆ, ಶಾಲಾ ಕಾಲೇಜುಗಳು, ರೈತ ಸಂಪರ್ಕ ಕೇಂದ್ರ, ವಸತಿ ಶಾಲೆಗಳು ಸೇರಿದಂತೆ ಹಲವು ಪ್ರಮುಖ ಸರ್ಕಾರಿ ಕಚೇರಿಗಳಿವೆ.

ಸರ್ಕಾರಿ ಕಚೇರಿಗಳಿಗೆ ಹಾಗೂ ಮಾರುಕಟ್ಟೆಗೆ ಖರೀದಿಗಾಗಿ ಹಳ್ಳಿ ಮತ್ತು ಕ್ಯಾಂಪ್‌ಗಳಿಂದ ಬರುವ ಜನರು ಮೂತ್ರಾಲಯ ಸಮಸ್ಯೆಯಿಂದ ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಹಳೇ ಬಸ್ ನಿಲ್ದಾಣದ ಹತ್ತಿರವಿದ್ದ ಒಂದು ಶೌಚಾಲಯವನ್ನು ರಸ್ತೆ ನಿರ್ಮಾಣ ಸಂದರ್ಭದಲ್ಲಿ ತೆರವುಗೊಳಿಸಲಾಗಿದೆ. ಹೀಗಾಗಿ ಮೂತ್ರ ವಿಸರ್ಜನೆಗೆ 1 ಕಿ.ಮೀ.ದೂರದ ಪೆಟ್ರೋಲ್ ಬಂಕ್ ಮತ್ತು ಹೊಸ ಬಸ್ ನಿಲ್ದಾಣದ ಹತ್ತಿರ ಬಯಲು ಜಾಗ ಹುಡುಕಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.

ಬೈಕ್ ಸವಾರರು ಮತ್ತು ವಾಹನಗಳಲ್ಲಿ ತೆರಳುವವರು ಊರಿಂದ ಆಚೆಗೆ ವಾಹನ ನಿಲ್ಲಿಸಿ ನಿಸರ್ಗದ ಕರೆಗೆ ಓಗೊಡುತ್ತಾರೆ. ಪುರುಷರು ಎಲ್ಲೆಂದರಲ್ಲಿ ಚರಂಡಿ ಹತ್ತಿರ ಅಥವಾ ಗೋಡೆ ಮರೆಯಲ್ಲಿ ನಿಂತು ಮೂತ್ರ ಮಾಡುತ್ತಾರೆ. ಆದರೆ, ಹಳ್ಳಿಗಳಿಂದ ಬರುವ ಮಹಿಳೆಯರು, ಮಕ್ಕಳು, ರೋಗಿಗಳು ಮೂತ್ರ ವಿಸರ್ಜನೆಗೆ ಬಯಲು ಜಾಗ ಹುಡುಕಿಕೊಂಡು ಓಣಿಯ ಸಂಧಿಗೊಂದಿಗಳಲ್ಲಿ ಹೋಗುವಂತಾಗಿದೆ.

ವಿವಿಧ ಸಂಘ ಸಂಸ್ಥೆಗಳು ಮತ್ತು ಸ್ಥಳೀಯ ಮುಖಂಡರು ಶೌಚಾಲಯ ನಿರ್ಮಾಣ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಸ್ಥಳೀಯ ಆಡಳಿತ ಹಾಗೂ ಜನ ಪ್ರತಿನಿಧಿಗಳು ಸ್ಪಂದಿಸದಿರುವುದು ಅಚ್ಚರಿ ಮೂಡಿಸಿದೆ.

ಅಮರೇಶ ಕೊಟೇಕಲ್‌
ಅಮರೇಶ ಕೊಟೇಕಲ್‌
ಮೂತ್ರ ವಿಸರ್ಜನೆಗೆ ಪರದಾಡುವ ಪರಿಸ್ಥಿತಿ ಇದೆ. ಪುರುಷರು ಹೇಗೋ ನಿಭಾಯಿಸುತ್ತಾರೆ, ಮಹಿಳೆಯರ ಗೋಳು ಹೇಳತೀರದು. ಹಳೇ ಬಸ್‌ ನಿಲ್ದಾಣದ ಹತ್ತಿರ ಶೌಚಾಲಯ ನಿರ್ಮಾಣ ಮಾಡುವುದು ಅಗತ್ಯ
ಅಮರೇಶ ಕೊಟೇಕಲ್‌, ವಾರದ ಸಂತೆಗ ಬಂದ ವ್ಯಕ್ತಿ
ರವಿ ಎಸ್‌ ರಂಗಸುಭೆ
ರವಿ ಎಸ್‌ ರಂಗಸುಭೆ
ʼಜಾಗದ ಕೊರತೆ ಇದೆ. ಸ್ಥಳಾವಕಾಶ ಸಿಕ್ಕರೆ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು
ರವಿ ಎಸ್‌ ರಂಗಸುಭೆ, ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT