ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಮಾರುಕಟ್ಟೆಯಲ್ಲಿ ನಿಲ್ಲದ ನುಗ್ಗೆಕಾಯಿ ದರ ಓಟ

Published 19 ನವೆಂಬರ್ 2023, 6:00 IST
Last Updated 19 ನವೆಂಬರ್ 2023, 6:00 IST
ಅಕ್ಷರ ಗಾತ್ರ

ರಾಯಚೂರು: ದೀಪಾವಳಿ ಹಬ್ಬ ಮುಗಿದು ಮಾರುಕಟ್ಟೆಯಲ್ಲಿನ ಖರೀದಿ ಅಬ್ಬರ ಕಡಿಮೆಯಾಗಿದೆ. ಬಹುತೇಕ ತರಕಾರಿ ಬೆಲೆ ಸ್ಥಿರವಾಗಿದೆ. ಆದರೆ, ಈರುಳ್ಳಿ, ಬೆಳ್ಳುಳ್ಳಿ ಹಾಗೂ ನುಗ್ಗೆಕಾಯಿಯ ಓಟ ನಿಂತಿಲ್ಲ.

ಈರುಳ್ಳಿ ದರ ಮತ್ತೆ ಪ್ರತಿ ಕೆ.ಜಿಗೆ ₹ 10 ಹೆಚ್ಚಾಗಿದೆ. ಈರುಳ್ಳಿ ರಫ್ತಿಗೆ ನಿರ್ಬಂಧ ಹೇರಿರುವ ಕಾರಣ ಬೆಲೆ ಮತ್ತೆ ಹೆಚ್ಚಳವಾಗುವ ಸಾಧ್ಯತೆ ಕಡಿಮೆ. ಡಿಸೆಂಬರ್‌ ಅಂತ್ಯದವರೆಗೂ ಇದೇ ಬೆಲೆ ಮುಂದುವರಿಯಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈರುಳ್ಳಿಯ ಪರ್ಯಾಯ ಸ್ಥಾನ ಪಡೆದಿರುವ ಬೆಳ್ಳುಳ್ಳಿ ಬೆಲೆಯೂ ಗಗನಕ್ಕೆ ಏರಿದೆ. ಗ್ರಾಹಕರು ಬೆಳ್ಳುಳ್ಳಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹೋಟೆಲ್‌, ರೆಸ್ಟೋರಂಟ್‌ ಹಾಗೂ ಖಾನಾವಳಿಯವರು ಊಟದಲ್ಲಿನ ಸ್ವಾದ ಕಡಿಮೆಯಾಗದಿರಲಿ ಎನ್ನುವ ಒಂದೇ ಕಾರಣಕ್ಕೆ ಅನಿವಾರ್ಯವಾಗಿ ಖರೀದಿ ಮಾಡುತ್ತಿದ್ದಾರೆ.

ಮೆಣಸಿನಕಾಯಿ ಬೆಲೆಯೂ ಅಧಿಕವಾಗಿದೆ. ಕೆಲ ಪ್ರದೇಶಗಳಲ್ಲಿ ಮೆಣಸಿನಕಾಯಿಗೆ ರೋಗ ಬಂದ ಕಾರಣ ಇಳುವರಿ ಕಡಿಮೆಯಾಗಿದೆ. ಬೇಡಿಕೆ ಅಧಿಕವಿದ್ದು, ಪೂರೈಕೆ ಕಡಿಮೆಯಾಗಿರುವುದರಿಂದ ಬೆಲೆ ಏರಿದೆ.

‌ನುಗ್ಗೇಕಾಯಿ ಬೆಲೆ ಗಗನಕ್ಕೇರಿದೆ. ಗ್ರಾಹಕರಲ್ಲಿ ಅಚ್ಚರಿ ಮೂಡಿಸಿದೆ. ಬೀನ್ಸ್ ಬೆಲೆ ಕೊಂಚ ಹೆಚ್ಚಾಗಿದೆ. ಮಳೆಯ ಅಭಾವದ ಕಾರಣ ಸಹಜವಾಗಿಯೇ ಸಬ್ಬಸಗಿ, ಮೆಂತೆ, ಪಾಲಕ್ ಹಾಗೂ ಕೊತ್ತಂಬರಿ ಬೆಲೆ ಹೆಚ್ಚಾಗಿದೆ. ಬದನೆಕಾಯಿ ಬೆಲೆ ಸ್ವಲ್ಪ ಇಳಿದಿದೆ.

‌ಆಲೂಗಡ್ಡೆ, ಎಲೆಕೋಸು, ಹೂಕೋಸು, ಗಜ್ಜರಿ, ಬೀಟ್‌ರೂಟ್‌, ಟೊಮೆಟೊ, ಹಿರೇಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಡೊಣ ಮೆಣಸಿನಕಾಯಿ, ತುಪ್ಪದ ಹಿರೇಕಾಯಿ, ಚೌಳೆಕಾಯಿ, ಸೌತೆಕಾಯಿ ಹಾಗೂ ಕರಿಬೇವು ಬೆಲೆ ಸ್ಥಿರವಾಗಿದೆ.

ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಗೆಣಸು, ಕೊತ್ತಂಬರಿ ಹಾಗೂ ಮೆಂತೆ ಸೊಪ್ಪು ಮಾರುಕಟ್ಟೆಗೆ ಬಂದಿದೆ. ಹೀರೆಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಡೊಣ ಮೆಣಸಿನಕಾಯಿ, ತುಪ್ಪದ ಹೀರೆಕಾಯಿ, ಚೌಳೆಕಾಯಿ, ಸೌತೆಕಾಯಿ ಹೈದರಾಬಾದ್‌ನಿಂದ ಬಂದಿದೆ. ನಾಸಿಕ್‌ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ ಎಂದು ತರಕಾರಿ ವ್ಯಾಪಾರಿ ಮಹಮ್ಮದ್‌ ಜಾಕೀರ್‌ ಹೇಳುತ್ತಾರೆ.

[object Object]

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT