ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ, ಶೇ 74.97 ರಷ್ಟು ಮತದಾನ

ವಿಧಾನ ಪರಿಷತ್‌ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ
Last Updated 28 ಅಕ್ಟೋಬರ್ 2020, 15:58 IST
ಅಕ್ಷರ ಗಾತ್ರ

ರಾಯಚೂರು: ವಿಧಾನ ಪರಿಷತ್‌ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗಾಗಿ ಬುಧವಾರ ಮತದಾನ ಶಾಂತಿಯುತವಾಗಿ ಮುಗಿದಿದ್ದು, ಒಟ್ಟು ಶೇ 74.97 ರಷ್ಟು ಮತದಾನವಾಗಿದೆ.

ಜಿಲ್ಲೆಯಾದ್ಯಂತ ಒಟ್ಟು 17 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮಸ್ಕಿ ತಾಲ್ಲೂಕಿನಲ್ಲಿ ಅತಿಹೆಚ್ಚು ಮತದಾನವಾಗಿದ್ದರೆ, ಜಿಲ್ಲಾ ಕೇಂದ್ರ ರಾಯಚೂರಿನಲ್ಲಿ ಅತಿಕಡಿಮೆ ಮತಗಳು ಚಲಾವಣೆ ಆಗಿವೆ.

ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ್‌ ನಿಕ್ಕಂ, ತಹಶೀಲ್ದಾರ್‌ ಡಾ.ಹಂಪಣ್ಣ ಸಜ್ಜನ್‌, ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರು ಪ್ರತ್ಯೇಕವಾಗಿ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ನಿರ್ವಹಣೆಯನ್ನು ಪರಿಶೀಲಿಸಿದರು. ಗುರುತಿನ ಚೀಟಿ ಇಲ್ಲದ, ಮತದಾರರಲ್ಲದವರನ್ನು ಮತಗಟ್ಟೆಯೊಳಗೆ ಪ್ರವೇಶಿಸಲು ಅವಕಾಶ ನೀಡದಂತೆ ಸೂಚನೆ ನೀಡಿದರು.

ಪ್ರತಿ ಮತಗಟ್ಟೆಗಳಲ್ಲಿ ಪೊಲೀಸರು ಬಂದೋಬಸ್ತ್‌ ಏರ್ಪಡಿಸಿದ್ದರು. ಅನಗತ್ಯವಾಗಿ ಜನರು ಮತಗಟ್ಟೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಮತದಾನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಸಿಬ್ಬಂದಿಯು ಮಾಸ್ಕ್‌ ಹಾಗೂ ಗ್ಲಾಸ್‌ ಧರಿಸಿದ್ದರು. ಕೈಗವುಸು ಧರಿಸಿ, ಸ್ಯಾನಿಟೈಜರ್‌ ಬಳಕೆಯೊಂದಿಗೆ ದಿನವಿಡೀ ಕಾರ್ಯನಿರ್ವಹಿಸಿದರು.

ಮತಗಟ್ಟೆಗೆ ಬರುವ ಮತದಾರರಿಗೆ ಆಶಾ ಕಾರ್ಯಕರ್ತೆಯರು ಥರ್ಮಾಸ್ಕ್ಯಾನ್‌ ಮಾಡುತ್ತಿರುವುದು ಕಂಡುಬಂತು. ಕೋವಿಡ್‌ ಸೋಂಕು ತಡೆಗಾಗಿ ಮತಗಟ್ಟೆಗಳಲ್ಲಿ ಸಾಕಷ್ಟು ಮುನ್ನಚ್ಚರಿಕೆ ವಹಿಸಲಾಗಿತ್ತು. ಗುರುತಿನ ಚೀಟಿ ಆಧರಿಸಿ ಮತದಾನಕ್ಕೆ ಅವಕಾಶ ನೀಡಲಾಯಿತು.
ಜಿಲ್ಲೆಯಲ್ಲಿ 17 ಮತಗಟ್ಟೆಗಳ ಪೈಕಿ 7 ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿತ್ತು. 2 ಅತಿಸೂಕ್ಷ್ಮ ಹಾಗೂ 8 ಸಾಮಾನ್ಯ ಮತಗಟ್ಟೆಗಳಿದ್ದವು. ಪ್ರತಿಯೊಂದು ಮತಗಟ್ಟೆಯಲ್ಲಿ ವಿಡಿಯೋ ಚಿತ್ರೀಕರಣದ ಮೂಲಕ ನಿಗಾ ವಹಿಸುವ ವ್ಯವಸ್ಥೆ ಮಾಡಲಾಗಿತ್ತು. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಬೆಳಿಗ್ಗೆ 8 ಗಂಟೆಗೆ ಎಲ್ಲ ಮತಗಟ್ಟೆಯಲ್ಲೂ ಮತದಾನ ಆರಂಭವಾಯಿತು. ಆರಂಭದಲ್ಲಿ ಮಂದವಾಗಿದ್ದ ಮತದಾನ, ಮಧ್ಯಾಹ್ನಕ್ಕೆ ಶೇ 50 ರಷ್ಟಾಗಿತ್ತು. ಆನಂತರ ಮತದಾನ ಪ್ರಮಾಣ ಏರಿಕೆ ಆಯಿತು. ಶಿಕ್ಷಕರು ಶಿಸ್ತಿನಿಂದ ಪರಸ್ಪರ ಅಂತರ ಕಾಯ್ದುಕೊಂಡು ಮತಗಟ್ಟೆ ಪ್ರವೇಶಿಸಿ ಸರದಿಯಲ್ಲಿ ಮತ ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT