ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ ಕ್ಷೇತ್ರದಲ್ಲಿ ಹೊರಜಿಲ್ಲೆ ಕಾರ್ಯಕರ್ತರ ಪ್ರಚಾರ ಭರಾಟೆ

ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಪ್ರಚಾರ ಭರಾಟೆ
Last Updated 8 ಏಪ್ರಿಲ್ 2021, 13:42 IST
ಅಕ್ಷರ ಗಾತ್ರ

ಮಸ್ಕಿ (ರಾಯಚೂರು): ಮಸ್ಕಿ ವಿಧಾನಸಭೆ ಕ್ಷೇತ್ರದಾದ್ಯಂತ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಹೊರಜಿಲ್ಲೆಗಳಿಂದ ಕಾರ್ಯಕರ್ತರ ತಂಡಗಳು ಬಂದಿವೆ.

ಮಸ್ಕಿ ಪಟ್ಟಣ, ಮುದಗಲ್‌ ಪಟ್ಟಣ, ಸಿಂಧನೂರು, ಲಿಂಗಸುಗೂರು ಹಾಗೂ ರಾಯಚೂರಿನಲ್ಲಿ ವಾಸ್ತವ್ಯ ಉಳಿದು ಸ್ವಯಂ ಸ್ಫೂರ್ತಿಯಿಂದ ಕ್ಷೇತ್ರದಾದ್ಯಂತ ಪ್ರಚಾರ ಮಾಡುತ್ತಿದ್ದಾರೆ. ಮುಖ್ಯವಾಗಿ ಬಹಿರಂಗ ಸಭೆ ಮತ್ತು ಮತಯಾಚನೆಗೆ ಬರುವ ರಾಜ್ಯಮಟ್ಟದ ನಾಯಕರಿಗಾಗಿ ಪೂರ್ವಸಿದ್ಧತೆ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಉಪಚುನಾವಣೆ ಘೋಷಣೆಯಾದ ಮೇಲೆ ಕಾಂಗ್ರೆಸ್‌ನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಹಾಗೂ ಬಿಜೆಪಿಯಿಂದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಅವರು ಉಸ್ತುವಾರಿ ವಹಿಸಿಕೊಂಡು ಗೆಲುವಿನ ರಣತಂತ್ರ ಹೆಣೆಯುತ್ತಿದ್ದಾರೆ. ಇಬ್ಬರೂ ನಾಯಕರು ಸಿಂಧನೂರು ನಗರವನ್ನು ಯೋಜನಾ ಕೇಂದ್ರ ಮಾಡಿಕೊಂಡಿದ್ದು, ಪ್ರಚಾರದ ಕಾರ್ಯವೈಖರಿ ಸೂಕ್ಷ್ಮವಾಗಿ ಜಾರಿಗೊಳಿಸುತ್ತಿದ್ದಾರೆ.

ರಾಜ್ಯದ ಪ್ರಮುಖ ಕಾಂಗ್ರೆಸ್‌ ಶಾಸಕರಿಗೆ ಮಸ್ಕಿಯಲ್ಲಿ ತಲಾ ಒಂದು ಗ್ರಾಮ ಪಂಚಾಯಿತಿ ಮಟ್ಟದ ಪ್ರಚಾರ ಹಾಗೂ ಇತರೆ ಜವಾಬ್ದಾರಿ ವಹಿಸಲಾಗಿದೆ. ಬಿಜೆಪಿಯವರು ಮತಯಾಚನೆಯನ್ನು ಬೂತ್‌ಮಟ್ಟಕ್ಕೆ ವಿಕೇಂದ್ರೀಕರಣ ಮಾಡಿಕೊಂಡಿದ್ದು, ಬೂತ್‌ ಅಧ್ಯಕ್ಷ ಮತ್ತು ಕಾರ್ಯಕರ್ತರಿಗೆ ಜವಾಬ್ದಾರಿ ವಹಿಸಿದ್ದಾರೆ. ಪ್ರತಿಮನೆ ಮತ್ತು ಪ್ರತಿ ಮತದಾರನ ಮನಸ್ಥಿತಿ ಅರ್ಥ ಮಾಡಿಕೊಂಡು ಬಿಜೆಪಿಗೇ ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು ಎನ್ನುವ ಸಂದೇಶವನ್ನು ಕಾರ್ಯಕರ್ತರಿಗೆ ನೀಡಲಾಗಿದೆ.

ಬಿಜೆಪಿಯವರ ಕಾರ್ಯತಂತ್ರ ಅರ್ಥಮಾಡಿಕೊಂಡಿರುವ ಕಾಂಗ್ರೆಸ್‌ ನಾಯಕರು, ಮತದಾರರ ಮೊನವೊಲಿಸುವ ಜೊತೆಗೆ ಅವರ ಮನಸ್ಸು ಬದಲಾವಣೆ ಆಗದಂತೆ ಕಟ್ಟೆಚ್ಚರ ವಹಿಸುವುದಕ್ಕೆ ತಮ್ಮ ಕಾರ್ಯಕರ್ತರಿಗೆ ಸಂದೇಶ ಕೊಡುತ್ತಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ಪರವಾಗಿರುವ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಆಯಾ ಸಮುದಾಯಗಳ ಮುಖಂಡರ ಸಭೆಗಳನ್ನು ಆಯೋಜಿಸಲಾಗುತ್ತಿದೆ.

ಮತದಾನದ ದಿನ ಏಪ್ರಿಲ್‌ 17 ಸಮೀಪವಾಗುತ್ತಿದ್ದಂತೆ ಹೊರಜಿಲ್ಲೆಯಿಂದ ಬರುವ ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರ ಸಂಖ್ಯೆ ಎರಡೂ ಪಕ್ಷಗಳಲ್ಲೂ ಹೆಚ್ಚಳವಾಗುತ್ತಿದೆ. ಬಿಜೆಪಿ ಪರ ಪ್ರಚಾರಕ್ಕೆ 600 ಕ್ಕೂ ಹೆಚ್ಚು ಕಾರ್ಯಕರ್ತರು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಮತ್ತು ಬಿಜೆಪಿ ಮಸ್ಕಿ ಉಪಚುನಾವಣೆಯನ್ನು ಪ್ರತಿಷ್ಠೆ ಮಾಡಿಕೊಂಡಿದ್ದು, ಇದಕ್ಕೆ ಪೂರಕವಾಗಿ ಕೆಲಸ ಮಾಡುವುದಕ್ಕೆ ತಮ್ಮ ಕಾರ್ಯಕರ್ತರು, ಜನಪ್ರತಿನಿಧಿಗಳನ್ನು ಮಸ್ಕಿ ಕ್ಷೇತ್ರಕ್ಕೆ ಆಹ್ವಾನಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT