ಗುರುವಾರ , ನವೆಂಬರ್ 14, 2019
19 °C
ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ

ಸ್ಥಳಾಂತರಿಸುವ ಗ್ರಾಮಗಳ ವರದಿ ಕೊಡಿ

Published:
Updated:
Prajavani

ರಾಯಚೂರು: ‘ಜಿಲ್ಲೆಯಲ್ಲಿ ಪ್ರವಾಹದಿಂದ ತೊಂದರೆ ಅನುಭವಿಸುತ್ತಿರುವ ಗ್ರಾಮಗಳನ್ನು ಸ್ಥಳಾಂತರಿಸುವ ವಿಷಯದ ಬಗ್ಗೆ ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಿ, ವರದಿಯನ್ನು ಕಳುಹಿಸಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಜಿಲ್ಲಾಧಿಕಾರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ರಾಯಚೂರು ತಾಲ್ಲೂಕಿನ ಗುರ್ಜಾಪುರ ಗ್ರಾಮ ಸ್ಥಳಾಂತರಕ್ಕೆ ಹೊಸದಾಗಿ ಭೂಮಿ ಖರೀದಿಸುವುದಕ್ಕೆ ಸಮಯಾವಕಾಶ ಹಿಡಿಯುತ್ತದೆ. ಸದ್ಯಕ್ಕೆ ಲಭ್ಯವಿರುವ 29 ಎಕರೆ ಜಮೀನು ಮತ್ತು ಅದಕ್ಕೆ ಹೊಂದಿಕೊಂಡ ಜಮೀನು ಖರೀದಿಸಿಕೊಂಡು ಮನೆಗಳನ್ನು ನಿರ್ಮಾಣ ಮಾಡುವುದಕ್ಕೆ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಬೇಕು’ ಎಂದು ತಿಳಿಸಿದರು.

ಬೆಳೆಹಾನಿ ಆಗಿರುವ ರೈತರ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಇನ್ನೊಂದು ವಾರದಲ್ಲಿ ಪರಿಹಾರ ಜಮೆಯಾಗಲಿದೆ. ಮಾನ್ವಿ ಹಾಗೂ ಲಿಂಗಸುಗೂರು ತಾಲ್ಲೂಕುಗಳಲ್ಲಿ ಕುರಿ ಮೃತಪಟ್ಟಿದ್ದರೂ ಮಾಹಿತಿ ನೀಡದ ಪಶು ಸಂಗೋಪನೆ ಮತ್ತು ಪಶುಪಾಲನಾ ಅಧಿಕಾರಿಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಬೇಕು ಎಂದರು.

ಯೂರಿಯಾ ಕೊರತೆ: ‘ಮುಂಗಾರು ಅವಧಿಯಲ್ಲಿ ಬೇಡಿಕೆ ಸಲ್ಲಿಸಿದ ಪ್ರಮಾಣದಕ್ಕಿಂತ ಸ್ವಲ್ಪ ಕಡಿಮೆ ಯೂರಿಯಾ ಬಂದಿದೆ. ಯಾವುದೇ ತೊಂದರೆ ಆಗಿಲ್ಲ. ಹಿಂಗಾರಿಗೆ ಬೇಕಾಗುವಷ್ಟು ರಸಗೊಬ್ಬರ ಪೂರೈಕೆ ಆಗಿದೆ. ದಾಸ್ತಾನು ಕೂಡಾ ಮಾಡಿಕೊಳ್ಳಲಾಗಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಚೇತನಾ ಪಾಟೀಲ ಸಭೆಗೆ ಮಾಹಿತಿ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಪಾಟೀಲ ಇಟಗಿ ಮಾತನಾಡಿ, ರೈತರು ಯೂರಿಯಾ ಖರೀದಿಗಾಗಿ ಅಲೆದಾಡುತ್ತಿದ್ದಾರೆ. ಹಿಂಗಾರು ಬಿತ್ತನೆ ಇದರಿಂದ ಕುಂಠಿತವಾಗುತ್ತಿದೆ ಎಂದು ಹೇಳಿ ಸಭೆ ಗಮನ ಸೆಳೆದರು.

ವಿದ್ಯುತ್‌ ಉತ್ಪಾದಿಸಿದರೂ ಕತ್ತಲೆ: ರಾಜ್ಯಕ್ಕೆ ಬೇಕಾಗುವಷ್ಟು ವಿದ್ಯುತ್‌ನಲ್ಲಿ ಶೇ 40 ರಷ್ಟು ವಿದ್ಯುತ್‌ ರಾಯಚೂರಿನಲ್ಲಿ ಉತ್ಪಾದಿಸುತ್ತಿದ್ದರೂ ಜಿಲ್ಲೆ ಮಾತ್ರ ಕತ್ತಲೆಯಲ್ಲಿ ಮುಳುಗಿದೆ ಎನ್ನುವ ವಿಷಯ ಸಭೆಯಲ್ಲಿ ಪ್ರಸ್ತಾಪವಾಯಿತು.

‘ನಿರಂತರ ವಿದ್ಯುತ್‌ ಪೂರೈಕೆಗಾಗಿ ಗೊತ್ತುವಳಿ ಮಂಡಿಸಬೇಕು’ ಎಂದು ಉಸ್ತುವಾರಿ ಸಚಿವರು ನೀಡಿದ ಸಲಹೆಯನ್ನು ಎಲ್ಲ ಶಾಸಕರು ಬೆಂಬಲಿಸಿದರು.

ಶಾಸಕ ಬಸನಗೌಡ ದದ್ದಲ ಮಾತನಾಡಿ, ಜಿಲ್ಲೆಯಲ್ಲಿ ಆರ್‌ಟಿಪಿಎಸ್, ವೈಟಿಪಿಎಸ್ ಸೇರಿದಂತೆ ಜಿಲ್ಲೆಯಲ್ಲಿ 42 ಕೈಗಾರಿಕೆಗಳಿವೆ. ಅವೆಲ್ಲ ಜಿಲ್ಲೆಯ ಅಭಿವೃದ್ಧಿಗಾಗಿ ಸಾಮಾಜಿಕ ಹೊಣೆಗಾರಿಕೆ ಕೆಲಸಗಳನ್ನು ಮಾಡುತ್ತಿಲ್ಲ. ಸುತ್ತಮುತ್ತಲಿನ ಗ್ರಾಮಗಳಿಗೆ ಸಾಕಷ್ಟು ಹಾನಿಯಾಗುತ್ತಿದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿ ಏನು ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಶಾಸಕ ಡಾ.ಶಿವರಾಜ್ ಪಾಟೀಲ ಇದಕ್ಕೆ ದನಿಗೂಡಿಸಿ ಮಾತನಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಲಿನ್ಯ ನಿಯಂತ್ರಣಾಧಿಕಾರಿ ನಟೇಶ, ಮಾಲಿನ್ಯ ಪ್ರಮಾಣವನ್ನು ಡಿಜಿಟಲ್ ಯಂತ್ರಗಳಲ್ಲಿ ಅಳೆಯಲಾಗುತ್ತಿದ್ದು, ಇದನ್ನು ಮೇಲಿಮ ಅಧಿಕಾರಿಗಳೆ ಗಮನಿಸುತ್ತಾರೆ ಎಂದರು.

‘ಸ್ಥಳೀಯವಾಗಿ ನೀವು ಕ್ರಮ ಕೈಗೊಂಡಿದ್ದೀರಿ’ ಎಂದು ಶಾಸಕರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಎಂಟು ಮನೆಗಳಿಗೆ ಹಾನಿ: ಜಿಲ್ಲೆಯಲ್ಲಾದ ಪ್ರವಾಹ ಹಾನಿ ಬಗ್ಗೆ ಮಾತನಾಡಿದ ಸಹಾಯಕ ಆಯುಕ್ತ ಸಂತೋಷ, ಪ್ರವಾಹದಿಂದ 13,920 ಹೆಕ್ಟೇರ್ ಬೆಳೆ ನಷ್ಟವಾಗಿದೆ. ಶೀಲಹಳ್ಳಿ, ಗೂಗಲ್ ಸೇತುವೆ ಹೊರತುಪಡಿಸಿ ಆರು ಸೇತುವೆಗಳ ದುರಸ್ತಿ ಮಾಡಲಾಗುತ್ತಿದೆ. ಶೀಲಹಳ್ಳಿ ಸೇತುವೆಗೆ ದುರಸ್ತಿಗೆ ವಿಶೇಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 73 ಮನೆಗಳಿಗೆ ಹಾನಿಯಾಗಿದೆ, ಎನ್‌ಡಿಆರ್‌ಎಫ್ ನಿಯಮದನ್ವಯ ಸಂತ್ರಸ್ತರ ಖಾತೆಗೆ ಪರಿಹಾರ ಜಮಾ ಮಾಡಲಾಗುತ್ತಿದೆ. ತಾತ್ಕಾಲಿಕವಾಗಿ ಶೆಡ್ ನಿರ್ಮಾಣಕ್ಕಾಗಿ ₹25 ಸಾವಿರ ನೀಡಲಾಗಿದೆ ಎಂದರು.

ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ, ಶೆಡ್ ನಿರ್ಮಿಸಲು ₹25 ಸಾವಿರ ನೀಡಿದ್ದಾರೆ. ಇನ್ನುಳಿದ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕೋರಿದರು.

ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ಸಂಸದರಾದ ಸಂಗಣ್ಣ ಕರಡಿ, ರಾಜಾ ಅಮರೇಶ್ವರ ನಾಯಕ, ವಿಧಾನ ಪರಿಷತ್‌ ಸದಸ್ಯರಾದ ಬಸವರಾಜ ಪಾಟೀಲ ಇಟಗಿ, ಎನ್‌.ಎಸ್‌. ಬೋಸರಾಜು, ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತರೆಡ್ಡಿ,  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಇದ್ದರು.  

ಪ್ರತಿಕ್ರಿಯಿಸಿ (+)